ಬೆಂಗಳೂರು: ದಲಿತರ ಕುರಿತು ತಮಗೆ ಬದ್ಧತೆ, ಸಾಮಾಜಿಕ ಕಳಕಳಿ ಇದ್ದರೆ ದಲಿತ ಸಚಿವರು ತಕ್ಷಣ ರಾಜೀನಾಮೆ ಕೊಡಬೇಕು. ನಿಮಗೆ ಮಾನವೀಯತೆ ಇದ್ದರೆ, ಮೀಸಲು ಕ್ಷೇತ್ರದಿಂದ ಗೆದ್ದಿದ್ದರೆ 54 ಶಾಸಕರು ಮುಂದಿನ ವಿಧಾನಸಭಾ ಕಲಾಪಗಳಲ್ಲಿ ಭಾಗವಹಿಸಬಾರದು; ರಾಜೀನಾಮೆ ಕೊಡಿ ಎಂದು ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಅವರು ಆಗ್ರಹಿಸಿದರು.
ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು. ಪರಿಶಿಷ್ಟ ಜಾತಿ, ಪಂಗಡದ 54 ಜನ ಶಾಸಕರು ಇದ್ದಾರೆ. ಶಿಕ್ಷಣದಲ್ಲಿ ಕ್ರಾಂತಿ ಆಗಿದೆ. ಆದರೆ, ಈ 54 ಜನರು ಮಾತನಾಡುತ್ತಿಲ್ಲ. ಮಂತ್ರಿಗಳು ಸಚಿವ ಸಂಪುಟ ಸಭೆಯಲ್ಲಿ ಮಾತನಾಡುವುದಿಲ್ಲ. ಯಾಕೆ ನೀವು ಸಚಿವ ಸ್ಥಾನದಲ್ಲಿ ಇದ್ದೀರಿ ಕೇಳಿದರು. ನಾವು ಹೋರಾಟದ ಕಡೆ ಹೆಜ್ಜೆ ಇಡಲಿದ್ದೇವೆ ಎಂದು ಪ್ರಕಟಿಸಿದರು. ರಾಜ್ಯದ ಮುಖ್ಯಮಂತ್ರಿಗಳೂ ರಾಜೀನಾಮೆ ನೀಡಲು ಒತ್ತಾಯಿಸಿದರು.
35 ವರ್ಷ ಹೋರಾಟ ಮಾಡಿದ ಮಾದಿಗರಿಗೆ ಸಿದ್ದರಾಮಯ್ಯನವರು ತಿರುಪತಿ ನಾಮ ಇಟ್ಟಿದ್ದಾರೆ ಎಂದರಲ್ಲದೇ, ರಾಜ್ಯದ ಇಡೀ ದಲಿತರಿಗೆ ಚೊಂಬು ಕೊಟ್ಟಿದ್ದಾರೆ ಎಂದು ಟೀಕಿಸಿದರು. ಒಳ ಮೀಸಲಾತಿ ವಿಚಾರದಲ್ಲಿ 101 ಜಾತಿಗೂ ಸಿದ್ದರಾಮಯ್ಯನವರು ಚೊಂಬು ಕೊಟ್ಟಿರುವುದಾಗಿ ದೂರಿದರು. ಉದ್ಯೋಗಾಕಾಂಕ್ಷಿ ಯುವಜನರ ಕಿವಿಗೆ ಚೆಂಡು ಹೂವನ್ನು ಇಟ್ಟಿದ್ದಾರೆ ಎಂದು ಆರೋಪಿಸಿದರು.
ತಮಿಳುನಾಡು ರಾಜ್ಯದಲ್ಲಿ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರ್ಪಡೆ ಮಾಡಿ, ಶೇ.69 ಮೀಸಲಾತಿ ಕೊಡುತ್ತಿದೆ. ನಿಮಗೆ ಒಳ ಮೀಸಲಾತಿ ಬಗ್ಗೆ ಹೈಕೋರ್ಟ್, ಸುಪ್ರೀಂ ಕೋರ್ಟಿನಲ್ಲಿ ಹೇಗೆ ವಾದ ಮಾಡಬೇಕೆಂದು ಗೊತ್ತಿದೆ. ಆದರೆ, ನಿಮಗೆ ಅದರ ಬಗ್ಗೆ ಆಸಕ್ತಿ ಇಲ್ಲ. ಸಮೀಕ್ಷೆ, ಆಯೋಗದ ವರದಿಗಳಿಗೆ ಹಣ ಖರ್ಚು ಮಾಡಿದ್ದೀರಿ. ಇದೇನು ನಿಮ್ಮಪ್ಪನ ದುಡ್ಡೇ ಎಂದು ಪ್ರಶ್ನಿಸಿದರು. ಯಾರ ಓಲೈಕೆಗೆ ಈ ರಾಜಕಾರಣ ಮಾಡುತ್ತ ಇದ್ದೀರಿ ಎಂದು ಕೇಳಿದರು.
ಸುಪ್ರೀಂ ಕೋರ್ಟಿನ ತೀರ್ಪು ಬಂದು ಒಂದು ವರ್ಷ ಕಳೆದರೂ ಈ ರಾಜ್ಯ ಸರಕಾರ ಒಳಮೀಸಲಾತಿ ಕುರಿತು ಚರ್ಚಿಸಿಲ್ಲ ಎಂದು ಟೀಕಿಸಿದರು. ನ್ಯಾ. ಸದಾಶಿವ ಅವರ, ಮಾಧುಸ್ವಾಮಿ ಅವರ ವರದಿಯನ್ನು ತಿರಸ್ಕರಿಸಿದ್ದರು. ನ್ಯಾ. ನಾಗಮೋಹನ್‍ದಾಸ್ ಅವರ ವರದಿಯನ್ನೂ ತಿರಸ್ಕರಿಸಿ ಒಳಮೀಸಲಾತಿಯಲ್ಲಿ ಗೊಂದಲ ಸೃಷ್ಟಿಸಿದ್ದರು. ಹೈಕೋರ್ಟಿನಲ್ಲಿ ಕೇಸ್ ದಾಖಲಾಗಿತ್ತು. ಬಳಿಕ ಸದನದಲ್ಲಿ ಮಸೂದೆಗೆ ಒಪ್ಪಿಗೆ ಕೊಟ್ಟಿದ್ದು, ರಾಜ್ಯಪಾಲರಿಗೆ ಕಳಿಸಿದ್ದರು ಎಂದರು.
ರಾಜ್ಯದಲ್ಲಿ ಸುಮಾರು 2.80 ಲಕ್ಷ ಹುದ್ದೆಗಳು ಭರ್ತಿಗೆ ಬಾಕಿ ಇದೆ ಎಂದು ಉದ್ಯೋಗಾಕಾಂಕ್ಷಿಗಳು ಹೋರಾಟ ಮಾಡಿದ್ದರು. ಒಳ ಮೀಸಲಾತಿ ಸಂಬಂಧಿತ ದಲಿತರು ಮತ್ತು ಹೋರಾಟ ನಿರತ ಯುವಜನರನ್ನು ದಿಕ್ಕು ತಪ್ಪಿಸಲು ರಾಜ್ಯ ಸರಕಾರವು ನಿನ್ನೆಯ ಕ್ಯಾಬಿನೆಟ್ ಸಭೆಯಲ್ಲಿ ಮತ್ತೆ ಹಳೆ ಮೀಸಲಾತಿಗೆ ಹೋಗುವುದಾಗಿ ತಿಳಿಸಿದೆ. ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಹರಿಕಾರರು. ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಕೊಡುವುದಾದರೆ ಮಿತಿಯನ್ನು ಶೇ 50 ಅನ್ನು ಮೀರಬಹುದಾಗಿದೆ. ಇಂದಿರಾ ಸಹಾನಿ ಪ್ರಕರಣದಲ್ಲಿ ಇದನ್ನು ತಿಳಿಸಿದ್ದಾರೆ ಎಂದು ಹೇಳಿದರು.
ಛತ್ತೀಸ್‌ಗಢದಲ್ಲಿ ಶೇ.58 ಮೀಸಲಾತಿ ಮಾಡಿದಾಗ ಅಲ್ಲಿನ ಹೈಕೋರ್ಟ್ ಅದಕ್ಕೆ ತಡೆಯಾಜ್ಞೆ ಕೊಟ್ಟಿತ್ತು. ಅದೇ ಸರಕಾರ ಮತ್ತೆ ಸುಪ್ರೀಂ ಕೋರ್ಟಿಗೆ ಹೋದಾಗ ಅಲ್ಲಿ ಆದೇಶ ನೀಡಿ ಶೇ.58 ಅನ್ನು ಮುಂದುವರೆಸಬಹುದು ಎಂದು ತಿಳಿಸಿದೆ. ಮಧ್ಯಪ್ರದೇಶದಲ್ಲಿ ಶೇ.57 ಉದ್ಯೋಗಾವಕಾಶ ನೀಡಿದ್ದಾರೆ. ಅದರೆ, ಕರ್ನಾಟಕ ರಾಜ್ಯ ಸರಕಾರವು ಈ ಸಂಬಂಧ ವಾದ ಮಂಡಿಸಿಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ ಮೂರೂವರೆ ದಶಕಗಳಿಂದ ಶೋಷಿತರಲ್ಲಿ ಶೋಷಿತರಾಗಿರುವ, ಮಾದಿಗ ಸಮುದಾಯ, ಮಾದಿಗ ಉಪ ಜಾತಿಗಳು ಒಳ ಮೀಸಲಾತಿಗಾಗಿ ಹೋರಾಟ ಮಾಡಿದ್ದವು. ಕರ್ನಾಟಕ ಸರಕಾರ ಒಳ ಮೀಸಲಾತಿ ಕೊಡಲಾಗದು; ನಾವು ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ಕೊಡುವುದಾಗಿ ಹೇಳಿದ್ದರು ಎಂದು ಗಮನ ಸೆಳೆದರು.
ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡ್ತೇವೆ: ಸಿಎಂ ಭರವಸೆ
ಸಾಮಾಜಿಕ ನ್ಯಾಯದ ಹರಿಕಾರ ನಾನೆಂದು ಪ್ರತಿಬಾರಿ, ಪ್ರತಿ ಕ್ಷಣವೂ ಮುಖ್ಯಮಂತ್ರಿಗಳು ತಿಳಿಸಿ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದರು ಎಂದು ಟೀಕಿಸಿದರು. 2024ರ ಆಗಸ್ಟ್ 1ರಂದು ಸುಪ್ರೀಂ ಕೋರ್ಟಿನ ವಿಸ್ತøತ ಪೀಠವು ಈ ದೇಶದ ರಾಜ್ಯ- ರಾಷ್ಟ್ರೀಯ ಸರಕಾರಗಳು ತುಳಿತಕ್ಕೆ ಒಳಗಾದ ಸಮಾಜಗಳಿಗೆ, ಮುಖ್ಯ ವಾಹಿನಿಗೆ ಬರಲಾಗದ ಸಮಾಜಗಳಿಗೆ, ವಿಶೇಷವಾದ ಒಳಮೀಸಲಾತಿ, ಆರ್ಥಿಕ ಚೇತರಿಕೆ, ರಾಜಕೀಯ ಮೀಸಲಾತಿ ಕೊಡುವ ಜವಾಬ್ದಾರಿಯನ್ನು ನೀಡಿತ್ತು. ಇದು ಡಾ. ಅಂಬೇಡ್ಕರ್ ಅವರು ದೇಶಕ್ಕೆ ಸಮರ್ಪಿಸಿದ ಸಂವಿಧಾನದಲ್ಲೂ ಅಡಕವಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯನ್ನು ರಾಜ್ಯ ಎಸ್‍ಸಿ ಮೋರ್ಚಾ ಉಪಾಧ್ಯಕ್ಷ ಹೂಡಿ ಮಂಜುನಾಥ್ ಅವರು ಇದ್ದರು.