ಬೆಂಗಳೂರು, ನ.16: ಪತ್ರಿಕೋದ್ಯಮದಲ್ಲಿ ಜನಪ್ರಿಯತೆ ಎಷ್ಟು ಮುಖ್ಯವೋ, ಜವಾಬ್ದಾರಿಯೂ ಅಷ್ಟೇ ಮುಖ್ಯ. ಜನಪ್ರಿಯತೆಗಾಗಿ ಸತ್ಯವನ್ನು ಕಡೆಗಣಿಸುವಂತಾಗಬಾರದು. ಪತ್ರಕರ್ತರ ಬರಹದಲ್ಲಿ ಸತ್ಯನಿಷ್ಠೆ, ಸ್ವಂತಿಕೆ ಹಾಗೂ ಆಳವಾದ ವಿಶ್ಲೇಷಣೆ ಇರಬೇಕು. ಪತ್ರಿಕೋದ್ಯಮ ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗುವುದರ ಜೊತೆಗೆ ದೇಶದ ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ (DCM Dr G Parameshwar) ಸಲಹೆ ನೀಡಿದರು.
ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಅಂಗವಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ನಗರದ ವಾರ್ತಾಭವನದ ಸುಲೋಚನಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಪತ್ರಿಕೋದ್ಯಮ: ಜನಪ್ರಿಯತೆಯೇ ಅಥವಾ ಜವಾಬ್ದಾರಿಯುತವೇ?’ ವಿಷಯದ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ʼಪತ್ರಿಕಾ ಸ್ವಾತಂತ್ರ್ಯದ ದುರುಪಯೋಗದಿಂದ ಅಪಾಯಗಳಿದ್ದರೂ, ನಿಯಂತ್ರಿತ ಅಥವಾ ನಿರ್ಬಂಧಿತ ಪತ್ರಿಕೆಗಳಿಗಿಂತ ಸಂಪೂರ್ಣ ಸ್ವತಂತ್ರ ಪತ್ರಿಕಾ ವ್ಯವಸ್ಥೆಯೇ ನನಗೆ ಹೆಚ್ಚು ಒಪ್ಪಿಗೆಯಾಗುತ್ತದೆ’ ಎಂಬ ನೆಹರು ಅವರ ಮಾತುಗಳು, ಪತ್ರಿಕಾ ಸ್ವಾತಂತ್ರ್ಯದ ಕುರಿತು ನೆಹರು ಅವರಿಗಿದ್ದ ದೂರದೃಷ್ಟಿಯನ್ನು ತಿಳಿಸುತ್ತದೆ. ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವೆಂದು ಕರೆಯಲಾಗುತ್ತದೆ. ಈ ಸ್ತಂಭಕ್ಕೆ ಎಷ್ಟು ಸ್ವಾತಂತ್ರ್ಯ ಮತ್ತು ಶಕ್ತಿ ಇರಬೇಕು, ಅದು ಸಮಾಜಕ್ಕೆ, ದೇಶಕ್ಕೆ ಹಾಗೂ ಆಡಳಿತ ವ್ಯವಸ್ಥೆಗೆ ಯಾವ ರೀತಿಯಲ್ಲಿ ನೆರವಾಗಬೇಕು ಎಂಬುದನ್ನು ನೆಹರು ಅವರು ಆಳವಾಗಿ ಅರ್ಥೈಸಿಕೊಂಡಿದ್ದರು. ಪತ್ರಿಕಾ ಸ್ವಾತಂತ್ರ್ಯ ಎನ್ನುವುದು ಕೇವಲ ಘೋಷಣೆಯಲ್ಲ, ಅದು ಪ್ರಜಾಪ್ರಭುತ್ವದ ಪ್ರಕ್ರಿಯೆಯ ಅವಿಭಾಜ್ಯ ಅಂಗ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದರು.
ಸ್ವತಂತ್ರ ಮತ್ತು ನಿರ್ಭೀತ ಪತ್ರಿಕೋದ್ಯಮವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ 1966ರ ನವೆಂಬರ್ 16ರಂದು ಭಾರತೀಯ ಪತ್ರಿಕಾ ಮಂಡಳಿ ಕಾರ್ಯಾರಂಭ ಮಾಡಿತು. ಈ ಐತಿಹಾಸಿಕ ದಿನವನ್ನು ರಾಷ್ಟ್ರೀಯ ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯಾನಂತರದ ಪತ್ರಿಕೋದ್ಯಮದ ಪಯಣವನ್ನು ಅವಲೋಕಿಸುವ ಅಗತ್ಯವಿದೆ. ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ನೀಡಿರುವ ಮಹತ್ವವನ್ನು ಗಮನಿಸಿದಾಗ, ಈ ಸ್ವಾತಂತ್ರ್ಯವನ್ನು ರಾಷ್ಟ್ರ ನಿರ್ಮಾಣಕ್ಕೆ ಎಷ್ಟರಮಟ್ಟಿಗೆ ಬಳಸಿಕೊಳ್ಳಲಾಗಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಪತ್ರಿಕಾ ಸ್ವಾತಂತ್ರ್ಯ ದೊರೆತಿದೆ ಎಂಬುದಷ್ಟೇ ಮುಖ್ಯವಲ್ಲ. ಆ ಸ್ವಾತಂತ್ರ್ಯದ ಮೂಲಕ ದೇಶದ ಬೆಳವಣಿಗೆಗೆ ಪತ್ರಿಕೋದ್ಯಮ ನೀಡಿರುವ ಕೊಡುಗೆ ಏನು ಎಂಬುದನ್ನೂ ಪರಿಶೀಲಿಸಬೇಕಿದೆ. ಸಮಾನತೆ, ಹಕ್ಕುಗಳು ಮತ್ತು ಅಭಿವೃದ್ಧಿಯ ಕುರಿತು ನಾವು ನಿರಂತರವಾಗಿ ಮಾತನಾಡುತ್ತೇವೆ. ಆದರೆ ಈ ಕ್ಷೇತ್ರಗಳಲ್ಲಿ ಸಮಾಜವನ್ನು ಬದಲಾಯಿಸಲು ಪತ್ರಿಕೆಗಳು ಎಷ್ಟರಮಟ್ಟಿಗೆ ಸಹಾಯ ಮಾಡಿವೆ ಎಂಬುದನ್ನು ವಿಶ್ಲೇಷಿಸಬೇಕು. ಅಗತ್ಯವಿರುವ ಕಡೆಗಳಲ್ಲಿ ನಮ್ಮ ಕಾರ್ಯವೈಖರಿಯನ್ನು ತಿದ್ದಿಕೊಳ್ಳುವ ಮನೋಭಾವವೂ ಇರಬೇಕು ಎಂದರು.
ವರದಿಗಾರಿಕೆಗೆ ಸೀಮಿತವಾಗದೆ ವಿಶ್ಲೇಷಣಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳಿ
ಇತ್ತೀಚಿನ ದಿನಗಳಲ್ಲಿ ಸ್ವಂತ ಚಿಂತನೆಯೊಂದಿಗೆ ಲೇಖನಗಳನ್ನು ಬರೆಯುವ ಪ್ರವೃತ್ತಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ತಂತ್ರಜ್ಞಾನದ ಪ್ರಗತಿಯಿಂದಾಗಿ ಕೀಬೋರ್ಡ್ ಮತ್ತು ಮೊಬೈಲ್ ಫೋನ್ಗಳ ಮೂಲಕವೇ ಬಹುತೇಕ ಪತ್ರಿಕಾ ಕೆಲಸಗಳು ನಡೆಯುತ್ತಿವೆ. ಆದರೆ ಈ ಬದಲಾವಣೆಗಳ ನಡುವೆ ಸ್ವಂತ ಬರವಣಿಗೆ, ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಗೆ ನೀಡುವ ಪ್ರಾಮುಖ್ಯತೆ ಕಡಿಮೆಯಾಗಬಾರದು ಎಂದು ಹೇಳಿದರು.
ಪತ್ರಿಕೋದ್ಯಮದಲ್ಲಿ ‘ಕಾಪಿ ಆ್ಯಂಡ್ ಪೇಸ್ಟ್ʼ ಸಂಸ್ಕೃತಿ ಹೆಚ್ಚಾಗುತ್ತಿದೆ. ಮತ್ತೊಬ್ಬರ ಬರಹವನ್ನು ನಕಲು ಮಾಡುವುದರಿಂದ ಪತ್ರಕರ್ತರ ಸ್ವಂತಿಕೆ ಬೆಳೆಯುವುದಿಲ್ಲ. ಪತ್ರಕರ್ತರ ಪ್ರತಿಭೆ ಅವರ ಸ್ವಂತ ಚಿಂತನೆ, ವಿಷಯದ ಗ್ರಹಿಕೆ ಹಾಗೂ ವಿಶ್ಲೇಷಣಾ ಸಾಮರ್ಥ್ಯದಲ್ಲಿ ವ್ಯಕ್ತವಾಗಬೇಕು. ಸ್ವಂತಿಕೆ ಇಲ್ಲದೆ ಒಬ್ಬ ಯಶಸ್ವಿ ಪತ್ರಕರ್ತನಾಗಿ ರೂಪುಗೊಳ್ಳುವುದು ಕಷ್ಟ.
ಪತ್ರಕರ್ತರ ಕೆಲಸ ಕೇವಲ ಘಟನೆಯನ್ನು ವರದಿ ಮಾಡುವುದಕ್ಕೆ ಸೀಮಿತವಾಗಬಾರದು. ವಿಷಯವನ್ನು ಅರ್ಥೈಸಿಕೊಳ್ಳಬೇಕು, ಅಧ್ಯಯನ ಮಾಡಬೇಕು, ಅದರ ಹಿನ್ನೆಲೆಯನ್ನು ವಿಶ್ಲೇಷಿಸಬೇಕು. ತಾವು ಬರೆದ ಲೇಖನ ಸಮಾಜದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನೂ ಗಮನಿಸಬೇಕು. ಪತ್ರಿಕೋದ್ಯಮವನ್ನು ವಿದ್ಯಾರ್ಥಿಗಳು ಎಷ್ಟು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ ಹಾಗೂ ಅದಕ್ಕಾಗಿ ತಮ್ಮನ್ನು ಎಷ್ಟರಮಟ್ಟಿಗೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ ಎಂಬುದು ಮುಖ್ಯ ಎಂದು ತಿಳಿಸಿದರು.
ಪಾಶ್ಚಿಮಾತ್ಯ ಮಾಧ್ಯಮಗಳಲ್ಲಿನ ವಿಶ್ಲೇಷಣಾತ್ಮಕ ಪತ್ರಿಕೋದ್ಯಮವನ್ನು ಗಮನಿಸಿದರೆ, ಅಲ್ಲಿನ ಪತ್ರಕರ್ತರು ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿ ವಿಶ್ಲೇಷಿಸುವ ವಿಧಾನ ಮತ್ತು ನಮ್ಮ ಪತ್ರಿಕೋದ್ಯಮದ ಕಾರ್ಯವೈಖರಿಯನ್ನು ಹೋಲಿಸಿ ನೋಡಬೇಕಿದೆ. ಅನೇಕ ಸಂದರ್ಭಗಳಲ್ಲಿ ನಮ್ಮ ಪತ್ರಿಕೋದ್ಯಮ ಕೇವಲ ವರದಿ ಮಾಡುವುದಕ್ಕಷ್ಟೇ ಸೀಮಿತವಾಗುತ್ತಿರುವುದು ಕಂಡುಬರುತ್ತದೆ. ಈ ಪ್ರವೃತ್ತಿ ಬದಲಾಗಬೇಕು. ಪತ್ರಿಕೋದ್ಯಮ ವಿದ್ಯಾರ್ಥಿಗಳು ಮತ್ತು ಯುವ ಪತ್ರಕರ್ತರು ವಿಶ್ಲೇಷಣಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಡಿಜಿಟಲ್ ಮಾಧ್ಯಮದ ಬೆಳವಣಿಗೆ ಪತ್ರಿಕೋದ್ಯಮದಲ್ಲಿ ಮಹತ್ವದ ಬದಲಾವಣೆ ತಂದಿದೆ. ಸುದ್ದಿಗಳನ್ನು ಅತ್ಯಂತ ವೇಗವಾಗಿ ವರದಿ ಮಾಡಲು ಹಾಗೂ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಜನರಿಗೆ ತಲುಪಿಸಲು ಡಿಜಿಟಲ್ ತಂತ್ರಜ್ಞಾನ ನೆರವಾಗುತ್ತಿದೆ. ಆದರೆ ಅದೇ ತಂತ್ರಜ್ಞಾನ ಪತ್ರಿಕೋದ್ಯಮದ ಮೌಲ್ಯಗಳಿಗೆ ಧಕ್ಕೆ ತರುವ ಅಪಾಯವನ್ನೂ ಹೊಂದಿದೆ. ಒಂದು ಕಡೆ ವೇಗವಾದ ವರದಿಗಾರಿಕೆ ಮತ್ತು ಮಾಹಿತಿ ಪ್ರಸರಣಕ್ಕೆ ಅನುಕೂಲ ಕಲ್ಪಿಸಿದರೆ, ಮತ್ತೊಂದು ಕಡೆ ಅದರ ಅಸಮರ್ಪಕ ಬಳಕೆಯಿಂದ ಪತ್ರಿಕೋದ್ಯಮದ ವಿಶ್ವಾಸಾರ್ಹತೆಗೆ ಧಕ್ಕೆಯಾಗಬಹುದು. ಹೀಗಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಾಗ ಜವಾಬ್ದಾರಿ ಮತ್ತು ವಿವೇಚನೆ ಅತ್ಯಗತ್ಯ ಎಂದರು.
ಪತ್ರಿಕೋದ್ಯಮವನ್ನು ಕೇವಲ ಅನಿವಾರ್ಯತೆಯಿಂದ ಆಯ್ಕೆ ಮಾಡಿಕೊಂಡ ವೃತ್ತಿಯನ್ನಾಗಿ ನೋಡಬಾರದು. ಅದರ ಮಹತ್ವ ಮತ್ತು ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಪತ್ರಕರ್ತರ ಪ್ರತಿಯೊಂದು ಲೇಖನದಲ್ಲಿಯೂ ಸತ್ಯನಿಷ್ಠೆ ಕಾಣಬೇಕು. ಆಗ ಮಾತ್ರ ಪತ್ರಿಕೋದ್ಯಮ ಸಮಾಜದ ನೈಜ ಪ್ರತಿಬಿಂಬವಾಗಲು ಸಾಧ್ಯ. ಸಮಾಜದ ಸಮಸ್ಯೆಗಳು, ಘಟನೆಗಳು ಹಾಗೂ ಜನರ ಬದುಕಿನ ವಾಸ್ತವಗಳನ್ನು ಪ್ರತಿಬಿಂಬಿಸುವುದೇ ಪತ್ರಿಕೋದ್ಯಮದ ಮುಖ್ಯ ಕರ್ತವ್ಯ ಎಂದರು.
ಜನಪ್ರಿಯತೆ ಮತ್ತು ಜವಾಬ್ದಾರಿ ಎರಡೂ ಮುಖ್ಯ
ʼಪತ್ರಿಕೋದ್ಯಮ: ಜನಪ್ರಿಯತೆಯೇ ಅಥವಾ ಜವಾಬ್ದಾರಿಯುತವೇ?’ ಎಂಬ ವಿಚಾರ ಸಂಕಿರಣದ ವಿಷಯ ಅತ್ಯಂತ ಪ್ರಸ್ತುತವಾಗಿದೆ. ಪತ್ರಿಕೋದ್ಯಮದಲ್ಲಿ ಜನಪ್ರಿಯತೆ ಮತ್ತು ಜವಾಬ್ದಾರಿಯನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಎರಡೂ ಪರಸ್ಪರ ಪೂರಕವಾಗಿದ್ದು, ಒಂದನ್ನು ಬಿಟ್ಟು ಮತ್ತೊಂದನ್ನು ಉಳಿಸಿಕೊಳ್ಳುವುದು ಕಷ್ಟ.
ಪ್ರಸ್ತುತ ಸಂದರ್ಭದಲ್ಲಿ ಪತ್ರಿಕೆಗಳನ್ನು ನಡೆಸುವುದು ಹಾಗೂ ಸುದ್ದಿವಾಹಿನಿಗಳನ್ನು ನಿರ್ವಹಿಸುವುದು ಸುಲಭದ ಕೆಲಸವಲ್ಲ. ಮಾಧ್ಯಮ ಸಂಸ್ಥೆಗಳ ಅಸ್ತಿತ್ವ ಮತ್ತು ನಿರ್ವಹಣೆಯ ದೃಷ್ಟಿಯಿಂದ ಜನಪ್ರಿಯತೆಯೂ ಮುಖ್ಯವಾಗುತ್ತದೆ. ಆದರೆ ಜನಪ್ರಿಯತೆ ಗಳಿಸುವ ಪ್ರಯತ್ನದಲ್ಲಿ ಜವಾಬ್ದಾರಿಯನ್ನು ಮರೆಯಬಾರದು. ಸುದ್ದಿ ಅಥವಾ ಲೇಖನ ಪ್ರಕಟಿಸುವಾಗ ಅದರ ಸತ್ಯಾಸತ್ಯತೆ ಹಾಗೂ ಪರಿಣಾಮಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು ಎಂದರು.
ಒಬ್ಬ ವ್ಯಕ್ತಿ, ಅದರಲ್ಲೂ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರು, 40, 50 ವರ್ಷಗಳ ಕಾಲ ಸಮಾಜದ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿ ತಮ್ಮದೇ ಆದ ವ್ಯಕ್ತಿತ್ವ, ಗೌರವ ಮತ್ತು ಜನಪ್ರಿಯತೆಯನ್ನು ಗಳಿಸಿಕೊಂಡಿರಬಹುದು. ಆದರೆ ಪತ್ರಕರ್ತರು ಪ್ರಕಟಿಸುವ ಒಂದೇ ಒಂದು ಲೇಖನ ಆ ವ್ಯಕ್ತಿಯ ದಶಕಗಳ ಸಾರ್ವಜನಿಕ ಬದುಕಿನಲ್ಲಿ ಗಳಿಸಿದ ಗೌರವ ಮತ್ತು ವ್ಯಕ್ತಿತ್ವಕ್ಕೆ ಧಕ್ಕೆ ತರಬಹುದು. ಹೀಗಾಗಿ ಲೇಖನ ಬರೆಯುವಾಗ ಅದರ ಪರಿಣಾಮಗಳ ಬಗ್ಗೆ ಆಳವಾಗಿ ಯೋಚಿಸುವುದು ಅತ್ಯಂತ ಮುಖ್ಯ ಎಂದರು.
ಪತ್ರಕರ್ತರು ಪ್ರತಿಯೊಂದು ವಿಷಯವನ್ನೂ ವಿಶ್ಲೇಷಣಾತ್ಮಕವಾಗಿ ನೋಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಜನಪ್ರಿಯತೆ ಗಳಿಸುವುದು ಮುಖ್ಯವಾದರೂ, ಅದು ಜವಾಬ್ದಾರಿಯುತ ಪತ್ರಿಕೋದ್ಯಮದ ಚೌಕಟ್ಟಿನಲ್ಲಿಯೇ ಇರಬೇಕು. ಜನಪ್ರಿಯತೆ ಮತ್ತು ಜವಾಬ್ದಾರಿ ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಇಂದಿನ ಪತ್ರಿಕೋದ್ಯಮದ ಪ್ರಮುಖ ಅಗತ್ಯವಾಗಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ತಿಳಿಸಿದರು.