ಬೆಂಗಳೂರು: ಭಾರತದ ಕೃಷಿ ಉತ್ಪನ್ನಗಳ ರಫ್ತಿನಲ್ಲಿ ಹೆಚ್ಚಳವಾಗುತ್ತಿರುವ ಬಗ್ಗೆ ಇಂದಿನ ಮನ್ ಕಿ ಬಾತ್ (Mann Ki Baat) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದ್ದು, ವಿಶೇಷವಾಗಿ ಕರ್ನಾಟಕದ ಕೃಷಿ ಉತ್ಪನ್ನಗಳು ವಿದೇಶಕ್ಕೆ ತಲುಪುತ್ತಿರುವುದನ್ನು ಶ್ಲಾಘಿಸಿದ್ದಾರೆ. ನಂಜನಗೂಡಿನ ರಸಬಾಳೆ (Nanjangud Rasabale), ಮೈಸೂರಿನ ವೀಳ್ಯದೆಲೆ ಮತ್ತು ಇಂಡಿ ನಿಂಬೆಹಣ್ಣು ವಿದೇಶಗಳಿಗೆ ರಫ್ತಾಗುತ್ತಿರುವುದಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತದ ಕೃಷಿ ಉತ್ಪನ್ನಗಳು ಸುಲಭವಾಗಿ ವಿಮಾನದಲ್ಲಿ ವಿದೇಶಗಳನ್ನು ತಲುಪುತ್ತಿವೆ. ಕರ್ನಾಟಕದ ನಂಜನಗೂಡಿನ ಬಾಳೆಹಣ್ಣು, ಮೈಸೂರಿನ ವೀಳ್ಯದೆಲೆ ಮತ್ತು ಇಂಡಿ ನಿಂಬೆಹಣ್ಣುಗಳನ್ನು ಮಾಲ್ಡೀವ್ಸ್‌ಗೆ ರಫ್ತು ಮಾಡಲಾಗುತ್ತಿದೆ. ಈ ಉತ್ಪನ್ನಗಳು ತಮ್ಮ ರುಚಿ ಮತ್ತು ಗುಣಮಟ್ಟಕ್ಕೆ ಹೆಸರುವಾಸಿಯಾಗಿವೆ ಮತ್ತು ಜಿಐ ಟ್ಯಾಗ್ ಅನ್ನು ಸಹ ಪಡೆದಿವೆ. ಇಂದಿನ ರೈತರು ಗುಣಮಟ್ಟವನ್ನು ಬಯಸುತ್ತಾರೆ, ಅದರೊಂದಿಗೆ ಇಳುವರಿಯನ್ನು ಹೆಚ್ಚಿಸುತ್ತಾ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸುತ್ತಿದ್ದಾರೆ ಎಂದು ಮೋದಿ ಅವರು ತಿಳಿಸಿದ್ದಾರೆ.
ನಂಜನಗೂಡು ರಸಬಾಳೆಯು ಕರ್ನಾಟಕದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬೆಳೆಯುವ ವಿಶಿಷ್ಟ ರುಚಿ, ಪರಿಮಳ ಹಾಗೂ ದಪ್ಪ ತಿರುಳಿಗೆ ಹೆಸರಾದ ಪ್ರಸಿದ್ಧ ಬಾಳೆಹಣ್ಣು. ಇದು 2005ರಲ್ಲಿ ಭೌಗೋಳಿಕ ಸೂಚಕ (GI) ಟ್ಯಾಗ್ ಪಡೆದಿದ್ದು, ಕಪಿಲಾ ನದಿಯ ದಂಡೆಯ ಕಪ್ಪು ಮಣ್ಣಿನಲ್ಲಿ ಹೆಚ್ಚಾಗಿ ಬೆಳೆಯುತ್ತದೆ.
ಇನ್ನು ಮೈಸೂರು ವೀಳ್ಯದೆಲೆ (Mysore Betel Leaf) ತನ್ನ ವಿಶಿಷ್ಟ ಸುವಾಸನೆ, ವಿನ್ಯಾಸ ಮತ್ತು ಖಾರವಾದ ರುಚಿಗೆ ಪ್ರಸಿದ್ಧವಾಗಿದೆ. 2006ರಲ್ಲಿ ಜಿಐ ಟ್ಯಾಗ್ (Geographical Indication) ಪಡೆದ ಈ ಎಲೆ, ಮೈಸೂರು ಭಾಗದ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ. ಈ ಎಲೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಹಾಗೆಯೇ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪ್ರಸಿದ್ಧ ಕಾಜಿ ನಿಂಬೆಹಣ್ಣು 2022ರಲ್ಲಿ ಭೌಗೋಳಿಕ ಸೂಚ್ಯಂಕ (GI Tag) ಮಾನ್ಯತೆ ಪಡೆದಿದೆ. ಇದು ವಿಶಿಷ್ಟ ರುಚಿ, ತೆಳುವಾದ ಸಿಪ್ಪೆ ಮತ್ತು ಅತ್ಯಧಿಕ ರಸವತ್ತತೆಗೆ ಹೆಸರುವಾಸಿಯಾಗಿದೆ.
ಒಡಿಶಾದ ಯುವಕನ ಕೃಷಿಗೆ ಪ್ರಧಾನಿ ಶ್ಲಾಘನೆ
ಇದೇ ವೇಳೆ ಒಡಿಶಾದ ಹಿರೋಡ್ ಪಟೇಲ್ ಎನ್ನುವ ಯುವ ಕೃಷಿಕನೊಬ್ಬ, ಹೊಸ ಮಾದರಿಯ ಕೃಷಿಯ ಮೂಲಕ ಗಮನ ಸೆಳೆಯುತ್ತಿದ್ದಾನೆ. ಕೃಷಿ ಹೊಂಡದಲ್ಲಿ ತರಕಾರಿ ಬೆಳೆದರೆ, ಅದರ ಸುತ್ತ ಬಾಳೆಹಣ್ಣು, ತೆಂಗು ಬೆಳೆಯುತ್ತಿದ್ದಾನೆ. ಆ ಹೊಂಡದಲ್ಲೇ ಮೀನು ಸಾಕಾಣಿಕೆಯನ್ನು ಕೂಡ ಮಾಡುತ್ತಿದ್ದಾನೆ. ಅದನ್ನು ವೀಕ್ಷಿಸಲು ದೂರದೂರಿನಿಂದ ರೈತರು ಅವರ ತೋಟಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕೇರಳದ ತ್ರಿಶೂರ್‌ನ ಹಳ್ಳಿಯೊಂದರಲ್ಲಿ 570 ವಿವಿಧ ತಳಿಯ ಭತ್ತವನ್ನು ಯಶಸ್ವಿಯಾಗಿ ಬೆಳೆಯುವ ಮೂಲಕ ಅಲ್ಲಿನ ರೈತರು ಗಮನಸೆಳೆದಿದ್ದಾರೆ. ಕೃಷಿ ಉತ್ಪನ್ನಗಳ ರಫ್ತು ಹೆಚ್ಚಾಗುತ್ತಿರುವುದು ದೇಶದ ರೈತರ ಪರಿಶ್ರಮವನ್ನು ತೋರಿಸುತ್ತದೆ. ಅವರು ಮಣ್ಣಿನ ನಿಜವಾದ ಆರಾಧಕರು. ಅವರು ಮಣ್ಣನ್ನು ಚಿನ್ನವಾಗಿಸುವ ಸಾಮಥ್ಯ ಹೊಂದಿದ್ದಾರೆ ಎಂದು ಹೇಳಿದ್ದಾರೆ.
AI ಶೃಂಗಸಭೆಯಲ್ಲಿ ಜಗತ್ತು ಭಾರತದ ಅದ್ಭುತ ಸಾಮರ್ಥ್ಯಗಳನ್ನು ಕಂಡಿದೆ; ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ
ಭಾರತವು ಪ್ರತಿವರ್ಷ 150 ಮಿಲಿಯನ್ ಟನ್ ಭತ್ತವನ್ನು ಉತ್ಪಾದಿಸುವ ಮೂಲಕ ಜಗತ್ತಿನ ಅತಿದೊಡ್ಡ ಭತ್ತ ಬೆಳೆಯುವ ದೇಶವಾಗಿದೆ. ಇದರಿಂದ ದೇಶದ ಅವಶ್ಯಕತೆಯನ್ನು ಮೀರಿ ನಾವು ಜಾಗತಿಕವಾಗಿ ರಫ್ತು ಮಾಡಲು ಸಾಧ್ಯವಾಗಿದೆ. ಹಲವು ರೈತರು ಸಾಂಪ್ರದಾಯಿಕ ಕೃಷಿಯ ಜತೆ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಕೃಷಿ ಉತ್ಪನ್ನಗಳ ಮಾರುಕಟ್ಟೆಯನ್ನು ವಿಸ್ತರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.