ಬೆಂಗಳೂರು: ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ - ಬಿಐಇಸಿಯಲ್ಲಿಂದು ಆರಂಭವಾದ 'ಬೆಂಗಳೂರು ಟೆಕ್ ಸಮ್ಮಿಟ್' ನ (Bengaluru tech summit 2026) ಪ್ರದರ್ಶನ ಮಳಿಗೆಗಳಲ್ಲಿ 'ಸ್ಟ್ರೈಡರ್ ರೋಬೋಟ್' (Strider robot) ಗಮನ ಸೆಳೆಯಿತು. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ನೆರವಿನೊಂದಿಗೆ ಸ್ಟಾರ್ಟಪ್ ಒಂದು ಇದನ್ನು ಅಭಿವೃದ್ಧಿಪಡಿಸಿದೆ.
ಸ್ವಯಂ ಚಾಲಿತವಾಗಿ ಚಲಿಸಬಲ್ಲ ಈ ನಾಲ್ಕು ಕಾಲಿನ ರೋಬೊಟ್ (quadruped robot) ಸುಮಾರು 20 ಕೆ.ಜಿ. ಭಾರ ಹೊರುವ ಸಾಮರ್ಥ್ಯ ಹೊಂದಿದೆ. ಪ್ರತಿ ಸೆಕೆಂಡ್ಗೆ ಗರಿಷ್ಠ 1.5 ಮೀಟರ್ ವೇಗದಲ್ಲಿ ಸಾಗಲಿದೆ. ಸರ್ವೇಕ್ಷಣೆ ನಿರ್ವಹಣೆ, ತಪಾಸಣೆ, ಭದ್ರತಾ ವಲಯದಲ್ಲಿ ಸರಕು ಸಾಗಣೆ ಸೇರಿದಂತೆ ಈ ರೋಬೋಟ್ ಹಲವು ಉಪಯೋಗಗಳನ್ನು ಹೊಂದಿದೆ.
"ಸೇನಾ ಪಡೆ ಯೋಧರು ಕಾರ್ಯ ನಿರ್ವಹಿಸುವ ದುರ್ಗಮ ಪ್ರದೇಶದಲ್ಲಿ ಈ ರೋಬೋಟ್ ಉಪಯೋಗಕ್ಕೆ ಬರಲಿದ್ದು ಈಗಾಗಲೇ ರಕ್ಷಣಾ ಇಲಾಖೆಗೆ ತಮ್ಮ ಸಂಸ್ಥೆಗೆ ತಯಾರಿಕಾ ಬೇಡಿಕೆ ಬಂದಿದೆ. ವಿದೇಶಗಳಿಗೆ ರಫ್ತು ಮಾಡುವ ಯೋಜನೆಯೂ ಇದೆ" ಎಂದು ಬೆಂಗಳೂರಿನ 'ಸ್ಟ್ರೈಡರ್ ರೋಬೋಟಿಕ್ಸ್' (Strider Robotics) ಸಂಸ್ಥೆಯ ಉದ್ಯಮ ಕಾರ್ಯಾಚರಣೆ ಮುಖ್ಯಸ್ಥ ಹರ್ಷ ಕಾರಂತ್ ಹೇಳುತ್ತಾರೆ.
ಒಮ್ಮೆ ಮ್ಯಾಪಿಂಗ್ ಮಾಡಿದರೆ ಇದು ಸ್ವಯಂ ಚಾಲಿತವಾಗಿ ಸರ್ವೇಕ್ಷಣಾ ಕಾರ್ಯ ನಿರ್ವಹಿಸಲಿದೆ. ಇದರಲ್ಲಿ ಗುಣಮಟ್ಟದ ಮಲ್ಟಿ ಸೆನ್ಸಾರ್ಗಳು ಹಾಗೂ ಡೆಪ್ತ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ರಿಯಲ್ ಟೈಮ್ ಡಾಟಾ ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು. ರೋಬೋಟಿಕ್ ಚಲಿಸುವಿಕೆಯನ್ನು ನಿರ್ವಹಣಾ ಕೇಂದ್ರದಿಂದ ಗಮನಿಸಬಹುದಾಗಿದೆ.
ಪ್ರಸ್ತುತ ಸೇನಾ ವಲಯದಲ್ಲಿ ಅಲ್ಪ ಪ್ರಮಾಣದ ಭಾರ ಸಾಗಿಸಲು ಕತ್ತೆಗಳು, ಕುದುರೆಗಳು ಮಂತಾದ ಪಶುಗಳನ್ನು ಬಳಸಲಾಗುತ್ತಿದೆ. ಅವುಗಳ ಬದಲಿಗೆ ಈ ರೋಬೋಟಿಕ್ ನೆರವಾಗಲಿದೆ ಎಂದು ಅವರು ಹೇಳುತ್ತಾರೆ. ವಿವಿಧ ಸಾಮರ್ಥ್ಯ ಮತ್ತು ಗುಣಮಟ್ಟದ ರೋಬೋಟ್ಗಳಿದ್ದು, ಅದಕ್ಕೆ ತಕ್ಕಂತೆ ದರ ನಿಗದಿ ಮಾಡಲಾಗುವುದು ಎಂದಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಶಿಶಿರ್ ನೇತೃತ್ವದಲ್ಲಿ ಸುಮಾರು 20 ಸದಸ್ಯರ ತಂಡ ಈ ರೋಬೋಟ್ ಅಭಿವೃದ್ಧಿಯಲ್ಲಿ ಕಾರ್ಯ ನಿರ್ವಹಿಸಿದೆ. ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ಕರ್ನಾಟಕ ಸರ್ಕಾರಗಳು ವಿವಿಧ ಹಂತಗಳಲ್ಲಿ ಯೋಜನೆಗೆ ನೆರವು ನೀಡಿರುವುದಾಗಿ ಅವರು ತಿಳಿಸಿದ್ದಾರೆ.