ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ತಮ್ಮ ಸಮುದಾಯಕ್ಕೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರು, ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಕಾಂಗ್ರೆಸ್ ವಿರುದ್ಧ ಅಸಮಾಧಾನದಿಂದ ಬರೋಬ್ಬರಿ 14 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಂಧಾನ ಯಶಸ್ವಿಯಾಗಿದ್ದು, ಕ್ಷೇತ್ರದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಇಂದು ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಸಿಎಂ ಮಾತನಾಡಿದ್ದಾರೆ. ದಾವಣಗೆರೆ ಉಪಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ಕಣದಿಂದ ಹಿಂದೆ ಸರಿದಿದ್ದು, ದಾವಣಗೆರೆ ಮತ್ತು ಬಾಗಲಕೋಟೆ ಎರಡೂ ಕಡೆ ಕಾಂಗ್ರೆಸ್ ಗೆಲ್ಲಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.
ಸಾದಿಕ್ ಪೈಲ್ವಾನ್ ಅವರು ನನಗೆ ಬಹಳ ವರ್ಷಗಳಿಂದ ಪರಿಚಯದವರಾಗಿದ್ದಾರೆ. ಮೈಸೂರಿನ ಕುಸ್ತಿ ಅಖಾಡಗಳಲ್ಲಿ ಅವರು ಪಾಲ್ಗೊಂಡಾಗ ಭೇಟಿಯಾಗುತ್ತಿದ್ದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು, ಅಭ್ಯರ್ಥಿಯಾಗಬೇಕೆಂದು ಬಯಸುವುದು ತಪ್ಪೇನಿಲ್ಲ ಎಂದರು.
ನೆನ್ನೆ 11 ಜನ ನಾಮಪತ್ರ ಹಿಂಪಡೆದಿದ್ದಾರೆ. ಪಕ್ಷದ ಕೋರಿಕೆ ಮೇರೆಗೆ ಸಾದಿಕ್ ಕಣದಿಂದ ಹಿಂದೆ ಸರಿದಿದ್ದಾರೆ. ಶಾಸಕ ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್, ನಜೀರ್ ಅಹ್ಮದ್ ಅವರು ದಾವಣಗೆರೆಗೆ ಭೇಟಿ ನೀಡಿದ್ದರು. ಅವರು ತಲುಪುವುದು ತಡವಾದ್ದರಿಂದ ನಾಮ ಪತ್ರ ಸಲ್ಲಿಸುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ವಿಧಾನಪರಿಷತ್‌ನಲ್ಲಿ ಉತ್ತರ ನೀಡಬೇಕಿದ್ದರಿಂದ ನಾನು ಖುದ್ದು ಭೇಟಿ ನೀಡಲು ಸಾಧ್ಯವಾಗಲಿಲ್ಲ ಎಂದರು.
ದಾವಣಗೆರೆ ಉಪಚುನಾವಣೆ; ಬಂಡಾಯ ಅಭ್ಯರ್ಥಿಗಳು ನಮ್ಮವರೇ ಎಂದ ಡಿ.ಕೆ. ಶಿವಕುಮಾರ್
ಪಕ್ಷದ ಕಟ್ಟಾಳು; ನಿಷ್ಠಾವಂತ ಕಾರ್ಯಕರ್ತರು
ಸಾದಿಕ್ ಪೈಲ್ವಾನ್ ಅವರು ಕಾಂಗ್ರೆಸ್‌ನಲ್ಲಿ ಸುಮಾರು 40 ವರ್ಷಗಳಿಂದ ಇದ್ದು, ಪಕ್ಷದ ಕಟ್ಟಾಳು. ದಾವಣಗೆರೆಯಲ್ಲಿ 70 ಸಾವಿರ ಮುಸ್ಲಿಂ ಮತದಾರರಿದ್ದು, ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಹೈಕಮಾಂಡ್ ಇದನ್ನು ಪರಿಶೀಲಿಸಿ, ಮೃತರಾದವರ ಕುಟುಂಬದವರಿಗೆ ಟಿಕೆಟ್ ನೀಡುವ ಪದ್ಧತಿಯಂತೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ್ ಅವರಿಗೆ ಟಿಕೆಟ್ ನೀಡಲಾಗಿದೆ ಎಂದರು.