ಬೆಂಗಳೂರು, ಏ. 2: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಬೆಂಗಳೂರಿನಲ್ಲಿ ಏಪ್ರಿಲ್ 7ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಮಾರಂಭದಲ್ಲಿ ಬೆಂಗಳೂರು ನಗರ ಜಿಲ್ಲೆಯ ಮಹಿಳಾ ಸರ್ಕಾರಿ ನೌಕರರು ಭಾಗವಹಿಸಲು ಅನುಕೂಲವಾಗುವಂತೆ ಅಂದು ಸಮೀಕ್ಷೆ/ಗಣತಿ ಕಾರ್ಯದಿಂದ ವಿನಾಯಿತಿ ನೀಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ (CS Shadakshari) ತಿಳಿಸಿದ್ದಾರೆ. ಷಡಾಕ್ಷರಿ ಈ ಬಗ್ಗೆ ಮಹೇಶ್ವರ ರಾವ್ ಅವರನ್ನು ಭೇಟಿ ಮಾಡಿ, ಮನವಿ ಪತ್ರ ಸಲ್ಲಿಸಿದ್ದರು.
ಕೇಂದ್ರ ಸರ್ಕಾರವು ರಾಷ್ಟ್ರದಾದ್ಯಂತ ಎರಡು ಹಂತಗಳಲ್ಲಿ ಸಾರ್ವಜನಿಕರ ಸಮೀಕ್ಷೆ/ಗಣತಿ ಕಾರ್ಯವನ್ನು ಹಮ್ಮಿಕೊಂಡಿದ್ದು, ಅದರಂತೆ ಪ್ರಥಮ ಹಂತದ ಸಮೀಕ್ಷೆ ಪ್ರಾರಂಭವಾಗಿದೆ. ಸಮೀಕ್ಷಾ ಕಾರ್ಯಕ್ಕೆ ರಾಜ್ಯ ಸರ್ಕಾರದ ಅಧಿಕಾರಿ, ನೌಕರರನ್ನು ನಿಯೋಜಿಸಲಾಗಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಬೆಂಗಳೂರಿನಲ್ಲಿ ಏಪ್ರಿಲ್ 7ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅದ್ಧೂರಿಯಾಗಿ ಹಮ್ಮಿಕೊಂಡಿದೆ. ಸಮಾರಂಭದಲ್ಲಿ ಸುಮಾರು 4-5 ಸಾವಿರ ಬೆಂಗಳೂರು ನಗರ ಜಿಲ್ಲೆಯ ಮಹಿಳಾ ಸರ್ಕಾರಿ ನೌಕರರು ಭಾಗವಹಿಸಲಿದ್ದು, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರವು ʼವಿಶೇಷ ಸಾಂದರ್ಭಿಕ ರಜೆʼಯನ್ನು ನೀಡಿದೆ. ಪ್ರಸ್ತುತ ಸಮೀಕ್ಷೆ/ ಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿರುವುದರಿಂದ ಮಹಿಳಾ ನೌಕರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಮಹಿಳಾ ಸರ್ಕಾರಿ ನೌಕರರು ಭಾಗವಹಿಸಲು ಅನುಕೂಲವಾಗುವಂತೆ ಅಂದು ಸಮೀಕ್ಷೆ/ಗಣತಿ ಕಾರ್ಯದಿಂದ ವಿನಾಯಿತಿ ನೀಡುವ ಮೂಲಕ ಉದ್ದೇಶಿತ ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ..
ಶೀಘ್ರದಲ್ಲೇ ಹುಬ್ಬಳ್ಳಿ-ಬೆಂಗಳೂರು-ಹೈದರಾಬಾದ್ ಮಧ್ಯೆ fly91 ವಿಮಾನಯಾನ ಸೇವೆ
ಸಕಾರಾತ್ಮಕ ಸ್ಪಂದನೆ
ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಮುಖ್ಯ ಆಯುಕ್ತರು ಏಪ್ರಿಲ್ 7ರಂದು ಸಮೀಕ್ಷೆ ಕಾರ್ಯದಿಂದ ಸರ್ಕಾರಿ ಮಹಿಳಾ ನೌಕರರಿಗೆ ವಿನಾಯಿತಿ ನೀಡುವುದಾಗಿ ಭರವಸೆ ನೀಡಿದ್ದಾಗಿ ಸಿ.ಎಸ್. ಷಡಾಕ್ಷರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.