ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MP Tejaswi Surya: ಇಸ್ರೇಲ್‌ನ ದಿಟ್ಟತನ ನಮಗೆ ಪಾಠವಾಗಬೇಕು: ವಿಶ್ವೇಶ್ವರ ಭಟ್‌ ಕೃತಿ ಬಿಡುಗಡೆಯಲ್ಲಿ ಸಂಸದ ತೇಜಸ್ವಿ ಸೂರ್ಯ

Vishweshwar Bhat: ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅವರ 103 ನೇ ಕೃತಿ ಬಿಡುಗಡೆ ಸಮಾರಂಭ ಇಂದು ನಡೆಯಿತು. ಬದುಕುಳಿದವರು ಕಂಡಂತೆʼ (Badukulidavaru Kandanthe Book) ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಭಾಗವಹಿಸಿದ್ದರು.

ಕೃತಿ ಬಿಡುಗಡೆ ಮಾಡಿದ ಸಂದರ್ಭ

ಬೆಂಗಳೂರು: ಇಸ್ರೇಲ್ (ISreal) ಈತನ್ನ ಮೇಲೆ ನಡೆದ ದಾಳಿಗಳನ್ನು ಸಾಮೂಹಿಕವಾಗಿ ಎದುರಿಸಿ ಮೆಟ್ಟಿ ನಿಂತಿದೆ. ಇಸ್ರೇಲ್‌ನಂತೆಯೇ ಭಾರತದ ಮೇಲೂ ಮುಸ್ಲಿಮರಿಂದ ಸಾಂಸ್ಕೃತಿಕ ದಾಳಿಗಳು ಆಗಿವೆ. ಅದನ್ನು ಎದುರಿಸುವ ಹೀರೋತನವನ್ನು ಬೆಳೆಸಿಕೊಳ್ಳಲು ವಿಶ್ವೇಶ್ಬರ ಭಟ್ಟರ ಕೃತಿ ನಮಗೆ ಪ್ರೇರೇಪಣೆ ನೀಡುತ್ತದೆ ಎಂದು ಬೆಂಗಳೂರು ದಕ್ಷಿಣ ಸಂಸದ (MP Tejaswi Surya) ತೇಜಸ್ವಿ ಸೂರ್ಯ ನುಡಿದರು.

ವಿಶ್ವವಾಣಿ, ವಿಶ್ವವಾಣಿ ಟಿವಿ ಮತ್ತು ಪ್ರವಾಸಿ ಪ್ರಪಂಚದ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್‌ ಅವರ 103ನೇ ಪುಸ್ತಕ ʼಬದುಕುಳಿದವರು ಕಂಡಂತೆʼ (Badukulidavaru Kandanthe Book) ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಭಟ್ಟರ ಜೀವನೋತ್ಸಾಹ ಹಾಗೂ ಪ್ರತಿಭೆಯಿಂದ ಪ್ರೇರಣೆ ಪಡದವನು ನಾನು. ಅವರು ಈ ಕೃತಿಯನ್ನು ನನಗೆ ಅರ್ಪಿಸಿದ್ದಾರೆ. ಅದಕ್ಕಾಗಿ ಧನ್ಯವಾದ. ಇಸ್ರೇಲಿನ ಮೇಲಿನ ದಾಳಿ ಕುರಿತು ಭಟ್ಟರು ಬರೆದ ಕೃತಿ ಭಾರತಕ್ಕೆ ಯಾಕೆ ಪ್ರಸ್ತುತ ಎಂಬುದನ್ನು ನಾವು ಗಮನಿಸಬೇಕು. ಭಾರತದಲ್ಲೂ ದಿಲ್ಲಿ, ಕಾಶ್ಮೀರದ ಮೇಲೆ ಉಗ್ರರ ದಾಳಿಗಳಾಗಿವೆ. ಇಸ್ರೇಲ್ ಮೇಲೆ ಹಾಗೂ ಭಾರತದ ಮೇಲೆ ದಾಳಿ ಎಸಗಿದವರ ಗುಂಪುಗಳು ಬೇರೆಯಾಗಿರಬಹುದು. ಆದರೆ ಅವರ ಮಾನಸಿಕತೆಯಲ್ಲಿ ವ್ಯತ್ಯಾಸ ಇಲ್ಲ. ಇಂಥ ದಾಳಿಗಳನ್ನು ಎದುರಿಸುವಲ್ಲಿ ಇಸ್ರೇಲ್ ಹಾಗೂ ನಮ್ಮ ಮಾನಸಿಕತೆಯಲ್ಲಿ ವ್ಯತ್ಯಾಸ ಇದೆ. ನಾವು ಇಸ್ರೇಲ್‌ನಿಂದ ಕಲಿಯಬೇಕಾದ ಪಾಠ ಬಹಳವಿದೆ ಎಂದರು.

ತೇಜಸ್ವಿ ಸೂರ್ಯ ಭಾಷಣದ ವಿಡಿಯೊ



ಇಸ್ರೇಲ್ ದೇಶ ಹುಟ್ಟಿದ ಕಾಲದಲ್ಲಿಯೇ 7 ದಿನಗಳ ಯುದ್ಧವನ್ನು ಎದುರಿಸಬೇಕಾಯಿತು. ಸುತ್ತಲಿನ ಅರಬ್ ದೇಶಗಳೆಲ್ಲ ಸೇರಿ ಮುಗಿಬಿದ್ದವು. ಅದನ್ನು ಅಂದಿನಿಂದ ಇಂದಿನವರೆಗೂ ಒಂದೇ ರೀತಿಯಲ್ಲಿ ಎದುರಿಸುತ್ತ ಬಂದಿದೆ. ಅಂದಿನಿಂದ ಇಂದಿಗೂ ಶಕ್ತಿ, ದಿಟ್ಟತನ ಉಳಿದಿದೆ. ಅದಕ್ಕೆ ಕಾರಣ, ಬಾಲ್ಯದಿಂದಲೇ ಅಲ್ಲಿ ಮಿಲಿಟರಿ ಹಾಗೂ ಸಾಂಸ್ಕೃತಿಕ ಪಾಠ ನೀಡಲಾಗುತ್ತದೆ. ಜರ್ಮನಿಯ‌ ಹಿಟ್ಲರ್ ನಡೆಸಿದ ಹಾಲೋಕಾಸ್ಟ್‌ ಚಿತ್ರಣ ನೀಡುವ ಮ್ಯೂಸಿಯಂಗಳು ಇವೆ. ಅಲ್ಲಿನ ಜನತೆ ಸಾಂಸ್ಕೃತಿಕ ದಿಟ್ಟತನ ಪ್ರದರ್ಶಿಸುತ್ತಾರೆ. ಆ ವಿವರಗಳನ್ನು ಶಾಲೆ ಹಾಗೂ ಕಾಲೇಜಿನ ಮಕ್ಕಳಿಗೆ ಕಡ್ಡಾಯವಾಗಿ ತೋರಿಸಿ ಪಾಠ ಮಾಡುತ್ತಾರೆ. ಅವರು ಅನುಭವಿಸಿದ ದೌರ್ಜನ್ಯ, ಎದುರಿಸಿದ ದಿಟ್ಟತನದ ರೀತಿಯ ಬಗ್ಗೆ ನೂರಾರು ಫಿಲಂಗಳಿವೆ. ಒಂದು ಕಾಲದಲ್ಲಿ ಸತ್ತೇ ಹೋಗಿದ್ದ ಹೀಬ್ರೂ ಭಾಷೆಯನ್ನು ಪುನರುಜ್ಜೀವನಗೊಳಿಸಿದ್ದಾರೆ. ಹದಿನೆಂಟು ವರ್ಷದ ಬಳಿಕ ಎಲ್ಲರಿಗೂ ಸೇನೆಯಲ್ಲಿ ಮೂರು ವರ್ಷ ತರಬೇತಿ ಕಡ್ಡಾಯ ಮಾಡಿದ್ದಾರೆ. ನಾವಿಲ್ಲಿ ರೀಲ್ಸ್ ನೋಡುತ್ತ ಕುಳಿತಿದ್ದೇವೆ ಎಂದರು.

ನಾನು ಐರನ್ ಮ್ಯಾನ್ ಮ್ಯಾರಥಾನ್‌ನಲ್ಲಿ ಭಾಗವಹಿಸಲು, ಫಿಟ್ನೆಸ್ ಕಾಪಾಡಿಕೊಳ್ಳಲು ಕೂಡ ಇಸ್ರೇಲ್ ಸ್ಫೂರ್ತಿ. ಅಲ್ಲಿ ಬೆಳಗ್ಗೆ ಎದ್ದು ನೋಡಿದರೆ ಎಲ್ಲರೂ ವ್ಯಾಯಾಮ, ಯೋಗ ಇತ್ಯಾದಿಗಳಲ್ಲಿ ತೊಡಗಿರುವುದು ಕಂಡುಬರುತ್ತದೆ. ಅಲ್ಲಿ ಬೊಜ್ಜು ಶರೀರ ಇರುವವರು ಕಡಿಮೆ. ಇದೆಲ್ಲ ನಮಗೆ ಪಾಠವಾಗಬೇಕು ಎಂದರು.

ಇತಿಹಾಸಕಾರ ವಿಲ್ ಡ್ಯುರಾಂಟ್ ಭಾರತದ ಮೇಲಿನ ಮುಸ್ಲಿಮರ ಶತಮಾನಗಳ ದಾಳಿ, ಮತಾಂತರ, ದೌರ್ಜನ್ಯವನ್ನು ಅತ್ಯಂತ ಬರ್ಬರ ಎಂದು ಬಣ್ಣಿಸುತ್ತಾನೆ. ಆದರೆ ನಮ್ಮ‌ ಇತಿಹಾಸಕಾರರು ಅದನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ. ಆ ದಾಳಿಯನ್ನು ನೆನಪಿಸುವ ಪ್ರಯತ್ನ  ನಮ್ಮಲ್ಲಿ ಆಗುತ್ತಿಲ್ಲ. ನಮ್ಮಲ್ಲಿ ಇತಿಹಾಸವನ್ನು ತಿರುಚಲಾಗಿದೆ. ಕಾಶಿ, ಅಯೋಧ್ಯೆಗಳ ಮೇಲೆ ನಡೆದ ಇಸ್ಲಾಮಿಕ್‌ ದಾಳಿಕೋರರ ದಾಳಿಗಳ ಬಗ್ಗೆ ಸಾಕಷ್ಟು ಎಎಸ್‌ಐ ಉತ್ಖನನ ಸಾಕ್ಷಿಗಳು ಇದ್ದರೂ ನಮ್ಮಲ್ಲಿ ಎಚ್ಚರ ಮೂಡಿಲ್ಲ. ನಮ್ಮಲ್ಲಿ ಎಚ್ಚರ ಬರುವುದು ಯಾವಾಗ ಎಂದು ಪ್ರಶ್ನಿಸಿದರು.

ಅವರ ಏರಿಯಾದಲ್ಲಿ ಗಣೇಶ ಮೆರವಣಿಗೆ ಯಾಕೆ ಮಾಡ್ತೀರಿ ಎಂದು ನಮ್ಮನ್ನು ಪ್ರಶ್ನಿಸುತ್ತಾರೆ. ಆದರೆ ಇಲ್ಲಿನ ಎಲ್ಲ ಏರಿಯಾವೂ ಭಾರತದ್ದು ಎಂಬುದನ್ನು ಮರೆಯುತ್ತಾರೆ. ಹದಿನೈದು ನಿಮಿಷ ಪೊಲೀಸರನ್ನು ಸುಮ್ಮನಿರಿಸಿದರೆ ಸಾಕು ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಗುಡುಗುತ್ತಾರೆ. ಇದು ಹಮಾಸ್ ಮಾನಸಿಕತೆಯೇ ಆಗಿದೆ. ನಮ್ಮಲ್ಲೂ ಹೀಗೆ ಆಯಿತು ಎಂಬುದನ್ನು ನೆನಪಿಸಿಕೊಳ್ಳಬೇಕಿದೆ. ಹೈದರಾಬಾದ್‌ನಲ್ಲಿ ರಜಾಕಾರರು, ಕರ್ನಾಟಕದಲ್ಲಿ ಹೈದರಾಲಿ, ಟಿಪ್ಪು ಇದನ್ನೇ ಮಾಡಿದರು. ಈ ಜಾಗೃತಿ ಬರಲಿಲ್ಲ ಎಂದರೆ ಸಮಾಜವನ್ನು ಕಟ್ಟುವುದು ಕಷ್ಟಸಾಧ್ಯ ಎಂದರು.

ಬೆಂಗಳೂರಿನ ಎಫ್‌ಕೆಸಿಸಿಐ ಸಭಾಂಗಣದಲ್ಲಿ  ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ ಜೋಶಿ ಕೃತಿ ಬಿಡುಗಡೆ ಮಾಡಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಇಸ್ರೇಲ್‌ನ ಭಾರತ ಡೆಪ್ಯುಟಿ ಕೌನ್ಸೆಲ್ ಜನರಲ್ ಇನ್ಬಾಲ್ ಸ್ಟೋಮ್ ಉಪಸ್ಥಿತರಿದ್ದರು. ಇಸ್ರೇಲ್‌ನ ಭಾರತ ಕೌನ್ಸೆಲ್ ಜನರಲ್ ಒರ್ಲಿ ವೆಯಿಟ್ಸನ್ ಆನ್‌ಲೈನ್ ಮೂಲಕ ಭಾಗವಹಿಸಿದರು.

ಕೃತಿಯ ಬಗ್ಗೆ:

2023ರ ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ನಡೆಸಿದ ಭಯಾನಕ ದಾಳಿ ಮತ್ತು ಹತ್ಯಾಕಾಂಡದಲ್ಲಿ ಬದುಕಿ ಉಳಿದವರು ಹೇಳಿದ ಮನ ಮಿಡಿಯುವ ರೋಚಕ ಕಥನವನ್ನು ಪುಸ್ತಕ ಒಳಗೊಂಡಿದೆ. ಮೂಲಕೃತಿಯನ್ನು ಯೇನ್‌ ಅಗಮೋನ್‌, ಓರಿಯಾ ಮೇವೊರೊಚ್‌ ರಚಿಸಿದ್ದಾರೆ.

ಹಮಾಸ್‌ ಉಗ್ರರು ದಾಳಿ ನಡೆಸಿದ್ದ ಸ್ಥಳವನ್ನು ಸಂದರ್ಶಿಸಿರುವ ವಿಶ್ವೇಶ್ವರ ಭಟ್‌ ಅವರು, ಅಲ್ಲಿಯೇ ಕೃತಿಯನ್ನು ಅನುವಾದಿಸಲು ನಿರ್ಧರಿಸಿದ್ದರು. ಹಮಾಸ್‌ ಉಗ್ರರ ನಡೆಸಿದ ದಾಳಿಯಲ್ಲಿ  251 ಜನರನ್ನು ಅಪಹರಿಸಿದ್ದರು. ಸಾವಿರದ ಇನ್ನೂರಕ್ಕೂ ಹೆಚ್ಚು ಮಂದಿ ಹತರಾದರು. ಈ ಘೋರ ನರಮೇಧದ ಬಗ್ಗೆ ಯೇರ್‌ ಅಗಮೋನ್‌ ಮತ್ಗು ಓರಿಯಾ ಮೇವೊರೊಚ್‌ ಅವರು ಬರೆದ ʼವನ್‌ ಡೇ ಇನ್‌ ಅಕ್ಟೋಬರ್‌ ʼ ಎಂಬ ಕೃತಿಯನ್ನು ವಿಶ್ವೇಶ್ವರ ಭಟ್‌ ಅವರು ಅನುವಾದಿಸಿದ್ದಾರೆ. ಹತ್ಯಾಕಾಂಡದಲ್ಲಿ ಬದುಕಿ ಉಳಿದವರು ಹೇಳಿರುವ, ಮನಮಿಡಿಯುವ, ಹೃದಯವಿದ್ರಾವಕ, ರೋಚಕ ಕಥನವನ್ನು ಇದು ಒಳಗೊಂಡಿದೆ. ಆ ಭೀಕರ ಘಟನೆಯನ್ನು 34 ಮಂದಿ ತಮ್ಮ ಅನುಭವದಿಂದ ವಿವರಿಸಿದ್ದು, ಈ ಅಪರೂಪದ ಧೈರ್ಯಶಾಲಿ ಕಥೆಯನ್ನು ಪುಸ್ತಕದಲ್ಲಿ ನೀವು ಓದಬಹುದು.