ಬೆಂಗಳೂರು: ಕರ್ನಾಟಕ ವಿವಾಹದಲ್ಲಿ ಆಯ್ಕೆ ಸ್ವಾತಂತ್ರ್ಯ ಹಾಗೂ ಮರ್ಯಾದೆ, ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ವಿಧೇಯಕ -2026' (Iva Nammava Iva Nammava Bill 2026) ಅನ್ನು ವಿಧಾನಸಭೆಯಲ್ಲಿ ಬುಧವಾರ ಮಂಡನೆ ಮಾಡಲಾಗಿದೆ. ಅಂತರ್ಜಾತಿ ವಿವಾಹವಾದವರನ್ನು ಮರ್ಯಾದೆ ಹೆಸರಿನಲ್ಲಿ ಕೊಲೆ, ಹಲ್ಲೆ ಹಾಗೂ ಬಹಿಷ್ಕಾರ ಮಾಡುವಂತಹ ಪ್ರಕರಣಗಳ ತಡೆಗೆ ಈ ಮಸೂದೆ ರೂಪಿಸಲಾಗಿದೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ಇವ ನಮ್ಮವ ಇವ ನಮ್ಮವ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಿದ್ದಾರೆ. ಈ ವಿಧೇಯಕವು ಅಂತರ್ಜಾತಿ ವಿವಾಹಿತರ ಹಕ್ಕುಗಳನ್ನು ಎತ್ತಿಹಿಡಿಯುವ ಮತ್ತು ಅವರಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವ ಹಲವು ಅಂಶಗಳನ್ನು ಒಳಗೊಂಡಿದೆ.
ವಿಧೇಯಕದ ಪ್ರಮುಖ ಅಂಶಗಳು
- ಅಂತರ್ಜಾತಿ ಮದುವೆಯಾದ ಕಾರಣಕ್ಕೆ ಜೋಡಿಗೆ ಅಥವಾ ಅವರ ಕುಟುಂಬಕ್ಕೆ ಸಾಮಾಜಿಕ ಅಥವಾ ಆರ್ಥಿಕ ಬಹಿಷ್ಕಾರ ಹಾಕುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದು ಕಾನೂನುಬಾಹಿರ ಮತ್ತು ದಂಡನೀಯ ಅಪರಾಧವಾಗಲಿದೆ.
- ಇಬ್ಬರು ವಯಸ್ಕರು ವಿವಾಹವಾಗಲು ಪೋಷಕರ ಒಪ್ಪಿಗೆ ಕಡ್ಡಾಯವಲ್ಲ ಎಂದು ವಿಧೇಯಕವು ಸ್ಪಷ್ಟಪಡಿಸುತ್ತದೆ. ಅವರ ಕುಟುಂಬಸ್ಥರು ವಿವಾಹಕ್ಕೆ ವಿರೋಧಿಸುವಂತಿಲ್ಲ.
- ಜೋಡಿಗಳನ್ನು ಅವರ ವಾಸಸ್ಥಳದಿಂದ ಹೊರಹೋಗುವಂತೆ ಒತ್ತಾಯಿಸುವುದು ಅಥವಾ ಪೂಜಾ ಸ್ಥಳಗಳಿಗೆ ಪ್ರವೇಶ ನಿರಾಕರಿಸುವುದು ಅಪರಾಧವಾಗುತ್ತದೆ.
- ವಿವಾಹಿತ ಜೋಡಿಗೆ ದೈಹಿಕ ಹಿಂಸೆ, ಮಾನಸಿಕ ನಿಂದನೆ, ಕಿಡ್ನ್ಯಾಪ್ ಮಾಡುವುದು, ಅಥವಾ ಬಲವಂತವಾಗಿ ಬೇರ್ಪಡಿಸುವ ಪ್ರಯತ್ನಗಳು ಕಾನೂನುಬಾಹಿರ. ಲೈಂಗಿಕ ಹಿಂಸೆ ಮತ್ತು ಬಲವಂತದ ಗರ್ಭಪಾತಕ್ಕೆ ಒತ್ತಡ ಹೇರುವುದು ಕಠಿಣ ಶಿಕ್ಷೆಗೆ ಅರ್ಹವಾದ ಅಪರಾಧಗಳಾಗಿವೆ.
- ದಂಪತಿಯ ಕೆಲಸಕ್ಕೆ ಅಡ್ಡಿಪಡಿಸುವುದು, ಕೆಲಸ ಕೊಡಲು ನಿರಾಕರಿಸುವುದು, ಬ್ಯಾಂಕ್ ಖಾತೆ ಸ್ಥಗಿತಗೊಳಿಸುವುದು, ಅಥವಾ ಕುಟುಂಬದ ಆಸ್ತಿಯಿಂದ ವಂಚಿಸುವುದು ಅಪರಾಧವಾಗುತ್ತದೆ.
- ಈ ಜೋಡಿಗೆ ಸಹಕಾರ ನೀಡಿದವರನ್ನು ಬಹಿಷ್ಕರಿಸುವುದು ಅಥವಾ ಅವರ ಮೇಲೆ ಒತ್ತಡ ಹೇರುವುದು ಕೂಡ ಶಿಕ್ಷಾರ್ಹ ಅಪರಾಧವಾಗಿದೆ.
- ಅಂತರಜಾತಿ ವಿವಾಹವಾದವರನ್ನು ಬಲವಂತವಾಗಿ ಬೇರ್ಪಡಿಸಿ ಬೇರೆ ಮದುವೆ ಮಾಡಿಸುವುದನ್ನು ನಿಷೇಧಿಸಲಾಗಿದೆ.
- ವಿವಾಹಿತ ಜೋಡಿಯ ವಿಚಾರದಲ್ಲಿ ಸಾಕ್ಷಿಗಳ ಗುರುತು ಮತ್ತು ವಿಳಾಸವನ್ನು ಬಹಿರಂಗಪಡಿಸದಂತೆ ರಕ್ಷಣೆ ನೀಡಲಾಗಿದೆ.
ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆ:
ವಿಧೇಯಕದ ನಿಯಮಗಳನ್ನು ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಮರ್ಯಾದಾ ಹತ್ಯೆ ನಡೆದರೆ, ಅಪರಾಧಿಗಳಿಗೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ದಂಪತಿಯನ್ನು ಗಾಯಗೊಳಿಸಿದರೆ, 3 ವರ್ಷಗಳ ಜೈಲು ಶಿಕ್ಷೆ ಮತ್ತು 3 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲು ಅವಕಾಶವಿದೆ. ದಂಪತಿಯನ್ನು ಬೆದರಿಸಿದರೆ 5 ವರ್ಷಗಳವರೆಗೆ ಶಿಕ್ಷೆ ಮತ್ತು 2 ಲಕ್ಷ ರೂಪಾಯಿ ದಂಡ. ನಿರಂತರ ಬೆದರಿಕೆ ಹಾಕಿದರೆ ಶಿಕ್ಷೆಯನ್ನು 7 ವರ್ಷಗಳವರೆಗೆ ವಿಸ್ತರಿಸಬಹುದು.