ಬೆಂಗಳೂರು, ನ.24: ತುಂಗಭದ್ರಾ ಡ್ಯಾಂನಿಂದ ಎರಡನೇ ಬೆಳೆಗೆ ನೀರು ಹರಿಸುವಂತೆ ಒತ್ತಾಯಿಸಿ, ತುಂಗಭದ್ರ ಡ್ಯಾಮ್ ಗೇಟ್ ಅಳವಡಿಕೆ ವಿಳಂಬ ಧೋರಣೆ ಖಂಡಿಸಿ ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ ಸಾವಿರಾರು ರೈತರ ನೇತೃತ್ವದಲ್ಲಿ ನಾಳೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನೇತೃತ್ವದಲ್ಲಿ ರಾಯಚೂರಿನ ಸಿಂಧನೂರಿನಲ್ಲಿ ಬೃಹತ್ ಪ್ರತಿಭಟನೆ (JDS Protest) ಮತ್ತು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಅವರು, ತುಂಗಭದ್ರಾ ಜಲಾಶಯ ವ್ಯಾಪ್ತಿಯ 4 ಜಿಲ್ಲೆಗಳ 2ನೇ ಬೆಳೆಗೆ ನೀರು ಹರಿಸಲು ಸಾಧ್ಯವಾಗದಿದ್ದರೆ ಪ್ರತಿ ಎಕರೆಗೆ 50,000 ರೂ. ಪರಿಹಾರ ನೀಡಬೇಕು. ಮೆಕ್ಕೆಜೋಳ, ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ರೈತರ ಜತೆ ಹೋರಾಟ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿ ಕೆಲಸ ಮಾಡುತ್ತಿದೆ
ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿ ಕೆಲಸ ಮಾಡುತ್ತಿದೆ. ಅತಿವೃಷ್ಟಿಗೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಇನ್ನು ಸಂಕಷ್ಟದಲ್ಲಿರುವ ರೈತರ ಎರಡನೇ ಬೆಳೆಗೂ ನೀರು ಅಂದ್ರೆ ಹೇಗೆ.? ರೈತರ ಸಮಸ್ಯೆಗಳಿಗೆ ಈ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ ಎಂದು ಇದರಿಂದ ನಾಳೆ ಸಿಂಧೂರಿನ ಕೋಟೆ ಈರಣ್ಣ ದೇವಸ್ಥಾನ ಎಪಿಎಂಸಿ ಆವರಣದವರೆಗೆ ಪ್ರತಿಭಟನೆ ನಡೆಸಲಿದ್ದಾರೆ. ಇನ್ನು ಮೆಕ್ಕೆಜೋಳದ ಬೆಲೆ ಕುಸಿತ ಕಂಡಿದೆ. ಭತ್ತದ ದರವು ಕುಸಿದಿದೆ. ಸರ್ಕಾರ ಈವರೆಗೂ ಖರೀದಿ ಕೇಂದ್ರ ಆರಂಭಿಸಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: ಗ್ಯಾರಂಟಿ, ಗ್ಯಾರಂಟಿ ಅಂತಾರೆ, ಅದನ್ನೂ ಸರಿಯಾಗಿ ಕೊಟ್ಟಿಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಖಿಲ್ ವ್ಯಂಗ್ಯ
ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಈ ನಾಲ್ಕು ಜಿಲ್ಲೆಗಳ 10 ಲಕ್ಷ ಎಕರೆ ಜಮೀನು ಬದುಕೇ ತುಂಗಭದ್ರಾ ಜಲಾಶಯದ ಮೇಲೆ ನಿಂತಿದೆ. ಜಲಾಶಯದ ಕ್ರಸ್ಟ್ ಕಿತ್ತು ಹೋಗಿದ್ದರಿಂದ ಸಾವಿರಾರು ಕ್ಯೂಸೆಕ್ ನೀರು ಸಮುದ್ರ ಪಾಲಾಗಿದೆ. ಇದರಿಂದ ನಾವು ರೈತರ ಪರವಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.