ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Namma Metro: ನಮ್ಮ ಮೆಟ್ರೋದಲ್ಲಿ ಕನ್ನಡೇತರರ ನೇಮಕಾತಿ, ಸೂಚನೆ ಹಿಂಪಡೆದ ಬಿಎಂಆರ್‌ಸಿಎಲ್‌

ಕನ್ನಡ ಜ್ಞಾನ - ಓದುವುದು, ಬರೆಯುವುದು, ಮಾತನಾಡುವುದು ಮತ್ತು ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ. ಆದಾಗ್ಯೂ, ಕನ್ನಡ ಜ್ಞಾನವಿಲ್ಲದವರು ಸೇರಿದ ಒಂದು ವರ್ಷದೊಳಗೆ ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಪಡೆಯಬೇಕು ಮತ್ತು ಬಿಎಂಆರ್‌ಸಿಎಲ್ ಅವರಿಗೆ ತರಗತಿಗಳನ್ನು ನಡೆಸುತ್ತದೆ ಎಂದು ಪ್ರಕಟಿಸಿತ್ತು.

ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಕನ್ನಡೇತರರಿಗೆ (non kannadigd) ನೇಮಕಾತಿ ಅಧಿಸೂಚನೆ ನೀಡಿದ್ದ ಆದೇಶವನ್ನು ಹೋರಾಟದ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್‌ (BMRCL) ಹಿಂಪಡೆದಿದೆ. ಗುತ್ತಿಗೆ ಆಧಾರದ ಮೇಲೆ 50 ಟ್ರೈನ್‌ ಆಪರೇಟರ್‌ ಹುದ್ದೆಗಳ ನೇಮಕಾತಿಗೆ ಮೆಟ್ರೋ ಮುಂದಾಗಿತ್ತು. ಇದನ್ನು ವಿರೋಧಿಸಿ ಬಿಎಂಆರ್‌ಸಿಎಲ್‌ ಕಚೇರಿ ಮುಂದೆ ಕನ್ನಡಪರ ಹೋರಾಟಗಾರರು ಧರಣಿ ಮಾಡಿದ್ದರು. ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಇದೀಗ ಕನ್ನಡೇತರರಿಗೆ ನೇಮಕಾತಿ ಅಧಿಸೂಚನೆಯನ್ನು ವಾಪಸ್‌ ಪಡೆದಿದ್ದಾರೆ.

ಮಾರ್ಚ್ 12ರಂದು ಪ್ರಕಟವಾದ ಜಾಹೀರಾತಿನಲ್ಲಿ ಕನ್ನಡ ಜ್ಞಾನ - ಓದುವುದು, ಬರೆಯುವುದು, ಮಾತನಾಡುವುದು ಮತ್ತು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ. ಆದಾಗ್ಯೂ, ಕನ್ನಡ ಜ್ಞಾನವಿಲ್ಲದವರು ಸೇರಿದ ಒಂದು ವರ್ಷದೊಳಗೆ ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಪಡೆಯಬೇಕು ಮತ್ತು ಬಿಎಂಆರ್‌ಸಿಎಲ್ ಅವರಿಗೆ ತರಗತಿಗಳನ್ನು ನಡೆಸುತ್ತದೆ ಎಂದು ಪ್ರಕಟಿಸಿತ್ತು.

ಈ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದು, ಮೆಟ್ರೋ ಸಾರಥಿ ನೇಮಕದಲ್ಲಿ ಕನ್ನಡಿಗರಿಗೇ ಆದ್ಯತೆ, ಬೆಂಗಳೂರು ಮೆಟ್ರೋ ಚಾಲಕರ ಹುದ್ದೆಗೆ ‘ಅನುಭವ ಅಗತ್ಯʼಎಂದು ಹೊರಡಿಸಲಾಗಿದ್ದ ಬಿಎಂಆರ್‌ಸಿಎಲ್‌ ಅಧಿಸೂಚನೆಯನ್ನು ಹಿಂಪಡೆಯಲು ಹಾಗೂ ಕರ್ನಾಟಕದಲ್ಲಿ ಹುಟ್ಟಿ, ಕನ್ನಡ ಬಲ್ಲ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಅರ್ಹತೆಗಳನ್ನು ತಿದ್ದುಪಡಿ ಮಾಡಲು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದೆ. ಅದರಂತೆ ಅವರು ಈ ನೇಮಕಾತಿ ಅಧಿಸೂಚನೆಯನ್ನು ಹಿಂಪಡೆದಿದ್ದಾರೆ. ಪರಿಷ್ಕೃತ ಅಧಿಸೂಚನೆಯನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ. ನಾಡು-ನುಡಿ, ಜಲದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ತಿಳಿಸಿದ್ದಾರೆ.

ನಮ್ಮ ಮೆಟ್ರೋದಲ್ಲಿ ಕನ್ನಡೇತರರಿಗೆ ನೇಮಕಾತಿ ಕಲ್ಪಿಸುವ ಪ್ರಕ್ರಿಯೆ ಕೈಬಿಡಬೇಕು. ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸುವಂತೆ ಬಿಎಂಆರ್​ಸಿಎಲ್​​​ ಎಂಡಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಪತ್ರ ಬರೆದಿದ್ದರು. "ನಮ್ಮ ಮೆಟ್ರೋ ಸಂಸ್ಥೆಯಲ್ಲಿ ಅನ್ಯ ಭಾಷಿಕರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಲು ಅನುಕೂಲ ಮಾಡಿಕೊಡುವ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿರುವ ವಿಷಯವು ಕನ್ನಡಿಗರಿಗೆ ನೋವು ತರುವ ಸಂಗತಿಯಾಗಿದೆ. ಇವು ಕೇವಲ ತಾತ್ಕಲಿಕ ಹುದ್ದೆಗಳೆಂದು ನಿಮ್ಮ ಸಂಸ್ಥೆಯು ನೀಡಿರುವ ಸಮಜಾಯಿಷಿ ಕನ್ನಡಿಗರ ವೇದನೆಯನ್ನು ಇನ್ನಷ್ಟು ಹೆಚ್ಚಿಸಿದೆ. ಕರ್ನಾಟಕದ ಸಂಸ್ಥೆಯೊಂದು ಅನ್ಯ ಭಾಷಿಕರಿಗೆ ನೀಡುವ ಈ ರೀತಿಯ ಆಹ್ವಾನ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಕನ್ನಡಿಗರ ಆತ್ಮಸ್ಥೆರ್ಯವನ್ನು ಕಸಿಯುವುದಷ್ಟೇ ಅಲ್ಲ, ಇದು ಸಾಂವಿಧಾನಿಕ ಆಶಯಗಳ ಸಂಪೂರ್ಣ ಉಲ್ಲಂಘನೆಯಾಗುತ್ತದೆ" ಎಂದಿದ್ದಾರೆ.

ನೇಮಕಾತಿ ನಿಯಮಗಳಲ್ಲಿ ಕನ್ನಡಿಗರಿಗೆ ಪ್ರಾಧಾನ್ಯತೆಯನ್ನು ಉಲ್ಲೇಖಿಸಿದಲ್ಲಿ ಈ ರೀತಿಯ ಸಮಸ್ಯೆಗಳಿಗೆ ಪರಿಹಾರ ದೊರಕುತ್ತಿತ್ತು. ತಾಂತ್ರಿಕ ಹುದ್ದೆಯ ನೆಪವೊಡ್ಡಿ ಕನ್ನಡಿಗರನ್ನು ನೇಮಕಾತಿ ಪ್ರಕ್ರಿಯೆಯಿಂದ ದೂರವಿರಿಸುವುದು ಯಾವುದೇ ರೀತಿಯಲ್ಲೂ ಒಪ್ಪಲು ಸಾಧ್ಯವಿಲ್ಲದ ಅಂಶ. ಅಂತೆಯೇ ನೇಮಕಗೊಂಡ ಕನ್ನಡೇತರರಿಗೆ ಆದ್ಯತೆ ಮೇರೆಗೆ ಕನ್ನಡವನ್ನು ಕಲಿಸಬೇಕಾದುದು ಸಹ ನಮ್ಮ ಮೆಟ್ರೋ ಸಂಸ್ಥೆಯ ಪ್ರಾಥಮಿಕ ಜವಾಬ್ದಾರಿಯಾಗಿರುತ್ತದೆ ಎಂದು ಉಲ್ಲೇಖಿಸಲಾಗಿದೆ.

ನಮ್ಮ ಮೆಟ್ರೋ ಸಂಸ್ಥೆ ಕೂಡಲೇ ಕನ್ನಡೇತರರಿಗೆ ನೇಮಕಾತಿ ಕಲ್ಪಿಸುವ ಪ್ರಕ್ರಿಯೆಯನ್ನು ತಡೆಹಿಡಿಯಬೇಕು. ಹಿಂದಿನ ನೇಮಕಾತಿ ಅಧಿಸೂಚನೆಗಳಲ್ಲಿ ನೇಮಕಗೊಂಡ ಕನ್ನಡೇತರರಿಗೆ ಕನ್ನಡ ಕಲಿಸುವ ಕಾರ್ಯಕ್ಕೆ ಮುಂದಾಗಬೇಕು. ಕನ್ನಡ ಕಲಿಯದ ಕನ್ನಡೇತರರನ್ನು ಸೇವೆಯಿಂದ ಬಿಡುಗಡೆ ಮಾಡಬೇಕು ಮತ್ತು ತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳಿಗೆ ಸಂಪೂರ್ಣವಾಗಿ ಕನ್ನಡಿಗರನ್ನೇ ನೇಮಕ ಮಾಡಬೇಕು. ಮೆಟ್ರೋ ಸಂಸ್ಥೆಯಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನೆಯ ಕುರಿತಂತೆ ಇಷ್ಟರಲ್ಲಿಯೇ ಭೇಟಿ ನೀಡ ಬಯಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Namma Metro: ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆ ಖಂಡಿಸಿ ರೈಲಿನೊಳಗೇ ಪ್ರತಿಭಟನೆ

ಹರೀಶ್‌ ಕೇರ

View all posts by this author