ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನೃತ್ಯ, ಅಭಿನಯ, ಅರ್ಥಗಾರಿಕೆ ಮೇಳೈಸಿರುವ ಕಲೆ ಯಕ್ಷಗಾನ: ಡಿ.ವಿ. ವೆಂಕಟಾಚಲಪತಿ

Kalotsava -2025: ಕರ್ನಾಟಕ ಕಲಾದರ್ಶಿನಿ ಸಂಸ್ಥೆ ಮಕ್ಕಳು ಮತ್ತು ಮಹಿಳೆಯರಿಗೆ ವಿಶೇಷವಾಗಿ ಯಕ್ಷಗಾನವನ್ನು ಕಲಿಸುತ್ತಿರುವುದರ ಜತೆಗೆ, ಕರಾವಳಿಯ ಕಲೆಯನ್ನು ರಾಜಧಾನಿಯಲ್ಲಿಯೂ ಪ್ರಚುರಪಡಿಸುತ್ತಿರುವುದು ಶ್ಲಾಘಿಸಬೇಕಾದ ವಿಷಯ ಎಂದು ಶಾರದಾ ವಿಕಾಸ ಟ್ರಸ್ಟ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಐಟಿ ಉದ್ಯಮಿ ಡಿ.ವಿ. ವೆಂಕಟಾಚಲಪತಿ ತಿಳಿಸಿದ್ದಾರೆ.

ಬೆಂಗಳೂರು: ನೃತ್ಯ, ಅಭಿನಯ, ಅರ್ಥಗಾರಿಕೆ, ಸಂಗೀತ ಸೇರಿಕೊಂಡಂತೆ ಕಲಾ ಪ್ರಾಕಾರಗಳನ್ನು ಒಂದೇ ವೇದಿಕೆಯಲ್ಲಿ ಮೇಳೈಸಲಾಗಿರುವ ಕಲೆ ಯಕ್ಷಗಾನ ಕಲೆ ಎಂದು ಶಾರದಾ ವಿಕಾಸ ಟ್ರಸ್ಟ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಐಟಿ ಉದ್ಯಮಿ ಡಿ.ವಿ. ವೆಂಕಟಾಚಲಪತಿ ಅಭಿಪ್ರಾಯಪಟ್ಟರು. ಕನ್ನಡ ಸಂಸ್ಕೃತಿ ಇಲಾಖೆಯ ನಯನ ಸಭಾಂಗಣದಲ್ಲಿ ಕರ್ನಾಟಕ ಕಲಾದರ್ಶಿನಿ ಸಂಸ್ಥೆಯ ಕಲೋತ್ಸವ -2025 (Kalotsava -2025) ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಕರ್ನಾಟಕ ಕಲಾದರ್ಶಿನಿ ಸಂಸ್ಥೆ ಮಕ್ಕಳು ಮತ್ತು ಮಹಿಳೆಯರಿಗೆ ವಿಶೇಷವಾಗಿ ಯಕ್ಷಗಾನವನ್ನು ಕಲಿಸುತ್ತಿರುವುದರ ಜತೆಗೆ, ಕರಾವಳಿಯ ಕಲೆಯನ್ನು ರಾಜಧಾನಿಯಲ್ಲಿಯೂ ಪ್ರಚುರಪಡಿಸುತ್ತಿರುವುದು ಶ್ಲಾಘಿಸಬೇಕಾದ ವಿಷಯ ಎಂದು ಶ್ಲಾಘಿಸಿದರು. ಮನರಂಜನೆ ಜತೆಗೆ ಅನೇಕ ನೀತಿ ವಿಷಯಗಳನ್ನೂ ಪುರಾಣ ಮತ್ತಿತರ ಕಥೆಗಳ ಮೂಲಕ ಜನರಿಗೆ ತಿಳಿಹೇಳುವ ಯಕ್ಷಗಾನ ಅತ್ಯುತ್ತಮ ಕಲೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.

Kalotsava 2025 1

ಯಕ್ಷಗಾನ ವಿದ್ವಾಂಸ, ಡಾ. ಆನಂದರಾಮ ಉಪಾಧ್ಯ ಮಾತನಾಡಿ, ಯಕ್ಷಗಾನದಲ್ಲಿ ನಾನಾ ಪ್ರಾಕಾರಗಳಿದ್ದು, ತೆಂಕುತಿಟ್ಟು, ಬಡಗುತಿಟ್ಟು ಕಲೆಗಳಂತೆಯೇ ಇತ್ತೀಚೆಗೆ ಮೂಡಲಪಾಳ್ಯ ಯಕ್ಷಗಾನ ತಿಟ್ಟು ಕೂಡಾ ಬೆಳೆಯುತ್ತಿದೆ. ಜತೆಗೆ ಮೂಡಲಪಾಳ್ಯ ಯಕ್ಷಗಾನ ಕಲೆಯ ಬಗ್ಗೆ ಸಂಶೋಧನೆಗಳೂ ನಡೆಯುತ್ತಿವೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ನವೀನ್‌ ಅಮ್ಮೆಂಬಳ ಮಾತನಾಡಿ, ಮಕ್ಕಳು, ಮಹಿಳೆಯರಿಗೆ ಯಕ್ಷಗಾನವನ್ನು ಕಲಿಸಿ ಬೆಳೆಸುತ್ತಿರುವ ಕರ್ನಾಟಕ ಕಲಾದರ್ಶಿನಿ ತಂಡದ ರೂವಾರಿಗಳಾದ ಗುರು ಶ್ರೀನಿವಾಸ ಸಾಸ್ತಾನ ಮತ್ತು ಅವರ ಪತ್ನಿ ಗೌರಿ ಕೆ. ಅವರನ್ನು ಶ್ಲಾಘಿಸಿದರು.

Kalotsava 2025 2

ಕರ್ನಾಟಕ ಕಲಾದರ್ಶಿನಿ ಸಂಸ್ಥೆಯ ಅಧ್ಯಕ್ಷ ಮಟ್ಟಿ ರಾಮಚಂದ್ರ ರಾವ್‌ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ಯಕ್ಷ ಗುರು ಶ್ರೀನಿವಾಸ ಸಾಸ್ತಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.‌

ಈ ಸುದ್ದಿಯನ್ನೂ ಓದಿ | Karnataka Escoms: ಐಟಿ ವ್ಯವಸ್ಥೆಯ ತುರ್ತು ನಿರ್ವಹಣೆ ; ಅ.27, 28ರಂದು ಎಸ್ಕಾಂಗಳ ಆನ್‌ಲೈನ್‌ ಸೇವೆ ಅಲಭ್ಯ

ಪೂರ್ವರಂಗ ಪ್ರದರ್ಶನ

ಕಲೋತ್ಸವದ ಆರಂಭದಲ್ಲಿ ತೆಂಕು ಮತ್ತು ಬಡಗು ತಿಟ್ಟುಗಳ ಯಕ್ಷಗಾನ ಮುಖವರ್ಣಿಕೆ ಕಾರ್ಯಗಾರ ನಡೆಯಿತು. ಯಕ್ಷಗಾನ ಪೂರ್ವರಂಗ ಪ್ರದರ್ಶನವನ್ನು ಬಾಲ ಕಲಾವಿದರು ಪ್ರದರ್ಶಿಸಿದರು. ಬಳಿಕ ಬಾಲಕಲಾವಿದರು ಸಮುದ್ರ ಮಥನ ಎಂಬ ಪ್ರಸಂಗವನ್ನು ಪ್ರದರ್ಶಿಸಿದರು ಮತ್ತು ಹಿರಿಯ ಕಲಾವಿದರಿಂದ ದೇವಿ ಮಹಾತ್ಮೆ ಎಂಬ ಕಥಾನಕದ ತೆಂಕು-ಬಡಗು ಕೂಡಾಟ ನಡೆಯಿತು.