ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರಾವಳಿ ಸಂಸ್ಕೃತಿಯ ಭಾಗವಾದ ʼಕಂಬಳʼ ತುಳುನಾಡಿನ ಸೀಮೆ ದಾಟಿ ಹೋಗಬಾರದು: ಡಾ. ವಿಶ್ವ ಸಂತೋಷ ಭಾರತೀ ಸ್ವಾಮೀಜಿ

ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ತುಳುವೆರೆ ಚಾವಡಿ ವತಿಯಿಂದ ಆಯೋಜಿಸಿದ್ದ 28ನೇ ವರ್ಷದ 'ಪರ್ಬದ ಲೇಸ್' ಕಾರ್ಯಕ್ರಮದಲ್ಲಿ ಡಾ. ವಿಶ್ವ ಸಂತೋಷ ಭಾರತೀ ಸ್ವಾಮೀಜಿ ಮಾತನಾಡಿದ್ದಾರೆ. ಕಂಬಳ ಅಂದ್ರೆ ಬರೀ ಕೋಣಗಳ ಓಟವಲ್ಲ. ತುಳುನಾಡಿನ ಇತಿಹಾಸ, ಪರಂಪರೆ ಹಾಗೂ ದೈವರಾಧನೆಯ ಹಿನ್ನೆಲೆಯಿಂದ ಕಂಬಳ ಪಾವಿತ್ರ್ಯತೆ ಪಡೆದುಕೊಂಡಿದೆ. ಹಾಗಾಗಿ ಕಂಬಳ ಪ್ರತಿಷ್ಠೆಯ ಅಖಾಡವಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು, ಜುಲೈ 26: ಕರಾವಳಿಯ ಸಂಸ್ಕೃತಿ, ಪರಂಪರೆ ಮತ್ತು ಪದ್ಧತಿಯ ಭಾಗವಾಗಿರುವ ಕಂಬಳ (Kambala) ತುಳುನಾಡಿನ ಸೀಮೆಯನ್ನು ದಾಟಿ ಹೋಗಬಾರದು ಎಂದು ಡಾ. ವಿಶ್ವ ಸಂತೋಷ ಭಾರತೀ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ತುಳುವೆರೆ ಚಾವಡಿ ವತಿಯಿಂದ ಆಯೋಜಿಸಿದ್ದ 28ನೇ ವರ್ಷದ 'ಪರ್ಬದ ಲೇಸ್' ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನಿಸಿ ಅವರು ಮಾತನಾಡಿದರು.

ಕಂಬಳ ಅಂದ್ರೆ ಬರೀ ಕೋಣಗಳ ಓಟವಲ್ಲ. ತುಳುನಾಡಿನ ಇತಿಹಾಸ, ಪರಂಪರೆ ಹಾಗೂ ದೈವರಾಧನೆಯ ಹಿನ್ನೆಲೆಯಿಂದ ಕಂಬಳ ಪಾವಿತ್ರ್ಯತೆ ಪಡೆದುಕೊಂಡಿದೆ. ಹಾಗಾಗಿ ಕಂಬಳ ಪ್ರತಿಷ್ಠೆಯ ಅಖಾಡವಾಗಬಾರದು ಎಂದು ಅಭಿಪ್ರಾಯಪಟ್ಟರು.

Parbada Les (1)

ಇನ್ನು, ದುಡ್ಡು, ಅಂತಸ್ತು ನೋಡಿಕೊಂಡು ನಾಗಾರಾಧನೆ ಮಾಡಬಾರದು. ಜನರಿಗೆ ಇರುವಂತಹ ತೊಂದರೆ ನೋಡಿಯೇ ನಾಗರಾಧನೆ ಮಾಡಬೇಕು.ನಾಗರಾಧನೆ ಅಂದ್ರೆ ಮೂಢನಂಬಿಕೆ, ಆಡಂಬರದ ಆಚರಣೆಯಾಗಬಾರದು ಎಂದರು.

ರಾಜಕಾರಣಿಗಳು, ಗಣ್ಯರನ್ನು ಕರೆಸುವಾಗ ಯಕ್ಷಗಾನ ಕಲಾವಿದರನ್ನು ಬಳಸಬಾರದು. ಗಂಡುಕಲೆಯ ಯಕ್ಷಗಾನದ ಘನತೆಯನ್ನು ಉಳಿಸಿಕೊಳ್ಳಬೇಕು ಎಂದ ಅವರು, ಭಜನೆ ತುಳುನಾಡಿನ ಸಂಸ್ಕೃತಿಯಾಗಿ ಬೆಳೆಯುತ್ತಿದೆ. ಪ್ರತಿ ಹಳ್ಳಿಯಲ್ಲೂ ಕುಣಿತ ಭಜನೆಯಿಂದ ಸಂಸ್ಕೃತಿ ಪರಂಪರೆಯನ್ನು ಉಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Parbada Les (2)

ಕನ್ನಡ ಭಾಷೆಯಷ್ಟೇ ಪ್ರಾಚೀನ ಭಾಷೆ ತುಳು ಭಾಷೆ. ಮಲೆಯಾಳಂ ಭಾಷೆಯ ಹುಟ್ಟಿಗೂ ಕಾರಣವಾಗಿದೆ. ತುಳುನಾಡಿನ ಇತಿಹಾಸವೇ ಶ್ರೀಮಂತವಾಗಿದೆ. ನಮ್ಮ ಸಂಸ್ಕೃತಿ, ಪರಂಪರೆಯನ್ನು ನಾವು ಉಳಿಸಿಕೊಳ್ಳಬೇಕು. ನಮ್ಮ ಯುವ ಜನತೆಗೆ ಸಂಸ್ಕೃತಿ ಸಂಪ್ರದಾಯವನ್ನು ಮರೆಯಬಾರದು ಎಂದು ಕಿವಿ ಮಾತು ಹೇಳಿದರು.

ಇನ್ನು ಪರೋಕ್ಷವಾಗಿ ಅಂತರ್ಜಾತಿ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದ ಅವರು, ಜಾತಿ ಇರಬೇಕು. ಪ್ರತಿಯೊಂದು ಜಾತಿಯಲ್ಲೂ ಒಂದೊಂದು ರೀತಿಯ ಪದ್ಧತಿಗಳಿರುತ್ತವೆ. ಅದನ್ನು ನಾವು ಉಳಿಸಿಕೊಳ್ಳಬೇಕು. ಇತ್ತೀಚೆಗೆ ವಿಚ್ಛೇದನ ಕೂಡ ಆಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಎಂದರು.

Parbada Les (3)

ಹಾಗೇ, ಅನೇಕ ಕಡೆಗಳಲ್ಲಿ ಮಕ್ಕಳನ್ನು ಪಡೆದುಕೊಳ್ಳಲು ಐವಿಎಫ್ ಕೇಂದ್ರಗಳು ತಲೆ ಎತ್ತುತ್ತಿವೆ. ಕೆಲವೇ ದಶಕಗಳ ಹಿಂದೆ ಮಕ್ಕಳು ಸಾಕು ಎನ್ನುತ್ತಿದ್ದರು. ಈಗ ಒಂದು ಮಗುವಿನ ಜನನಕ್ಕೆ ಐವಿಎಫ್ ಮೂಲಕ ವೈದ್ಯರು, ದಂಪತಿ ಹರಸಾಹಸ ಪಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಬಂದಿರುವುದು ದುರಾದೃಷ್ಟಕರ ಎಂದರು.

ದೈವರಾಧನೆ ಕರಾವಳಿಗೆ ಸೀಮಿತವಾಗಿರಬೇಕು. ಘಟ್ಟಹತ್ತಿ ಮೇಲೆ ಹೋಗುವುದು ಸರಿಯಲ್ಲ. ದೈವರಾಧನೆ ತನ್ನತನವನ್ನು ಕಳೆದುಕೊಳ್ಳುತಿದೆ. ಆಧುನಿಕತೆಯ ಸೋಗಿಗೆ ಸಂಪ್ರದಾಯ ಪದ್ದತಿ ನಿಯಮಗಳು ಬದಲಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಮಾತನಾಡಿ, ತುಳು ಭಾಷಿಗರ ಮನೆಯಲ್ಲಿ ಮೊದಲು ತುಳು ಭಾಷೆ ಅಧಿಕೃತ ಭಾಷೆಯಾಗಬೇಕು. ತುಳು ಭಾಷೆ ಪಠ್ಯದಲ್ಲಿ ಹೆಚ್ಚುವರಿ ಭಾಷೆಯಾದರೆ ಕನ್ನಡ ಭಾಷೆಗೆ ಯಾವುದೇ ತೊಂದರೆ ಆಗುವುದಿಲ್ಲ. ಪಕ್ಕದ ಆಂಧ್ರ ಪ್ರದೇಶದಲ್ಲಿ ಉರ್ದು ಭಾಷೆಯನ್ನು ಹೆಚ್ಚುವರಿ ಭಾಷೆ ಮಾಡಿದರೂ ತೆಲುಗು ಭಾಷೆಗೆ ತೊಂದರೆ ಆಗಿಲ್ಲ. ಹೀಗಾಗಿ, ತುಳು ಭಾಷೆ ಹೆಚ್ಚುವರಿ ಭಾಷೆಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

ಕರ್ನಾಟಕ ಕುಸ್ತಿ ಅಕಾಡೆಮಿ ಅಧ್ಯಕ್ಷ ಗುಣರಂಜನ್ ಶೆಟ್ಟಿ ಅವರು ತುಳುನಾಡಿನ ಜಾನಪದ ಪದಗಳ 'ಸಂಪೊಲಿಗೆ' ಪುಸ್ತಕ ಹಾಗೂ 'ಮೋಕ್ಷ' ತುಳು ಭಜನೆ ವಿಡಿಯೋ ಬಿಡುಗಡೆ ಮಾಡಿದರು.

ಇದೇ ವೇಳೆ ಪ್ರತಿವರ್ಷದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು. ಪ್ರತಿಷ್ಠಿತ ದಿ. ಡಿ.ಕೆ. ಚೌಟ ಪ್ರಶಸ್ತಿಯನ್ನು ಕೃಷಿ ಕ್ಷೇತ್ರದ ಸಾಧಕ ಕಡಮಜಲು ಶುಭಾಷ್ ರೈ ಹಾಗೂ ದಿ. ವಿಜಯ್ ಕುಮಾರ್ ಕುಲಶೇಕರ ನೆನಪಿನ ಪ್ರಶಸ್ತಿಯನ್ನು ತುಳು ಭಾಷೆಯ ಸೇವೆಗೆ ಶ್ರಮಿಸಿದ್ದ ಜಿ.ವಿ.ಎಸ್. ಉಳ್ಳಾಲ್ ಅವರಿಗೆ ನೀಡಿ ಗೌರವಿಸಲಾಯಿತ್ತು. ಹಾಗೇ, ತುಳುನಾಡು ಸಿರಿ ಪ್ರಶಸ್ತಿಯನ್ನು ಸಮಾಜ ಸೇವಕರಾದ ಕೋಡಿಬೆಟ್ಟು ಅರುಣ್ ಶೆಟ್ಟಿ, ಮತ್ತು ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವಿಜಯಲಕ್ಷ್ಮಿ ಕಟೀಲ್ ಅವರಿಗೆ ನೀಡಿ ಸನ್ಮಾನಿಸಲಾಯಿತು. ಚಿತ್ರಕಲೆಯಲ್ಲಿ ಅಪ್ರತಿಮ ಸಾಧನೆ ಮಾಡಿರುವ ಗಣೇಶ್ ಪಂಜಿಮಾರ್ ಮತ್ತು ಕುಸುಮಾ ಪಂಜಿಮಾರ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯ್ತು.

ಬೆಂಗಳೂರಿನ ತುಳುವೆರೆ ಚಾವಡಿಯ ಗೌರವಾಧ್ಯಕ್ಷ ಪುರುಷೋತ್ತಮ್ ಚೇಂಡ್ಲಾ, ಅಧ್ಯಕರಾದ ಮುಂಡಾಲುಗುತ್ತು ವಿಶು ಕುಮಾರ್ ರೈ, ಪ್ರಧಾನ ಕಾರ್ಯದರ್ಶಿ ರಘುವೀರ್ ನಾಯ್ಕ್ ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 30ಕ್ಕೂ ಹೆಚ್ಚು ತುಳು ಭಾಷಿಗರ ಸಂಘಟನೆಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹಾಗೇ, ಕರಾವಳಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೆಳೆಯಿತ್ತು.