ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ (EVM) ಬದಲು ಮತಪತ್ರ (Ballot Paper) ಬಳಕೆಗೆ ಅವಕಾಶ ನೀಡುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ 2026, ಪ್ರತಿಪಕ್ಷಗಳ ವಿರೋಧದ ಮಧ್ಯೆ ಸೋಮವಾರ ಅಂಗೀಕಾರಗೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ವಿಧೇಯಕ ಮಂಡಿಸಿದ್ದು, ಈ ವೇಳೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಸೂದೆ ಪ್ರತಿ ಹರಿದು ಹಾಕಿ ಸಭಾತ್ಯಾಗ ಮಾಡಿದರು. ಅಲ್ಲದೇ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ವಾಕ್ಸಮರಕ್ಕೆ ಕಾರಣವಾಯಿತು.
ಮಸೂದೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಇವಿಎಂ ಮೇಲೆ ವಿಶ್ವಾಸ ಕಡಿಮೆಯಾಗುತ್ತಿದೆ. ಮಹಾರಾಷ್ಟ್ರ ವಿಧಾನಭೆ ಚುನಾವಣೆಯಲ್ಲಿ ಆಯೋಗದ ವರದಿಯಂತೆ ಸಂಜೆ 58.22% ಮತದಾನ ಆಗಿತ್ತು. ರಾತ್ರಿ 11.30 ಗಂಟೆಗೆ 68.02% ಆಗಿದೆ. ಅಂದರೆ ಐದು ಗಂಟೆಯಲ್ಲಿ 50 ಲಕ್ಷ ಮತ ಸೇರ್ಪಡೆ ಹೇಗಾಯ್ತು ಎಂದು ಪ್ರಶ್ನಿಸಿದರು.
ಹರಿಯಾಣ ಮತ್ತು ಮಧ್ಯಪ್ರದೇಶದಲ್ಲಿ ಅದೇ ರೀತಿ ಆಗಿದೆ. ಹಲವಾರು ಸಂಸ್ಥೆಗಳು ಈ ಬಗ್ಗೆ ಪ್ರಶ್ನೆ ಮಾಡಿವೆ. ಆದರೆ, ಚುನಾವಣಾ ಆಯೋಗ ಈ ಬಗ್ಗೆ ಸಮರ್ಪಕ ಉತ್ತರ ನೀಡಿಲ್ಲ. ಈ ಮಸೂದೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮತಪತ್ರದ ಮೂಲಕ ಮಾಡಲು ಈ ತಿದ್ದುಪಡಿ ತರುತ್ತಿದ್ದೇವೆ. ಮತಯಂತ್ರದ ಬದಲು ಮತಪತ್ರ ಬಳಕೆ ಮಾಡಲು ಈ ಮಸೂದೆ ತರಲಾಗುತ್ತಿದೆ. ಮಸೂದೆಯಲ್ಲಿ 6 ಬದಲಾಣೆಗಳನ್ನು ತರಲಾಗುತ್ತಿದೆ ಎಂದರು.
Davanagere Byelection: ದಾವಣಗೆರೆಯಲ್ಲಿ ಸಮರ್ಥ ಶಾಮನೂರು ನಾಮಪತ್ರ; ಸಿಎಂ, ಡಿಸಿಎಂ ಸಾಥ್
ಪಾರದರ್ಶಕವಾಗಿ ಚುನಾವಣೆ ನಡೆಸುವುದು ನಮ್ಮ ಉದ್ದೇಶ
ಚುನಾವಣಾ ವ್ಯವಸ್ಥೆ ಮೇಲಿನ ವಿಶ್ವಾಸ ಮರುಸ್ಥಾಪಿಸುವ ಪ್ರಯತ್ನವೇ ಈ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ, 2026 ಆಗಿದೆ. ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದರೆ ಅದು ನಮ್ಮ ಭಾರತ. ಇಂತಹ ದೇಶದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳೇ ಇರಲಿ, ರಾಜ್ಯ ಅಥವಾ ಕೇಂದ್ರ ಸರ್ಕಾರಗಳನ್ನು ಆಯ್ಕೆ ಮಾಡುವ ಚುನಾವಣೆಗಳೇ ಇರಲಿ, ಸಂಪೂರ್ಣ ಚುನಾವಣಾ ಪ್ರಕ್ರಿಯೆಯ ಮೇಲಿನ ಜನರ ನಂಬಿಕೆಗೆ ಘಾಸಿ ಉಂಟಾಗಬಾರದು. ಆದರೆ ಇತ್ತೀಚಿನ ದಿನಗಳಲ್ಲಿ ಈ ಪರಿಸ್ಥಿತಿ ಇಲ್ಲ.
ಚುನಾವಣೆಗಳನ್ನು ಪಾರದರ್ಶಕ ಹಾಗೂ ಮುಕ್ತವಾಗಿ ನಡೆಸಬೇಕು ಎಂಬುವುದು ನಮ್ಮ ಉದ್ದೇಶ. ಮತದಾನದ ಗೌಪ್ಯತೆಯನ್ನು ಕಾಪಾಡಬೇಕು, ಮತದಾರರ ಹಕ್ಕುಗಳನ್ನು ಕಾಪಾಡಬೇಕು. ಮತಯಂತ್ರಗಳು ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿವೆ. ಅನೇಕ ಫಲಿತಾಂಶಗಳ ಕುರಿತು ಜನರು ಬಹಿರಂಗವಾಗಿ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇವುಗಳಿಗೆ ಚುನಾವಣಾ ಆಯೋಗ ಉತ್ತರ ನೀಡದಿರುವುದು ಸಂಶಯವನ್ನು ಹೆಚ್ಚಿಸುತ್ತಿದೆ. ಇದು ಮುಂದುವರಿದರೆ ಜನರು ಚುನಾವಣಾ ವ್ಯವಸ್ಥೆ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಾರೆ. ಅವರ ವಿಶ್ವಾಸವನ್ನು ಮರುಸ್ಥಾಪಿಸುವುದು ಈಗಿನ ತುರ್ತು ಅಗತ್ಯ. ಅದಕ್ಕಾಗಿ ನಾವು ಮುಂದಿನ ಗ್ರಾಮಪಂಚಾಯತಿಗಳ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ಮೂಲಕ ನಡೆಸಲು ಈ ವಿಧೇಯಕವನ್ನು ಮಂಡಿಸಿದ್ದೇವೆ.
ಈ ವಿಧೇಯಕದ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ. ಮತದಾರರಿಗೆ ತಮ್ಮ ಮತದ ದುರುಪಯೋಗ ನಡೆಯುತ್ತಿಲ್ಲ ಎಂಬ ನಂಬಿಕೆ ಮತ್ತು ವಿಶ್ವಾಸವನ್ನು ಮರಳಿ ಮೂಡಿಸಬೇಕು. ಸ್ಥಳೀಯ ಆಡಳಿತ ವ್ಯವಸ್ಥೆಯ ಆಯ್ಕೆಯಲ್ಲಿ ಪಾರದರ್ಶಕತೆ ಕಾಣಿಸಬೇಕು. ರಾಷ್ಟ್ರೀಯ ಚುನಾವಣಾ ಆಯೋಗವು ತನ್ನ ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ. ಇವಿಎಂಗಳಿಗಿಂತಲೂ ಮತಪತ್ರಗಳು ಹೆಚ್ಚು ವಿಶ್ವಾಸಾರ್ಹ ಎಂಬುದನ್ನು ಸಾಬೀತುಪಡಿಸಿ, ಚುನಾವಣಾ ಆಯೋಗವು ತನ್ನ ಹಠಮಾರಿ ನಿಲುವನ್ನು ಬದಲಿಸುವಂತಹ ಹೋರಾಟವನ್ನು ಕರ್ನಾಟಕದಿಂದಲೇ ಆರಂಭಿಸುವುದು ಅಗತ್ಯವಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.