ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Karnataka SIR: ಎಸ್‌ಐಆರ್‌ ಅಕ್ರಮ; ತನಿಖೆಗೆ ಆಗ್ರಹಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ರಾಜ್ಯ ಬಿಜೆಪಿ ದೂರು

ಹಲವಾರು ಸ್ಥಳಗಳಲ್ಲಿ SIR ಪ್ರಕ್ರಿಯೆಯನ್ನು ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ನಡೆಸುತ್ತಿಲ್ಲ ಎಂಬುದು ಕಂಡುಬಂದಿದೆ. ಕೆಲವು ಸಂದರ್ಭಗಳಲ್ಲಿ, ಈ ಪ್ರಕ್ರಿಯೆಯನ್ನು ನಿಗದಿತ ಅಧಿಕೃತ ಸ್ಥಳಗಳ ಬದಲಾಗಿ ಮಸೀದಿಗಳು, ಸಮುದಾಯ ಕೇಂದ್ರಗಳು, ಕಲ್ಯಾಣ ಮಂಟಪಗಳು ಹಾಗೂ ಶಾಸಕರಕಚೇರಿಗಳು ಮತ್ತು ನಿವಾಸಗಳಲ್ಲಿ ನಡೆಸಲಾಗುತ್ತಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗವನ್ನು ಬಿಜೆಪಿ ಒತ್ತಾಯಿಸಿದೆ.

ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಕಂಡುಬಂದಿರುವ ಗಂಭೀರ ಕಾರ್ಯವಿಧಾನದ ಲೋಪಗಳು ಮತ್ತು ವ್ಯವಸ್ಥಿತ ಅಕ್ರಮಗಳ ತಡೆಗೆ ಕ್ರಮ ಕೈಗೊಳ್ಳಬೇಕು. ಹಾಗೆಯೇ SIR ಅನುಷ್ಠಾನಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ತಕ್ಷಣವೇ ತನಿಖೆಗೆ ಆದೇಶಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ರಾಜ್ಯ ಬಿಜೆಪಿಯಿಂದ ದೂರು ಸಲ್ಲಿಸಲಾಗಿದೆ.

ನಗರದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ದೂರು ಸಲ್ಲಿಸಲಾಗಿದೆ. ಈ SIR ಅನುಷ್ಠಾನ ವಿಧಾನವು ಜನಪ್ರತಿನಿಧಿಗಳು, ಬೂತ್ ಮಟ್ಟದ ಅಧಿಕಾರಿಗಳು (BLOs), ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಸಾರ್ವಜನಿಕರಲ್ಲಿ ವ್ಯಾಪಕ ಆತಂಕವನ್ನು ಉಂಟುಮಾಡಿದೆ. ಅಲ್ಲದೆ ಈ ಪ್ರಕ್ರಿಯೆಯ ಪಾರದರ್ಶಕತೆ, ವಿಶ್ವಾಸಾರ್ಹತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಮೂಡಿವೆ.

ಜಿಬಿಎನಲ್ಲಿ ಸಮಾನಾಂತರ SIR ಪ್ರಕ್ರಿಯೆ

ಭಾರತೀಯ ಚುನಾವಣಾ ಆಯೋಗವು ರಾಜ್ಯಾದ್ಯಂತ ಎಸ್‌ಐಆರ್‌ ಪ್ರಕ್ರಿಯೆ ಪ್ರಾರಂಭಿಸಿದೆ. ಆದರೆ, ಇದೇ ಸಂದರ್ಭದಲ್ಲಿ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (GBA) 27 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಇದಕ್ಕೆ ಸಮಾನಾಂತರವಾಗಿ ಮತ್ತೊಂದು SIR ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದೆ. ಈ ಎರಡೂ ಪ್ರಕ್ರಿಯೆಗಳನ್ನು ಏಕಕಾಲದಲ್ಲಿ ಜಾರಿಗೊಳಿಸಿರುವುದು, ಅನ್ವಯವಾಗುವ ಪರಿಶೀಲನಾ ವಿಧಾನ ಮತ್ತು ಅನುಷ್ಠಾನದ ಜವಾಬ್ದಾರಿ ಹೊಂದಿರುವ ಅಧಿಕಾರ ಯಾರದು ಎಂಬ ವಿಷಯದಲ್ಲಿ ಮತದಾರರು, ಬೂತ್ ಮಟ್ಟದ ಅಧಿಕಾರಿಗಳು (BLOs), ರಾಜಕೀಯ ಪ್ರತಿನಿಧಿಗಳು ಹಾಗೂ ಕ್ಷೇತ್ರ ಮಟ್ಟದ ಅಧಿಕಾರಿಗಳ ನಡುವೆ ಗೊಂದಲ ಮೂಡಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತುರ್ತು ಮಧ್ಯಸ್ಥಿಕೆಗೆ ಆಗ್ರಹ:

ಮುಖ್ಯ ಚುನಾವಣಾಧಿಕಾರಿಗಳು (CEO) ಮತ್ತು ಚುನಾವಣಾ ಆಯೋಗವು ಈ ಸಮಾನಾಂತರ SIR ಪ್ರಕ್ರಿಯೆಯ ಮುಂದುವರಿಕೆಯನ್ನು ತಕ್ಷಣವೇ ಪರಿಶೀಲಿಸಬೇಕು ಮತ್ತು ಇಡೀ ರಾಜ್ಯದಲ್ಲಿ ಏಕರೂಪದ ಪರಿಷ್ಕರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದು ಬಿಜೆಪಿ ಮನವಿ ಮಾಡಿದೆ.

ಕಡ್ಡಾಯ ಮನೆ-ಮನೆ ಪರಿಶೀಲನೆ ನಡೆಯಲಿ

ಭಾರತೀಯ ಚುನಾವಣಾ ಆಯೋಗವು SIR ಪ್ರಕ್ರಿಯೆಯ ಪ್ರಮುಖ ಆಧಾರಸ್ತಂಭವಾಗಿ ಕಡ್ಡಾಯ ಹಾಗೂ ಕಟ್ಟುನಿಟ್ಟಾದ ಮನೆ-ಮನೆ ಪರಿಶೀಲನೆಗೆ ಆದೇಶಿಸಿದೆ. ನಕಲಿ ಮತದಾರರನ್ನು ತೆಗೆದುಹಾಕಲು, ಮೃತರ ಹೆಸರುಗಳನ್ನು ಕೈಬಿಡಲು, ಕಾಯಂ ಆಗಿ ವಾಸಸ್ಥಳ ಬದಲಾಯಿಸಿದವರನ್ನು ಗುರುತಿಸಲು ಮತ್ತು ಕೇವಲ ಅರ್ಹ ಮತದಾರರು ಮಾತ್ರ ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ಮಾಡಲು ಈ ಎಸ್‌ಐಆರ್‌ ಕೈಗೆತ್ತಿಕೊಳ್ಳಲಾಗಿದೆ.

ಆದರೆ, ಈ ಕಡ್ಡಾಯ ಆದೇಶಕ್ಕೆ ವ್ಯತಿರಿಕ್ತವಾಗಿ, ಹಲವಾರು ಪ್ರದೇಶಗಳಲ್ಲಿ ಸಮುದಾಯ ಭವನಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಶಿಬಿರಗಳನ್ನು (Camps) ನಡೆಸುವ ಮೂಲಕ ಈ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತಿದೆ. ನಿಗದಿತ ಕಾರ್ಯವಿಧಾನದಿಂದ ಈ ರೀತಿ ವಿಮುಖರಾಗಿರುವುದು ಸಮಗ್ರ ಪರಿಷ್ಕರಣೆಯ ಮೂಲ ಆಶಯವನ್ನೇ ಬುಡಮೇಲು ಮಾಡುತ್ತದೆ. ಇಂತಹ ಲೋಪಗಳು ಪ್ರಕ್ರಿಯೆಯಲ್ಲಿರುವ ಶಾಸನಬದ್ಧ ಸುರಕ್ಷತಾ ಕ್ರಮಗಳನ್ನು ದುರ್ಬಲಗೊಳಿಸುವುದಲ್ಲದೆ, ಮತದಾರರ ಪಟ್ಟಿಯಲ್ಲಿ ತಪ್ಪುಗಳು ಮತ್ತು ಅಕ್ರಮಗಳು ಉಂಟಾಗುವ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತವೆ ಎಂದು ತಿಳಿಸಿದೆ.

ಬೂತ್ ಮಟ್ಟದ ಅಧಿಕಾರಿಗಳ (BLOs) ಕಡೆಗಣನೆ

SIR ಅನುಷ್ಠಾನದಲ್ಲಿ ಬೂತ್ ಮಟ್ಟದ ಅಧಿಕಾರಿಗಳನ್ನು (BLOs) ಕಡೆಗಣಿಸಲಾಗುತ್ತಿದೆ ಮತ್ತು ಆಯೋಗದ ಸೂಚನೆಗಳ ಪ್ರಕಾರ ತಮ್ಮ ಶಾಸನಬದ್ಧ ಕರ್ತವ್ಯಗಳನ್ನು ನಿರ್ವಹಿಸಲು ಅವರಿಗೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ನಂಬಲರ್ಹ ಮನವಿಗಳು ನಮಗೆ ಬಂದಿವೆ. ಬಿ.ಎಲ್.ಒ (BLO)ಗಳಿಗೆ ಶ್ರದ್ಧೆಯಿಂದ ಕ್ಷೇತ್ರ ಮಟ್ಟದ ಪರಿಶೀಲನೆ ನಡೆಸಲು ಅಧಿಕಾರ ನೀಡುವ ಬದಲು, ರಾಜ್ಯ ಆಡಳಿತ ಯಂತ್ರವು SIR ಪ್ರಕ್ರಿಯೆಯ ಪವಿತ್ರತೆಯನ್ನು ಕುಂದಿಸುವಂತಹ ಕಾರ್ಯವಿಧಾನಗಳನ್ನು ಆಶ್ರಯಿಸಿದೆ. ಈ ಧೋರಣೆಯು ಮತದಾರರ ಪಟ್ಟಿ ಪರಿಷ್ಕರಣೆಯ ಸ್ವಾತಂತ್ರ್ಯ ಮತ್ತು ವಿಶ್ವಾಸಾರ್ಹತೆಯನ್ನು ಕುಸಿಯುವಂತೆ ಮಾಡುತ್ತದೆ.

SIR ಪ್ರಕ್ರಿಯೆ ವೇಳೆ ಹಲವೆಡೆ ಅಕ್ರಮ

ಹಲವಾರು ಸ್ಥಳಗಳಲ್ಲಿ SIR ಪ್ರಕ್ರಿಯೆಯನ್ನು ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ನಡೆಸುತ್ತಿಲ್ಲ ಎಂಬುದು ಕಂಡುಬಂದಿದೆ. ಕೆಲವು ಸಂದರ್ಭಗಳಲ್ಲಿ, ಈ ಪ್ರಕ್ರಿಯೆಯನ್ನು ನಿಗದಿತ ಅಧಿಕೃತ ಸ್ಥಳಗಳ ಬದಲಾಗಿ ಮಸೀದಿಗಳು, ಸಮುದಾಯ ಕೇಂದ್ರಗಳು, ಕಲ್ಯಾಣ ಮಂಟಪಗಳು ಹಾಗೂ ಶಾಸಕರ (MLAs) ಕಚೇರಿಗಳು ಮತ್ತು ನಿವಾಸಗಳಲ್ಲಿ ನಡೆಸಲಾಗುತ್ತಿದೆ.

ಬೆಂಗಳೂರಿನ ಚಾಮರಾಜಪೇಟೆ, ಗೋವಿಂದರಾಜನಗರ, ಜಯನಗರ, ಕಲಬುರಗಿ ಗ್ರಾಮಾಂತರ, ಕುಣಿಗಲ್, ಮಲ್ಲೇಶ್ವರಂ, ಮೈಸೂರು, ನರಸಿಂಹರಾಜ, ಶಾಂತಿನಗರ, ಶಿವಾಜಿನಗರ, ಯಶವಂತಪುರ ಮತ್ತು ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾನೂನುಬಾಹಿರವಾಗಿ ಎಸ್‌ಐಆರ್‌ ನಡೆದಿದೆ. ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

SIR in Karnataka: ರಾಮನಗರ SIR ಪ್ರಕ್ರಿಯೆಯಲ್ಲಿ ಬೃಹತ್ ಅಕ್ರಮ; ಪ್ರಲ್ಹಾದ್‌ ಜೋಶಿ ಆರೋಪ

ರಾಜ್ಯ ಬಿಜೆಪಿಯ ಬೇಡಿಕೆಗಳೇನು?

  • ಕರ್ನಾಟಕದಾದ್ಯಂತ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR) ಅನುಷ್ಠಾನಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ತಕ್ಷಣವೇ ತನಿಖೆಗೆ ಆದೇಶಿಸಬೇಕು.
  • ಸಮುದಾಯ ಭವನಗಳು ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಶಿಬಿರ ಆಧಾರಿತ ಪರಿಶೀಲನೆ ಮೂಲಕ ಬೂತ್ ಮಟ್ಟದ ಅಧಿಕಾರಿಗಳು (BLOs) ನಡೆಸಬೇಕಾದ ಕಡ್ಡಾಯ ಮನೆ-ಮನೆ ಪರಿಶೀಲನಾ ಪ್ರಕ್ರಿಯೆಯನ್ನು ದುರ್ಬಲಗೊಳಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
  • ಬಿ.ಎಲ್.ಒ (BLO)ಗಳು ತಮ್ಮ ಕರ್ತವ್ಯಗಳನ್ನು ಸ್ವತಂತ್ರವಾಗಿ ಮತ್ತು ಆಯೋಗದ ನಿರ್ದೇಶನಗಳಿಗೆ ಕಟ್ಟುನಿಟ್ಟಾಗಿ ಅನುಗುಣವಾಗಿ ನಿರ್ವಹಿಸಲು ಅವಕಾಶ ನೀಡಲಾಗುತ್ತಿದೆಯೇ ಎಂಬುದನ್ನು ನಿರ್ಧರಿಸಬೇಕು; ಮತ್ತು
  • ಯಾವುದೇ ಅನರ್ಹ ವ್ಯಕ್ತಿ, ಅಕ್ರಮ ವಲಸಿಗರು ಅಥವಾ ವಿದೇಶಿ ನಾಗರಿಕರು ಸೇರಿದಂತೆ ಯಾರೊಬ್ಬರ ಹೆಸರೂ ಮತದಾರರ ಪಟ್ಟಿಗೆ ಸೇರ್ಪಡೆಯಾಗದಂತೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಲಾಗಿದೆ.