ಬೆಂಗಳೂರು: ಮಂಡ್ಯದ ಮೈಶುಗರ್ ಕಾರ್ಖಾನೆಯ (Mysugar) ಆಧುನೀಕರಣ ಹಾಗೂ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ (Bengaluru New International Cricket Stadium) ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet meeting) ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಮೈಶುಗರ್ ಕಾರ್ಖಾನೆಯ ದುರಸ್ತಿ ಮತ್ತು ಆಧುನೀಕರಣಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ. ಕಾರ್ಖಾನೆಯಲ್ಲಿ ಪ್ರತಿ ದಿನ 5,000 ಟನ್ (5000 TCD) ಕಬ್ಬು ನುರಿಯುವ ಸಾಮರ್ಥ್ಯದ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗುವುದು ಸೇರಿ ಇಡೀ ಯೋಜನೆಯ ಕಾಮಗಾರಿಗಾಗಿ ಒಟ್ಟು 60 ಕೋಟಿ ರೂಪಾಯಿ ವೆಚ್ಚ ಮಾಡಲು ತೀರ್ಮಾನಿಸಲಾಗಿದೆ.
ಆನೇಕಲ್‌ನ ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸೂರ್ಯನಗರದಲ್ಲಿ (ಕೆಎಚ್‌ಬಿ ಸೂರ್ಯಸಿಟಿ) 80 ಸಾವಿರ ಆಸನಗಳ ಸಾಮರ್ಥ್ಯವಿರುವ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸುಮಾರು 813 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕ್ರೀಡಾಂಗಣ ತಲೆ ಎತ್ತಲಿದೆ.
ಒಟ್ಟು 75 ಎಕರೆ ವಿಸ್ತಾರವಾದ ಜಮೀನಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಮತ್ತು ಕ್ರೀಡಾಂಗಣ ಸಂಕೀರ್ಣ ನಿರ್ಮಾಣವನ್ನು 1,980 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳುವ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ಆದರೆ, ಸದ್ಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಮಾತ್ರ ಸಂಪುಟ ಸಭೆ ಅನುಮೋದನೆ ನೀಡಿದೆ. ಕ್ರೀಡಾಂಗಣ ಸಂಕೀರ್ಣ ನಿರ್ಮಾಣ ಪ್ರಸ್ತಾವನೆಯನ್ನು ಸದ್ಯಕ್ಕೆ ತಡೆಹಿಡಿದಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಸೂಚನೆ ಹೊರಡಿಸುವ ಬಗ್ಗೆ ಬಿಜೆಪಿಯವರು ಧ್ವನಿ ಎತ್ತುತ್ತಿಲ್ಲ: ಡಿ.ಕೆ. ಶಿವಕುಮಾರ್
ಮರ್ಯಾದೆ ಹತ್ಯೆ ಮತ್ತಿತರ ಅಪರಾಧ ಕೃತ್ಯಗಳ ನಿಯಂತ್ರಣಕ್ಕಾಗಿ ಹೊಸ ಕಾನೂನು ಜಾರಿ ಉದ್ದೇಶದ ಮಹತ್ವದ ವಿಧೇಯಕವನ್ನು ರಾಜ್ಯ ಸಚಿವ ಸಂಪುಟ ಸಭೆ ಅನುಮೋದಿಸಿದೆ. 'ಕರ್ನಾಟಕ ವಿವಾಹ ಆಯ್ಕೆ ಸ್ವಾತಂತ್ರ್ಯ ಮತ್ತು ಗೌರವ, ಸಂಪ್ರದಾಯದ ಹೆಸರಿನಲ್ಲಿ ಅಪರಾಧ ತಡೆ ಮತ್ತು ಪ್ರತಿಬಂಧಕ (ಇವ ನಮ್ಮವ ಇವ ನಮ್ಮವ) ವಿಧೇಯಕ -2026' ಅನ್ನು ಸಂಪುಟ ಅನುಮೋದಿಸಿದೆ.
ಅಂತರ್ಜಾತಿ ವಿವಾಹಗಳಿಗೆ ಘನತೆ ಮತ್ತು ಗೌರವ ತಂದುಕೊಡುವುದು, ಜಾತಿ ಆಧಾರದಲ್ಲಿ ತಾರತಮ್ಯ ಮತ್ತು ದೌರ್ಜನ್ಯಗಳನ್ನು ತಪ್ಪಿಸಲು ಈ ವಿಧೇಯಕಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ.
ಇದೇ ವೇಳೆ ವೃತ್ತಿ, ಕಸುಬು ಮತ್ತು ಉದ್ಯೋಗಗಳ ಮೇಲಿನ ತೆರಿಗೆ ತಿದ್ದುಪಡಿ ವಿಧೇಯಕ -2026, ಖಾಸಗಿ ವೈದ್ಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ -2026, ಕಂದಾಯ ಸೇವೆಗಳ ವೃಂದ ಮತ್ತು ನೇಮಕ ನಿಯಮ-2026ಕ್ಕೆ ಅನಮೋದನೆ ನೀಡಲಾಗಿದೆ.
ಉರ್ದು ಶಾಲೆಗಳ ಉನ್ನತೀಕರಣ
ರಾಜ್ಯದ 76 ಮೌಲಾನಾ ಆಜಾದ್ ಆಂಗ್ಲ ಮಾದರಿ ಶಾಲೆಗಳು ಹಾಗೂ 41 ಉರ್ದು ಮಾಧ್ಯಮ ಶಾಲೆಗಳನ್ನು 'ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ (ಕೆಪಿಎಸ್) ಉನ್ನತೀಕರಿಸಲು ಸಂಪುಟ ತೀರ್ಮಾನಿಸಿ, ಈ ಉದ್ದೇಶಕ್ಕೆ ಒಟ್ಟು 683.33 ಕೋಟಿ ರೂ. ಭರಿಸಲು ನಿರ್ಧರಿಸಿದೆ.
ಸಚಿವ ಸಂಪುಟ ಸಭೆಯ ಇತರ ಪ್ರಮುಖ ನಿರ್ಣಯಗಳು
- ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಡೆಗೆ 10.83 ಕೋಟಿ ವೆಚ್ಚದಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ.
- ಖೇಲೋ ಇಂಡಿಯಾ ಯೋಜನೆಯಡಿ ಮಂಡ್ಯದ ಕೃಷಿ ವಿಜ್ಞಾನ ವಿವಿಯಲ್ಲಿ14 ಕೋಟಿ ವೆಚ್ಚದಲ್ಲಿ ಬಹುಪಯೋಗಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ.
- ಮೂಲ್ಕಿ ತಾಲೂಕು ಪ್ರಜಾಸೌಧ ಕಟ್ಟಡ ನಿರ್ಮಾಣ ಕಾಮಗಾರಿಗಳ 11.60 ಕೋಟಿ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ.
- ಗದಗ, ಶಿರಹಟ್ಟಿ ಮತ್ತು ಮುಂಡರಗಿ ತಾಲೂಕುಗಳ ಗ್ರಾಮೀಣ ಪ್ರದೇಶಗಳಿಗೆ 110.65 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ.
- ಮಂಡ್ಯದ ಕಾವೇರಿ ಶಾಖಾ ನಾಲೆ, ಕೆರಗೋಡು, ಶಿಂಷಾ ಮತ್ತು ಮದ್ದೂರು ಶಾಖಾ ನಾಲೆಗಳ ವ್ಯಾಪ್ತಿಯ ವಿತರಣಾ ಕಾಲುವೆ ಮತ್ತು ಪಿಕಪ್ ನಾಲೆಗಳನ್ನು 100 ಕೋಟಿ ವೆಚ್ಚದಲ್ಲಿ ಆಧುನೀಕರಣ ಮಾಡಲು ಸಂಪುಟ ಒಪ್ಪಿಗೆ.