ಬೆಂಗಳೂರು: ಬೆಂಗಳೂರಿನ ಕುಮಾರಕೃಪ ಅತಿಥಿ ಗೃಹ ಇನ್ನು ಮುಂದೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಲಿದ್ದು, ಇದಕ್ಕೆ ʼಗಂಗಾʼ ಎಂದು ಹೆಸರಿಡಲಾಗಿದೆ. ನೂತನ ಅಧಿಕೃತ ನಿವಾಸಕ್ಕೆ (CM DK Shivakumar's Housewarming Ceremony) ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಂಪತಿ ಸೋಮವಾರ ಹೊಸ್ತಿಲು ಪೂಜೆ ನೆರವೇರಿಸಿ ಹಾಲು ಉಕ್ಕಿಸುವ ಮೂಲಕ ಗೃಹ ಪ್ರವೇಶ ಮಾಡಿದರು.
ಕುಮಾರಕೃಪ ಅತಿಥಿ ಗೃಹದ ಮುಖ್ಯ ಕಟ್ಟಡ ಮುತ್ತು ಅನೆಕ್ಸ್ ಕಟ್ಟಡ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿ ಪರಿವರ್ತಿಸಲಾಗಿದೆ. ಕಟ್ಟಡ ಪಾರಂಪರಿಕೆಗೆ ಧಕ್ಕೆಯಾಗದಂತೆ ಈ ಕಟ್ಟಡವನ್ನು ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿ ಪರಿವರ್ತಿಸಿರುವುದಾಗಿ ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಇಂದು ಕುಮಾರಕೃಪಾ ರಸ್ತೆಯಲ್ಲಿರುವ ಸರ್ಕಾರಿ ಅಧಿಕೃತ ನಿವಾಸದ ಗೃಹಪ್ರವೇಶ ನೆರವೇರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ನಮ್ಮ ಸಂಸ್ಕೃತಿಯಲ್ಲಿ ನದಿಗಳಿಗೆ ವಿಶೇಷ ಗೌರವ ಮತ್ತು ಪೂಜ್ಯಭಾವವಿದೆ. ಅದೇ ಆಶಯದೊಂದಿಗೆ ಈ ಸರ್ಕಾರಿ ನಿವಾಸಕ್ಕೆ ʻಗಂಗಾʻ ಎಂದು ನಾಮಕರಣ ಮಾಡಲಾಗಿದೆ. ಇಲ್ಲಿನ ಪ್ರತಿಯೊಂದು ಕೊಠಡಿಗೂ ಕಬಿನಿ, ಹೇಮಾವತಿ, ಶಿಂಷಾ ಹಾಗೂ ತುಂಗಭದ್ರಾ ಸೇರಿದಂತೆ ನಮ್ಮ ನಾಡಿನ ಜೀವನಾಡಿ ನದಿಗಳ ಹೆಸರನ್ನಿಡಲಾಗಿದೆ.

ನಮ್ಮ ನಾಡಿನ ಹೆಮ್ಮೆಯ ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪ ಅವರು ವಾಸ್ತವ್ಯ ಹೂಡಿದ್ದ ಈ ಕಟ್ಟಡದ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದಂತೆ, ಅದರ ಮಹತ್ವವನ್ನು ಕಾಪಾಡಿಕೊಂಡೇ ನವೀಕರಿಸಿ ಮತ್ತಷ್ಟು ಮೆರುಗು ನೀಡಲಾಗಿದೆ. ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು, ಸ್ವೀಕರಿಸುವ ದಾಖಲೆಗಳನ್ನು ನಿರ್ವಹಿಸಲು ಹಾಗೂ ಸಭೆ-ಸಮಾರಂಭಗಳ ಆಯೋಜನೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

ಗುರುವಾರ ಎಲ್ಲಾ 224 ಶಾಸಕರು ಹಾಗೂ ಸಂಸದರನ್ನು ಆಹ್ವಾನಿಸಿ ಇಲ್ಲಿಂದಲೇ ಅವರ ಭೇಟಿ, ಸಭೆಗಳು ನಡೆಯಲಿವೆ ಎಂದಿರುವ ಸಿಎಂ, ನನ್ನ ಕುಟುಂಬ ಸಹ ಇನ್ನೂ 8-10 ದಿನಗಳಲ್ಲಿ ಈ ಕಟ್ಟಡಕ್ಕೆ ಬರಲಿದ್ದಾರೆ. ಮುಖ್ಯಮಂತ್ರಿ ಹುದ್ದೆ ಯಾರಿಗೂ ಶಾಶ್ವತವಲ್ಲ. ಆದರೆ, ಮುಖ್ಯಮಂತ್ರಿಗಳಿಗೂ ಒಂದು ಅಧಿಕೃತ ನಿವಾಸವಿರಲಿ ಎಂಬ ಕಾರಣಕ್ಕೆ ಕುಮಾರಕೃಪ ಅತಿಥಿ ಗೃಹವನ್ನು ಶೇ. 10ರಷ್ಟು ಮಾತ್ರ ಬದಲಿಸಿ ಮುಖ್ಯಮಂತ್ರಿಗಳ ನಿವಾಸವಾಗಿ ಪರಿವರ್ತಿಸಲಾಗಿದೆ. ಕಟ್ಟಡದ ಪರಿವರ್ನತೆಗೆ ಹೆಚ್ಚಿನ ಹಣ ಬಳಸಿಲ್ಲ. ಪಿಠೋಪಕರಣಗಳಿಗೂ ಹೆಚ್ಚಿನ ಹಣ ವೆಚ್ಚ ಮಾಡಿಲ್ಲ. ನನ್ನ ಹಳೆಯ ಮನೆಯಲ್ಲಿದ್ದ ಪೀಠೋಪಕರಣಗಳನ್ನು ಇಲ್ಲಿಗೆ ತಂದು ಹಾಕಿದ್ದೇನೆ ಹಾಗೆಯೇ ಕುಮಾರಕೃಪದಲ್ಲಿದ್ದ ಹಳೆಯ ಪಿಠೋಪಕರಣಗಳನ್ನು ಬಳಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಕುಮಾರ ಕೃಪಾ ಗೆಸ್ಟ್ ಹೌಸ್ ಎಂದು ಹೆಸರು ಬಂದಿದ್ದೇಗೆ? 140 ವರ್ಷಗಳ ಇತಿಹಾಸ ಹೊಂದಿರುವ ಕಟ್ಟಡ ಹಿನ್ನೆಲೆಯೇನು?
ಕಟ್ಟಡದ ಮೂಲ ಸ್ವರೂಪರಕ್ಕೆ ಧಕ್ಕೆಯಾಗದಂತೆ ನವೀಕರಣ ಕಾರ್ಯ ನಡೆದಿದೆ. ಹಣವನ್ನು ಹೆಚ್ಚು ವ್ಯಯ ಮಾಡಿಲ್ಲ. ನೆಲ ಹಾಸಿಗೆ, ಕಲ್ಲುಗಳ ಬಳಕೆಗೂ ದುಬಾರಿ ಕಲ್ಲುಗಳನ್ನು ಬಳಸದೆ ಕಡಿಮೆ ಬೆಲೆಯ ಕಲ್ಲು ಮತ್ತು ಗ್ರಾನೈಟ್ ಬಳಸಲಾಗಿದೆ. ನಿಖರವಾಗಿ ಎಷ್ಟು ಖರ್ಚಾಗಿದೆ ಎಂಬುದು ಬಗ್ಗೆ ಇನ್ನೂ ಬಿಲ್ ಬಂದಿಲ್ಲ. ಆದರೆ ಹೆಚ್ಚಿನ ಹಣ ವ್ಯಯ ಮಾಡಿಲ್ಲ ಎಂದು ತಿಳಿಸಿದ್ದಾರೆ.