ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Sugarcane Price: ಪ್ರತಿ ಟನ್‌ ಕಬ್ಬಿನ ದರ 100 ರೂ. ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ

Sugarcane Farmers Protest: ಕಬ್ಬು ಬೆಳೆಗಾರರ ಪ್ರತಿಭಟನೆಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಸಂಬಂಧಿಸಿದ ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕಾದ ಕನಿಷ್ಠ ಹೆಚ್ಚುವರಿ ಕಬ್ಬು ಬೆಲೆಯನ್ನು ನಿಗದಿಪಡಿಸಲು ಹಾಗೂ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವನ್ನು ಒಂದು ಬಾರಿಯ ಕ್ರಮವಾಗಿ ನಿಗದಿಪಡಿಸಿ ಆದೇಶಿಸಲಾಗಿದೆ.

ಕಬ್ಬಿನ ದರವನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು, ನ.8: 2025-26ನೇ ಹಂಗಾಮಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು (Karnataka Sugarcane Price) ಸರಬರಾಜು ಮಾಡಿದ ರೈತರಿಗೆ ಹೆಚ್ಚುವರಿ ಕಬ್ಬು ಬೆಲೆ ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತ ಮುಖಂಡರ ಜತೆ ಸಭೆ ನಡೆಸಿ, ಕನಿಷ್ಠ ಹೆಚ್ಚುವರಿ ಕಬ್ಬು ಬೆಲೆಯನ್ನು 100 ರೂ. (ಸಕ್ಕರೆ ಕಾರ್ಖಾನೆಗಳು 50 ರೂ.+ ರಾಜ್ಯ ಸರ್ಕಾರ 50) ಹೆಚ್ಚಿಸುವುದಾಗಿ ಘೋಷಿಸಿದ್ದರು. ಇದಕ್ಕೆ ಸಂಬಂಧಿಸಿ ಇದೀಗ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಸಕ್ಕರೆ) ಸರ್ಕಾರದ ಅಧೀನ ಕಾರ್ಯದರ್ಶಿ ಶಾಂತಾರಾಮ ಅವರು ಆದೇಶ ಹೊರಡಿಸಿದ್ದಾರೆ.

ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಸಂಬಂಧಿಸಿದ ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕಾದ ಕನಿಷ್ಠ ಹೆಚ್ಚುವರಿ ಕಬ್ಬು ಬೆಲೆಯನ್ನು ನಿಗದಿಪಡಿಸಲು ಹಾಗೂ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವನ್ನು ಒಂದು ಬಾರಿಯ ಕ್ರಮವಾಗಿ ನಿಗದಿಪಡಿಸಿ ಆದೇಶಿಸಲಾಗಿದೆ. ಮುಖ್ಯಮಂತ್ರಿಗಳು ಸಕ್ಕರೆ ಕಾರ್ಖಾನೆಗಳು ಮತ್ತು ರೈತ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ನಿರ್ಣಯಿಸಿದಂತೆ ನಿರ್ಧರಿಸಿದ ಕಬ್ಬು ದರಗಳು ಇಂತಿವೆ;

ಕನಿಷ್ಠ ಹೆಚ್ಚುವರಿ ಕಬ್ಬು ಬೆಲೆ

ಇಳುವರಿ ಮೊತ್ತ (2ನೇ ಕಂತಿನಲ್ಲಿ)
ಶೇ.10.25 3200 ರೂ.
ಶೇ.11.25 3300 ರೂ.
_Karnataka Sugarcane Price (1)

ಶೇ. 10.25 - ಶೇ. 9.5 ಸಕ್ಕರೆ ಇಳುವರಿ ಪ್ರಮಾಣ ನಡುವೆ ಪ್ರತಿ 0.1 % ಕಡಿಮೆ ಸಕ್ಕರೆ ಇಳುವರಿಗೆ ಅನುಪಾತಕ್ಕೆ ಅನುಗುಣವಾಗಿ ರೂ.3.46 ಮೊತ್ತವನ್ನು ಪ್ರತಿ ಕ್ವಿಂಟಾಲ್‌ಗೆ ಪರಿಗಣಿಸಬೇಕು. ಶೇ. 11.25- 10.25 % ಸಕ್ಕರೆ ಇಳುವರಿ ಪ್ರಮಾಣದ ನಡುವೆ, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಪ್ರತಿ 0.1 % ಕಡಿಮೆ ಸಕ್ಕರೆ ಇಳುವರಿಗೆ ಅನುಪಾತಕ್ಕೆ ಅನುಗುಣವಾಗಿ ರೂ.1.00 ಮೊತ್ತವನ್ನು ಪ್ರತಿ ಕ್ವಿಂಟಾಲ್‌ಗೆ ಪರಿಗಣಿಸಬೇಕು. ಕಾರ್ಖಾನೆಗಳು ಪ್ರಥಮ ಕಂತಿನ ಮೊತ್ತವನ್ನು ಸಕ್ಕರೆ ನಿಯಂತ್ರಣ ಕಾಯ್ದೆಯಡಿಯಲ್ಲಿ ನಿಗದಿಪಡಿಸಿರುವಂತೆ 14 ದಿನಗಳಲ್ಲಿ ಹಣವನ್ನು ರೈತರಿಗೆ ಸಂದಾಯ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ ಹೊರತುಪಡಿಸಿ ಪ್ರತಿ ಟನ್‌ಗೆ ಹೆಚ್ಚಿಸಿರುವ 100 ರೂ.ಗಳನ್ನು ಎರಡನೇ ಕಂತಿನಲ್ಲಿ ನೀಡಲಾಗುತ್ತದೆ.



ಕೇಂದ್ರ ನಿಗದಿಪಡಿಸಿದ್ದ ಎಫ್‌ಆರ್‌ಪಿ ಎಷ್ಟು?

2025-26ನೇ ಸಕ್ಕರೆ ಹಂಗಾಮಿನಲ್ಲಿ ದೇಶದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕಾದ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯ (Fair and Remunerative Price) ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರದ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ನಿಗದಿಗೊಳಿಸಲಾಗಿದ್ದು, ವಿವರಗಳು ಈ ಕೆಳಕಂಡಂತೆ ಇವೆ.

  1. ಶೇ. 10.25 ರಷ್ಟು ಸಕ್ಕರೆ ಇಳುವರಿಗೆ ಪ್ರತಿ ಕ್ವಿಂಟಲ್ ಕಬ್ಬಿಗೆ 3550 ರೂ. (ಕಟಾವು, ಸಾಗಣೆ ವೆಚ್ಚ ಸೇರಿ)
  2. ಶೇ. 10.25ಕ್ಕೆ ಮೇಲ್ಪಟ್ಟ ಇಳುವರಿಗೆ ತದನಂತರದ ಶೇಕಡ 0.1 ರಷ್ಟು ಇಳುವರಿಗೆ ಪ್ರತಿ ಕ್ವಿಂಟಲ್ ಕಬ್ಬಿಗೆ ರೂ.3.46 ರಂತೆ ಹೆಚ್ಚುವರಿ ಬೆಲೆ.
  3. ಶೇ. 10.25ಕ್ಕಿಂತ ಕಡಿಮೆ ಹಾಗೂ ಶೇ. 9.5ಕ್ಕಿಂತ ಮೇಲ್ಪಟ್ಟ ಇಳುವರಿಯನ್ನು ಹೊಂದಿರುವ ಸಕ್ಕರೆ ಕಾರ್ಖಾನೆಗಳಿಗೆ ಸಂಬಂಧಿಸಿದಂತೆ ಶೇಕಡ 0.1 ರಷ್ಟು ಇಳುವರಿಗೆ ಪ್ರತಿ ಕ್ವಿಂಟಾಲ್‌ಗೆ ರೂ.3.46ರಷ್ಟು ಪ್ರಮಾಣದಲ್ಲಿ ನ್ಯಾಯ ಮತ್ತು ಲಾಭದಾಯಕ ಬೆಲೆಯನ್ನು ಕಡಿಮೆ ಮಾಡುವುದು.
  4. ಶೇಕಡ 9.5 ರಷ್ಟು ಅಥವಾ 9.50 ಕ್ಕಿಂತ ಕಡಿಮೆ ಇಳುವರಿ ಹೊಂದಿರುವ ಕಾರ್ಖಾನೆಗಳಿಗೆ ಪ್ರತಿ ಮೆ.ಟನ್‌ಗೆ 3290.05 ರೂ. ನ್ಯಾಯ ಮತ್ತು ಲಾಭದಾಯಕ ಬೆಲೆ ನಿಗದಿಪಡಿಸುವುದು.

10.06.2025ರಂದು ಜರುಗಿದ ಕಬ್ಬು ನಿಯಂತ್ರಣ ಮಂಡಳಿ ಸಭೆಯಲ್ಲಿ ನಿರ್ಣಯಿಸಿದಂತೆ 2025-26ನೇ ಹಂಗಾಮಿನಲ್ಲಿ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳು ಅನುಸರಿಸಬೇಕಾದ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚದ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಲಾಗಿತ್ತು.

ಕೇಂದ್ರ ಸರ್ಕಾರವು ನಿಗದಿಪಡಿಸಿರುವ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯ ಮಾರ್ಗಸೂಚಿಗಳು ನ್ಯಾಯಯುತವಾಗಿ ಇಲ್ಲದ ಕಾರಣ ರೈತರು, ಕಬ್ಬಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಮತ್ತು ಉತ್ಪಾದನೆಗೆ ಆಗುವ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳದೇ ಇಳುವರಿ (Recovery) ಆಧಾರದ ಮೇಲೆ ಬೆಲೆ ನಿರ್ಧಾರವಾಗುತ್ತಿರುವುದು ನ್ಯಾಯವಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದು ಸಮಸ್ಯೆಯನ್ನು ಪರಿಹರಿಸುವಂತೆ ಹಾಗೂ ಪ್ರಸ್ತುತ ವರ್ಷ 3500 ರೂ.ಬೆಂಬಲ ಬೆಲೆಯನ್ನು ನೀಡುವಂತೆ ವಿನಂತಿಸಿದ್ದರು.

ರೈತರ ಮನವಿ ಹಿನ್ನೆಲೆಯಲ್ಲಿ ನ.7ರಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳ ಮಾಲೀಕರು / ಪ್ರತಿನಿಧಿಗಳೊಂದಿಗೆ ಮತ್ತು ರಾಜ್ಯದ ಕಬ್ಬು ಬೆಳೆಗಾರರು ಹಾಗೂ ರೈತ ಸಂಘಟನೆಗಳ ಮುಖಂಡರು ಮತ್ತು ಪ್ರತಿನಿಧಿಗಳೊಂದಿಗೆ ಸುದೀರ್ಘ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ, ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌ನಲ್ಲಿ ನಡೆಸುತ್ತಿದ್ದ ಪ್ರತಿಭಟನೆ ಕುರಿತು ಹಾಗೂ ಬೆಳಗಾವಿ ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿಗಳು ನಡೆಸಿರುವ ಸಭೆಗಳ ಕುರಿತು ಹಾಗೂ ಪ್ರತಿಭಟನಾ ಸ್ಥಳದಲ್ಲಿ ರೈತ ಪ್ರತಿನಿಧಿಗಳೊಂದಿಗೆ ನಡೆಸಿದ ಸಂಧಾನ ಸಭೆಗಳ ಕುರಿತು ಚರ್ಚಿಸಲಾಯಿತು. ರೈತರ ಪ್ರತಿಭಟನೆಗಳು ಬಾಗಲಕೋಟೆ, ವಿಜಯಪುರ ಕಲಬುರಗಿ, ಹಾವೇರಿ ಮತ್ತು ಇತರೆ ಜಿಲ್ಲೆಗಳಲ್ಲಿಯೂ ತೀವು ಸ್ವರೂಪ ಪಡೆದುಕೊಂಡಿದ್ದ ಕುರಿತು ಜಿಲ್ಲಾಧಿಕಾರಿಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆಯ ಗಮನಕ್ಕೆ ತಂದಿದ್ದರು.

ಈ ಸುದ್ದಿಯನ್ನೂ ಓದಿ | Sugarcane Price: ಕಟಾವು, ಸಾಗಾಣಿಕೆ ವೆಚ್ಚ ಹೊರತುಪಡಿಸಿ ಪ್ರತಿ ಟನ್‌ ಕಬ್ಬಿಗೆ 3,300 ರೂ. ಕೊಡಲು ತೀರ್ಮಾನ: ಸಿಎಂ

ಸಭೆಯಲ್ಲಿ ಅಂತಿಮವಾಗಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ 2025-26ನೇ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕಾದ ಕನಿಷ್ಠ ಹೆಚ್ಚುವರಿ ಕಬ್ಬು ಬೆಲೆಯನ್ನು ಇಳುವರಿ ಆಧಾರದ ಮೇಲೆ 100 ರೂ. ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.