ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

DA Hike: ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ; ತುಟ್ಟಿಭತ್ಯೆ ಶೇ. 2.25ರಷ್ಟು ಹೆಚ್ಚಿಸಿ ಸರ್ಕಾರ ಆದೇಶ

​ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರು ಹಾಗೂ ರಾಜ್ಯದ ಸಂಚಿತ ನಿಧಿಯಿಂದ ವೇತನ ಪಡೆಯುವ ಅನುದಾನಿತ ಶಿಕ್ಷಣ ಸಂಸ್ಥೆಗಳ ಪಿಂಚಣಿದಾರರಿಗೂ ಈ ಹೆಚ್ಚಳ ವಿಸ್ತರಣೆಯಾಗಿದೆ. 2026ರ ಜುಲೈ 1ರಿಂದಲೇ ಜಾರಿಗೆ ಬರುವಂತೆ ಮೂಲ ನಿವೃತ್ತಿ ಅಥವಾ ಕುಟುಂಬ ನಿವೃತ್ತಿ ವೇತನದ ಶೇಕಡಾ 15.75 ರಿಂದ ಶೇಕಡಾ 18ಕ್ಕೆ ತುಟ್ಟಿಭತ್ಯೆಯನ್ನು ಹೆಚ್ಚಿಸಲಾಗಿದೆ.

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರದಿಂದ ಸಿಹಿಸುದ್ದಿ ಸಿಕ್ಕಿದೆ. ತುಟ್ಟಿಭತ್ಯೆಯನ್ನು (DA Hike) ಮೂಲ ವೇತನದ ಶೇ. 15.75 ರಿಂದ 18ಕ್ಕೆ ಹೆಚ್ಚಿಸಲಾಗಿದ್ದು, ಈ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಂಜುನಾಥ್ ಎಸ್. ಅವರು ಗುರುವಾರ ಅಧಿಕೃತ ಆದೇಶ ಹೊರಡಿಸಿದ್ದಾರೆ.

​2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಈ ಆದೇಶ ಅನ್ವಯವಾಗಲಿದ್ದು, 2026ರ ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ಶೇ. 2.25 ರಷ್ಟು ತುಟ್ಟಿಭತ್ಯೆ ಏರಿಕೆಯನ್ನು ಮಂಜೂರು ಮಾಡಲಾಗಿದೆ. ಸರ್ಕಾರಿ ನೌಕರರು ಧಾರಣೆ ಮಾಡಿರುವ ಹುದ್ದೆಯ ವೇತನ ಶ್ರೇಣಿಯ ವೇತನ, ಸ್ಥಗಿತ ವೇತನ ಬಡ್ತಿ ಹಾಗೂ ಅನ್ವಯವಾಗುವ ವೈಯಕ್ತಿಕ ವೇತನಗಳನ್ನು ಮಾತ್ರ ಈ ತುಟ್ಟಿಭತ್ಯೆಯ ಉದ್ದೇಶಕ್ಕಾಗಿ ಮೂಲ ವೇತನವೆಂದು ಪರಿಗಣಿಸಲಾಗುತ್ತದೆ.

​ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರು ಹಾಗೂ ರಾಜ್ಯದ ಸಂಚಿತ ನಿಧಿಯಿಂದ ವೇತನ ಪಡೆಯುವ ಅನುದಾನಿತ ಶಿಕ್ಷಣ ಸಂಸ್ಥೆಗಳ ಪಿಂಚಣಿದಾರರಿಗೂ ಈ ಹೆಚ್ಚಳ ವಿಸ್ತರಣೆಯಾಗಿದೆ. ಇವರಿಗೂ ಸಹ 2026ರ ಜುಲೈ 1ರಿಂದಲೇ ಜಾರಿಗೆ ಬರುವಂತೆ ಮೂಲ ನಿವೃತ್ತಿ ಅಥವಾ ಕುಟುಂಬ ನಿವೃತ್ತಿ ವೇತನದ ಶೇಕಡಾ 15.75 ರಿಂದ ಶೇಕಡಾ 18ಕ್ಕೆ ತುಟ್ಟಿಭತ್ಯೆಯನ್ನು ಹೆಚ್ಚಿಸಲಾಗಿದೆ.

​ಸರ್ಕಾರದ ಮತ್ತು ಜಿಲ್ಲಾ ಪಂಚಾಯತ್‌ಗಳ ಪೂರ್ಣಾವಧಿ ನೌಕರರು, ಕಾಲಿಕ ವೇತನ ಶ್ರೇಣಿಯಲ್ಲಿರುವ ಪೂರ್ಣಾವಧಿ ವರ್ಕ್‌ಚಾರ್ಜ್ ನೌಕರರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಪೂರ್ಣಾವಧಿ ಸಿಬ್ಬಂದಿಗೆ ಈ ಪರಿಷ್ಕರಣೆ ಅನ್ವಯವಾಗುತ್ತದೆ. ಇದರೊಂದಿಗೆ ಯುಜಿಸಿ, ಎಐಸಿಟಿಇ ಹಾಗೂ ಐಸಿಎಆರ್ ವೇತನ ಶ್ರೇಣಿಗಳಲ್ಲಿ ನಿವೃತ್ತರಾದ ರಾಜ್ಯ ಪಿಂಚಣಿದಾರರೂ ಈ ಲಾಭ ಪಡೆಯಲಿದ್ದಾರೆ. ಆದರೆ, ಹಾಲಿ ಸೇವೆಯಲ್ಲಿರುವ ಯುಜಿಸಿ, ಎಐಸಿಟಿಇ, ಐಸಿಎಆರ್ ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ಪ್ರತ್ಯೇಕ ಆದೇಶ ಪ್ರಕಟವಾಗಲಿದೆ.

Drought Compensation: ರಾಜ್ಯದ ರೈತರಿಗೆ ಸಿಹಿಸುದ್ದಿ; 1 ಎಕರೆಗೆ 5 ಸಾವಿರ ರೂ. ಬರ ಪರಿಹಾರ ಘೋಷಿಸಿದ ಸಿಎಂ ಡಿ.ಕೆ. ಶಿವಕುಮಾರ್

​ಪರಿಷ್ಕೃತ ತುಟ್ಟಿಭತ್ಯೆಯನ್ನು ಮುಂದಿನ ಆದೇಶದವರೆಗೆ ನಗದಾಗಿ ಪಾವತಿ ಮಾಡಲಾಗುತ್ತದೆ. ಜುಲೈ ತಿಂಗಳಿನಿಂದ ಹಿಡಿದು ಇದುವರೆಗೆ ಬರಬೇಕಾದ ಬಾಕಿ ಮೊತ್ತವನ್ನು 2026ರ ನವೆಂಬರ್ ತಿಂಗಳ ವೇತನ ಅಥವಾ ಪಿಂಚಣಿ ವಿತರಣೆಯೊಂದಿಗೆ ಪಾವತಿಸಲು ಸೂಚಿಸಲಾಗಿದ್ದು, ಅದಕ್ಕೂ ಮುಂಚಿತವಾಗಿ ವಿತರಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.