ಬೆಂಗಳೂರು: ಎಸ್‌ಸಿ ಒಳಮೀಸಲಾತಿ ಮಸೂದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕದೇ ವಾಪಸ್ ಕಳುಹಿಸಿದ್ದಾರೆ. ಮಸೂದೆ ಕುರಿತು ರಾಜ್ಯ ಸರ್ಕಾರದಿಂದ ಹೆಚ್ಚಿನ ಸ್ಪಷ್ಟೀಕರಣವನ್ನು ರಾಜ್ಯಪಾಲರು ಕೋರಿದ್ದಾರೆ. ಬೆಳಗಾವಿಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಎಸ್‌ಸಿ ಒಳಮೀಸಲಾತಿ ಮಸೂದೆ (ಕರ್ನಾಟಕ ಅನುಸೂಚಿತ ಜಾತಿಗಳ (ಉಪವರ್ಗೀಕರಣ) ವಿಧೇಯಕ 2025) ಮಾತ್ರವಲ್ಲದೆ ದ್ವೇಷ ಭಾಷಣ ತಡೆ ಮಸೂದೆ ಸೇರಿ ಹಲವು ಮಹತ್ವದ ಮಸೂದೆಗಳನ್ನು ಅಂಗೀಕರಿಸಲಾಗಿತ್ತು. ಇವುಗಳಿಗೂ ಇನ್ನೂ ರಾಜ್ಯಪಾಲರು ಅಂಕಿತ ಹಾಕಿಲ್ಲ ಎಂದು ತಿಳಿದುಬಂದಿದೆ.
ರಾಜ್ಯಪಾಲರ ಪರಿಶೀಲನೆಯಲ್ಲೇ ದ್ವೇಷ ಭಾಷಣ ತಡೆ ಮಸೂದೆ ಇದೆ. ಇದಲ್ಲದೇ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬಿಲ್ ಕೂಡ ವಾಪಸ್ ಕಳುಹಿಸಲಾಗಿದೆ. ಇನ್ನುಳಿದ ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಏನಿದು ಒಳ ಮೀಸಲಾತಿ?
ಒಳ ಮೀಸಲಾತಿ ಎಂದರೆ, ಈಗಾಗಲೇ ಇರುವ ಎಸ್‌ಸಿ ಮೀಸಲಾತಿ ಕೋಟಾದೊಳಗೆ ಜಾತಿಗಳನ್ನು ವರ್ಗೀಕರಣ ಮಾಡಿ, ಅವರಲ್ಲಿ ಜನಸಂಖ್ಯೆ ಮತ್ತು ಸಾಮಾಜಿಕ-ಶೈಕ್ಷಣಿಕ ಹಿಂದುಳಿದಿರುವಿಕೆ ಆಧಾರದಲ್ಲಿ ಮೀಸಲಾತಿ ಹಂಚಿಕೆ ಮಾಡುವುದಾಗಿದೆ.
ಕೇರಳದ ಕನ್ನಡ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ; ಸಿಎಂ ಸಿದ್ದರಾಮಯ್ಯ ಆಕ್ಷೇಪ
ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯ ಏಕ ಸದಸ್ಯ ಆಯೋಗವು ಒಳಮೀಸಲಾತಿ ಸಂಬಂಧ ವರದಿ ಸಲ್ಲಿಸಿತ್ತು. ವರದಿಯಲ್ಲಿ ಪರಿಶಿಷ್ಟ ಜಾತಿಗಳಿಗೆ ಲಭ್ಯವಿರುವ ಶೇ.17 ಮೀಸಲಾತಿಯನ್ನು 5 ಭಾಗವಾಗಿ ವರ್ಗೀಕರಣ ಮಾಡಲಾಗಿತ್ತು. ಆದರೆ, ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಮೂರು ಗುಂಪುಗಳಾಗಿ ವಿಂಗಡಿಸಿತ್ತು. ಎಡಗೈ ಸಮುದಾಯಕ್ಕೆ ಶೇ.6, ಬಲಗೈ ಸಮುದಾಯ ಶೇ.6, ಸ್ಪೃಶ್ಯ ಸಮುದಾಯಕ್ಕೆ ಶೇ. 5 ಒಳ ಮೀಸಲಾತಿ ನೀಡಲು ಅನುಮೋದನೆ ನೀಡಲಾಗಿತ್ತು.
ಎಡಗೈ ಸಮುದಾಯದಲ್ಲಿ 18 ಜಾತಿಗಳಿದ್ದರೆ, ಬಲಗೈ ಸಮುದಾಯದಲ್ಲಿ 20 ಜಾತಿಗಳು ಹಾಗೂ ಸ್ಪೃಶ್ಯ ಸಮುದಾಯದಲ್ಲಿ 63 ಜಾತಿಗಳಿವೆ.
ಅಲೆಮಾರಿ ಸಮುದಾಯದಿಂದ ವಿರೋಧ
ರಾಜ್ಯ ಸರ್ಕಾರದ ಒಳಮೀಸಲಾತಿಗೆ ಅಲೆಮಾರಿ ಸಮುದಾಯದಿಂದ ವಿರೋಧ ವ್ಯಕ್ತವಾಗಿದೆ. ಪರಿಶಿಷ್ಟ ಜಾತಿಯ ಎಡಗೈ ಸಂಬಂಧಿತ ಜಾತಿಗಳಿರುವ 'ಎ' ಪ್ರವರ್ಗಕ್ಕೆ ಶೇ 6, ಬಲಗೈ ಸಂಬಂಧಿತ ಜಾತಿಗಳಿರುವ 'ಬಿ' ಪ್ರವರ್ಗಕ್ಕೆ ಶೇ 6, ಸ್ಪೃಶ್ಯ ಮತ್ತು ಅಲೆಮಾರಿ ಜಾತಿಗಳಿರುವ 'ಸಿ' ಪ್ರವರ್ಗಕ್ಕೆ ಶೇ 5ರಷ್ಟು ಒಳ ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರ ಮಸೂದೆ ಮಂಡಿಸಿದೆ. ಆದರೆ, ಸರ್ಕಾರ ಅವೈಜ್ಞಾನಿಕವಾಗಿ ಒಳ ಮೀಸಲಾತಿ ನಿಗದಿಪಡಸಿದೆ ಎಂದು ಅಲೆಮಾರಿ ಸಮುದಾಯದಿಂದ ವಿರೋಧ ವ್ಯಕ್ತವಾಗಿದೆ. ಅಲ್ಲದೇ ಎಸ್‌ಸಿ ಒಟ್ಟು ಮೀಸಲಾತಿಯನ್ನು ಶೇ. 17ರಿಂದ ಶೇ 18ಕ್ಕೆ ಹೆಚ್ಚಿಸಿ, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ. 1ರಷ್ಟು ಒಳ ಮೀಸಲಾತಿ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ.