ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ballot Papers: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲೆಟ್‌ ಪೇಪರ್‌ ಬಳಕೆ; ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ

Local Body Elections: ವಿಧಾನಮಂಡಲ ಅಧಿವೇಶನದ ವೇಳೆ ವಿರೋಧ ಪಕ್ಷಗಳ ವಿರೋಧದ ನಡುವೆಯೂ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ವಿಧೇಯಕಕ್ಕೆ ವಿಧೇಯಕಕ್ಕೆ ಅನುಮೋದನೆ ಪಡೆಯಲಾಗಿತ್ತು. ಇದೀಗ ವಿಧೇಯಕವನ್ನು ಕೂಲಂಕಷವಾಗಿ ಪರಿಶೀಲಿಸಿ ರಾಜ್ಯಪಾಲರು ಅನುಮೋದಿಸಿದ್ದಾರೆ.

ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌.

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ (Local Body Elections ) ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಬದಲು ಮತಪತ್ರ (Ballot Papers) ಬಳಕೆಗೆ ಅವಕಾಶ ಕಲ್ಪಿಸುವ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಅಂಕಿತ ಹಾಕಿದ್ದಾರೆ.

ವಿಧಾನಮಂಡಲ ಅಧಿವೇಶನದ ವೇಳೆ ವಿರೋಧ ಪಕ್ಷಗಳ ವಿರೋಧದ ನಡುವೆಯೂ ವಿಧೇಯಕಕ್ಕೆ ಅನುಮೋದನೆ ಪಡೆಯಲಾಗಿತ್ತು. ಅದಾದ ನಂತರ ರಾಜ್ಯಪಾಲರು ಉಳಿದೆಲ್ಲ ವಿಧೇಯಕಗಳಿಗೆ ಅನುಮೋದನೆ ನೀಡಿದ್ದರೂ, ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ (ತಿದ್ದುಪಡಿ) ವಿಧೇಯಕಕ್ಕೆ ಒಪ್ಪಿಗೆ ನೀಡದೇ ತಮ್ಮ ಬಳಿಯಲ್ಲೇ ಉಳಿಸಿಕೊಂಡಿದ್ದರು. ಇದೀಗ ವಿಧೇಯಕವನ್ನು ಕೂಲಂಕಷವಾಗಿ ಪರಿಶೀಲಿಸಿ ರಾಜ್ಯಪಾಲರು ಅನುಮೋದಿಸಿದ್ದು, ಆ ಹಿನ್ನೆಲೆಯಲ್ಲಿ ರಾಜ್ಯಪತ್ರ ಪ್ರಕಟಿಸಲಾಗಿದೆ.

ಸಂವಿಧಾನದ 326ನೇ ವಿಧಿಯಂತೆ ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ರೀತಿಯಲ್ಲಿ ಚುನಾವಣೆ ನಡೆಯಬೇಕು. ಪ್ರಮುಖವಾಗಿ ಮತದಾರರ ಮತಪತ್ರ ಗೌಪ್ಯತೆ ಖಚಿತಪಡಿಸಿಕೊಳ್ಳಲು ಮತ್ತು ಗ್ರಾಮ ಪಂಚಾಯಿತಿ ಸೇರಿದಂತೆ ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರ ಮೇಲೆ ದಬ್ಬಾಳಿಕೆ, ಬೆದರಿಕೆ ಹಾಗೂ ಅನಗತ್ಯ ಪ್ರಭಾವ ಬೀರುವುದರಿಂದ ರಕ್ಷಿಸುವುದನ್ನು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ ಮತದಾರರ ಮೇಲೆ ದಬ್ಬಾಳಿಕೆ, ಪ್ರಭಾವ ಬೀರುವವರ ವಿರುದ್ಧ ಕ್ರಮ ಕೈಗೊಳ್ಳುವ ಅಂಶವನ್ನೂ ವಿಧೇಯಕದಲ್ಲಿ ಸೇರಿಸಲಾಗಿದೆ.

ಪ್ರಮುಖವಾಗಿ ಇವಿಎಂ ಕಾರ್ಯನಿರ್ವಹಣೆಯ ಕುರಿತು ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದ್ದು, ಚುನಾವಣೆ ಮೇಲೆ ನಂಬಿಕೆ ಮರುಸ್ಥಾಪಿಸಲು ಸದೃಢ ರಹಸ್ಯ ಮತದಾನ ಪದ್ಧತಿಗೆ ಮರಳುವುದು ಅವಶ್ಯಕ ಎಂದೂ ತಿದ್ದುಪಡಿ ವಿಧೇಯಕದಲ್ಲಿ ತಿಳಿಸಲಾಗಿದೆ.

ಜಿಲ್ಲಾ ಪಂಚಾಯತಿಯ ಪ್ರತಿ ಮತ ಕ್ಷೇತ್ರದಲ್ಲಿ ರಾಜ್ಯ ಚುನಾವಣಾ ಆಯೋಗದ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣಕ್ಕೆ ಒಳಪಟ್ಟು ಉಪವಿಭಾಗಾಧಿಕಾರಿ ಮತದಾರರ ಪಟ್ಟಿ ಸಿದ್ಧಪಡಿಸಬೇಕು ಎಂಬ ಅಂಶವಿದೆ. ಈವರೆಗೆ ರಾಜ್ಯ ಚುನಾವಣಾ ಆಯುಕ್ತರ ನಿಗಾದಲ್ಲಿ ಮತದಾನದ ಪಟ್ಟಿ ಸಿದ್ಧಪಡಿಸಲಾಗುತ್ತಿತ್ತು. ಈಗ ತಿದ್ದುಪಡಿ ವಿಧೇಯಕದಲ್ಲಿ ಆ ಹೊಣೆಯನ್ನು ಉಪ ವಿಭಾಗಾಧಿಕಾರಿಗಳಿಗೆ ನೀಡಲಾಗಿದೆ.

ಜತೆಗೆ ಕರ್ನಾಟಕ ವಿಧಾನಸಭೆಯ ಮತದಾರರ ಪಟ್ಟಿಯನ್ನು ಜಿಲ್ಲಾ ಪಂಚಾಯತಿ ಮತದಾರರ ಪಟ್ಟಿಯ ಸಿದ್ಧತೆಯ ಉದ್ದೇಶಕ್ಕೆ ಅಳವಡಿಸಿಕೊಳ್ಳುವ ಅಂಶವನ್ನು ತಿದ್ದುಪಡಿಯಲ್ಲಿ ಕೈಬಿಡಲಾಗಿದೆ. ಆಮೂಲಕ ಭಾರತೀಯ ಚುನಾವಣಾ ಆಯೋಗ ಸಿದ್ಧಪಡಿಸಿದ ಮತದಾರರ ಪಟ್ಟಿಯನ್ನು ಅಳವಡಿಸಿಕೊಳ್ಳುವ ಅಂಶವನ್ನು ವಿಧೇಯಕದಿಂದ ಕೈಬಿಡಲಾಗಿದೆ.