ಬೆಂಗಳೂರು, ಮಾರ್ಚ್ 25: ಸರ್ಕಾರಿ ಜಮೀನು ಒತ್ತುವರಿ ಆರೋಪ ಪ್ರಕರಣದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾದ ಶ್ರೀ ರವಿಶಂಕರ್ ಗುರೂಜಿ (Ravishankar guruji) ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಕಗ್ಗಲೀಪುರ ಗ್ರಾಮದಲ್ಲಿ ಸರ್ಕಾರಿ ಜಮೀನು ಒತ್ತುವರಿ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ಬುಧವಾರ ರದ್ದುಪಡಿಸಿದೆ.
ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್ (ಬಿಎಂಟಿಎಫ್) ದಾಖಲಿಸಿರುವ ಎಫ್‌ಐಆರ್ ಪ್ರಶ್ನಿಸಿ ಶ್ರೀ ರವಿಶಂಕರ್ ಗುರೂಜಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದ್ದು, ಪ್ರಕರಣವನ್ನು ರದ್ದುಪಡಿಸಿದೆ.
ಬಿಎನ್‌ಎಸ್‌ಎಸ್ 528ರ ಅಡಿ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ಪರಿಗಣಿಸುವುದಕ್ಕೆ ಮಾತ್ರ ಸೀಮಿತವಾಗಿದೆ. ಯಾವುದೇ ಸಕ್ಷಮ ನ್ಯಾಯಾಲಯದ ಮುಂದೆ ಬಾಕಿ ಇರುವ ಯಾವುದೇ ಆರೋಪಿಗೆ ಆದೇಶ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಎಸ್ ಶ್ರೀರಂಗ ಮತ್ತು ವಕೀಲ ಪಿ ಪ್ರಸನ್ನ ಕುಮಾರ್ ಅವರು ಒತ್ತುವರಿಗೆ ಸಂಬಂಧಿಸಿದ ವರದಿಯಲ್ಲಿ ಎಲ್ಲಿಯೂ ಸಹ ಶ್ರೀ ರವಿಶಂಕರ್ ಗುರೂಜಿ ಯಾವುದೇ ಆಸ್ತಿ ಹೊಂದಿರುವುದು ಅಥವಾ ಯಾವುದೇ ಭೂಮಿಯನ್ನು ಅತಿಕ್ರಮಿಸಿರಿವುದನ್ನು ತೋರಿಸುವುದಿಲ್ಲ. ಖಾಸಗಿ ರಿಯಲ್ ಎಸ್ಟೇಟ್ ಕಂಪನಿ ಸೇರಿ ಕೆಲವರ ವಿರುದ್ಧ ಒತ್ತುವರಿ ಮಾಡಿರುವ ಆರೋಪವಿದೆ. ಆದರೆ, ಈ ಯಾವುದೇ ಪ್ರದೇಶ ಶ್ರೀ ರವಿಶಂಕರ್ ಆಶ್ರಮದ ಕಾಂಪೌಂಡ್ ಒಳಗೆ ಬರುವುದಿಲ್ಲ ಎಂದು ಪೀಠಕ್ಕೆ ವಿವರಿಸಿದ್ದರು.
ಸರ್ಕಾರದ ಪರ ವಾದಿಸಿದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎ ಬೆಳ್ಳಿಯಪ್ಪ ಅವರು “ಶ್ರೀ ರವಿಶಂಕರ್ ಗುರೂಜಿ ವಿರುದ್ಧ ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ಆರೋಪಗಳಿದ್ದು, ಈ ಹಂತದಲ್ಲಿ ತನಿಖೆಯನ್ನು ತಡೆಯಬಾರದು. ತನಿಖೆ ಮುಂದುವರಿಸಲು ಅನುಮತಿ ನೀಡಬೇಕು” ಎಂದು ಕೋರಿದ್ದರು.
ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಕಗ್ಗಲೀಪುರ ಗ್ರಾಮದ ಸರ್ವೇ ನಂಬರ್ 46, 135, 137, 150, 160, 164/1 ಮತ್ತು 164/2ರಲ್ಲಿನ ವಿವಿಧೆಡೆ ಸರ್ಕಾರಿ ಜಮೀನು, ಕೆರೆ ಮತ್ತು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಸಂಬಂಧ ದಾಖಲಾಗಿರುವ ಪ್ರಕರಣದಲ್ಲಿ ಶ್ರೀ ರವಿಶಂಕರ್ ಗುರೂಜಿ ಮೇಲೆ ಮೇಲ್ನೋಟಕ್ಕೆ ಯಾವುದೇ ಆರೋಪ ಕಾಣುತ್ತಿಲ್ಲ. ವಿಶೇಷ ಸರ್ಕಾರಿ ಅಭಿಯೋಜಕರು ನೇರವಾಗಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಪೂರಕವಾಗಿ ದಾಖಲೆಗಳನ್ನು ಒದಗಿಸದ ಹೊರತು ಆರೋಪವಿಲ್ಲದೇ ರವಿಶಂಕರ್ ಗುರೂಜಿ ಅವರನ್ನು ಪ್ರಕರಣದಲ್ಲಿ ಎಳೆದು ತರಲಾಗದು. ಹೀಗಾಗಿ, ಮುಂದಿನ ವಿಚಾರಣೆವರೆಗೆ ರವಿಶಂಕರ್ ಅವರ ವಿರುದ್ಧದ ತನಿಖೆಗೆ ತಡೆ ನೀಡಲಾಗಿದೆ ಎಂದು ಜನವರಿ 13ರಂದು ನ್ಯಾಯಾಲಯ ಮಧ್ಯಂತರ ಆದೇಶ ಮಾಡಿತ್ತು. ಇದೀಗ ಪ್ರಕರಣವನ್ನು ರದ್ದುಪಡಿಸಲಾಗಿದೆ.