ಬೆಂಗಳೂರು, ನ.5: ರಾಜ್ಯದ ಜನತೆಗೆ ಕೆಎಂಎಫ್ ಮತ್ತೆ ದರ ಏರಿಕೆ ಶಾಕ್ ನೀಡಿದೆ. ಇತ್ತೀಚೆಗಷ್ಟೇ ಜಿಎಸ್‌ಟಿ ಕಡಿತದ ಬಳಿಕ ಗುಡ್ನ್ಯೂಸ್ ನೀಡಿದ್ದ ಕೆಎಂಎಫ್ ಇದೀಗ, ನಂದಿನಿ ತುಪ್ಪಕ್ಕೆ (Nandini Ghee Price) ಬೇಡಿಕೆ ಹೆಚ್ಚಾಗುತ್ತಿದ್ದಂತೆ ದಿಢೀರ್ ದರ ಏರಿಕೆ ಮಾಡಿದೆ. ನಂದಿನಿ ತುಪ್ಪದ ದರವನ್ನು ಪ್ರತಿ ಲೀಟರ್ಗೆ 90 ರೂ.ಗಳನ್ನು ಏರಿಕೆ ಮಾಡಲಾಗಿದೆ. ಒಂದು ಲೀಟರ್ ನಂದಿನಿ ತುಪ್ಪಕ್ಕೆ 700 ರೂಪಾಯಿ ನಿಗದಿ ಮಾಡಲಾಗಿದ್ದು, ಈ ಮೊದಲು 610 ರೂ.ಗೆ ಲೀಟರ್ ತುಪ್ಪ ಮಾರಾಟ ಮಾಡಲಾಗುತ್ತಿತ್ತು. ಜಿಎಸ್‌ಟಿ ಸುಧಾರಣೆ ಬಳಿಕ 40 ರೂಪಾಯಿ ಇಳಿಕೆ ಮಾಡಲಾಗಿತ್ತು. ಆದರೆ, ಇದೀಗ ನಂದಿನಿ ತುಪ್ಪದ ದರ ಏರಿಕೆಯಾಗಿದ್ದು, ಇಂದಿನಿಂದಲೇ (ನ.5) ನಂದಿನಿ ತುಪ್ಪದ ಪರಿಷ್ಕೃತ ದರ ಜಾರಿಯಾಗಲಿದೆ.
ನಂದಿನಿ ತುಪ್ಪದ ಬೆಲೆ (ರೂ.ಗಳಲ್ಲಿ)
- 50 ಮಿ.ಲೀ – 47
- 100 ಮಿ.ಲೀ. – 75
- 200 ಮಿ.ಲೀ. – 155–165
- 500 ಮಿ.ಲೀ. – 350–360
- 1 ಲೀಟರ್ – 700–720
2017 ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಲಾಗಿತ್ತು. ಕೇಂದ್ರ ಸರ್ಕಾರವು ಸೆಪ್ಟೆಂಬರ್ನಲ್ಲಿ ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಶೇ.12ರಿಂದ 5ಕ್ಕೆ ಇಳಿಕೆ ಮಾಡಿತ್ತು. ಈ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಬೇಕು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿತ್ತು. ಆ ಬಳಿಕ ರಾಜ್ಯದಲ್ಲಿ ಹಾಲಿನ ಉತ್ಪನ್ನಗಳ ಬೆಲೆ ಇಳಿಕೆ ಮಾಡಲಾಗಿತ್ತು. ಆದರೆ, ಇದೀಗ ಮತ್ತೆ ತುಪ್ಪದ ದರ ಏರಿಕೆಯಾಗಿದೆ.
ಇತ್ತೀಚೆಗೆ ದೇಸಿ ಹಾಲಿನ ಬೆಲೆ ಹೆಚ್ಚಿಸಿದ್ದ ಕೆಎಂಎಫ್
ಜಿಎಸ್‌ಟಿ ಇಳಿಕೆ ಹಿನ್ನೆಲೆ ದೇಶದಾದ್ಯಂತ ಮಧ್ಯಮ ವರ್ಗದವರಿಗೆ ಬೆಲೆ ಏರಿಕೆ (price hike) ಹೊರೆ ಕಡಿಮೆಯಾಗಿತ್ತು. ಹಾಗೆಯೇ ಕೆಎಂಎಫ್ (KMF) ಕೂಡ ಕೆಲವು ಉತ್ಪನ್ನಗಳ ಬೆಲೆ ಇಳಿಸಿತ್ತು. ಇದರ ಬೆನ್ನಲ್ಲೇ ನಂದಿನಿ ದೇಸಿ ಹಾಲು ಬಳಸುವವರಿಗೆ ಇತ್ತೀಚೆಗೆ ದರ ಏರಿಕೆ ಬಿಸಿ ತಟ್ಟಿತ್ತು. 1 ಲೀಟರ್ ಹಾಲಿಗೆ 40 ರೂಪಾಯಿ ಏರಿಕೆ ಮಾಡಲಾಗಿತ್ತು.
ರಾಜ್ಯದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳಲ್ಲೂ ನಂದಿನಿ ಹಾಲಿಗೆ ಗ್ರಾಹಕರು ಹೆಚ್ಚಿದ್ದಾರೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಸಂಸ್ಥೆ ಹಾಲಿನಲ್ಲೂ ವಿವಿಧ ವೆರೈಟಿಗಳನ್ನು ಪರಿಚರಿಸಿದ್ದು, ಅವುಗಳಲ್ಲಿ ದೇಸಿ ಹಾಲಿನ ಪ್ಯಾಕೆಟ್ ಬೆಲೆಯನ್ನು ಹೆಚ್ಚಿಸಲಾಗಿತ್ತು. ಒಂದು ಲೀಟರ್ ದೇಸಿ ಹಾಲು ಬೆಲೆ 120 ರೂಪಾಯಿ ಇತ್ತು. ಅರ್ಧ ಲೀಟರ್ ದೇಸಿ ಹಾಲಿಗೆ 60 ರೂ. ಇತ್ತು. ಈ ಮೊದಲು ಒಂದು ಲೀಟರ್ ದೇಸಿ ಹಾಲು 80 ರೂ. ಇತ್ತು. ಅರ್ಧ ಲೀಟರ್ 40 ರೂ. ಇತ್ತು. ಆದರೆ ಏಕಾಏಕಿ ಕೆಎಂಎಫ್ 40 ರೂ.ಗಳನ್ನು ಹೆಚ್ಚಳ ಮಾಡಲಾಗಿತ್ತು.
ಈ ಸುದ್ದಿಯನ್ನೂ ಓದಿ : Nandini Sweet Products: ʼನಂದಿನಿʼಯಿಂದ ಗ್ರಾಹಕರಿಗೆ ಸಿಹಿಸುದ್ದಿ; ದೀಪಾವಳಿ ಪ್ರಯುಕ್ತ ಸಕ್ಕರೆ ರಹಿತ ಸ್ವೀಟ್ಸ್ ಬಿಡುಗಡೆ
ಇನ್ನು ಸರ್ಕಾರಿ ಕಚೇರಿಗಳು ಹಾಗೂ ಸಭೆ, ಸಮಾರಂಭಗಳಲ್ಲಿ ನಂದಿನಿ ತಿನಿಸುಗಳನ್ನು ಬಳಸಲು ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಸೂಚಿಸಿದ್ದರು. ಹಾಗೆಯೇ ನೆರೆ ರಾಜ್ಯಗಳು ಹಾಗೂ ವಿದೇಶಗಳಿಂದಲೂ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇದೀಗ ತುಪ್ಪದ ದರವನ್ನೂ ಕೆಎಂಎಫ್ ಹೆಚ್ಚಳ ಮಾಡಿದೆ.