ಬೆಂಗಳೂರು: 319 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿಗೆ ನವೆಂಬರ್ 15ರಂದು ನಡೆದ ಪೂರ್ವಭಾವಿ ಪರೀಕ್ಷೆಯ (KAS Prelims Result 2026) ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಪ್ರಕಟಿಸಿದೆ. ಅಭ್ಯರ್ಥಿಗಳು ಕೆಪಿಎಸ್ಸಿ ವೆಬ್ಸೈಟ್ನಲ್ಲಿ ತಾತ್ಕಾಲಿಕ ಫಲಿತಾಂಶ ವೀಕ್ಷಿಸಬಹುದು.
ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಪತ್ರಿಕೆ-1 ಮತ್ತು ಪತ್ರಿಕೆ-2ರ ಕೀ ಉತ್ತರಗಳನ್ನು ಆಯೋಗದ ವೆಬ್ಸೈಟ್ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ನ.16ರಂದು ಪ್ರಕಟಿಸಲಾಗಿತ್ತು. ಪ್ರಕಟಿತ ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ನ.19ರ ಬೆಳಿಗ್ಗೆ 10.30ಗಂಟೆಯೊಳಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಅದರಂತೆ ಸ್ವೀಕೃತವಾದ ಆಕ್ಷೇಪಣೆಗಳನ್ನು ವಿಷಯ ತಜ್ಞರ ಸಮಿತಿಯ ಮೂಲಕ ಪರಿಶೀಲಿಸಿ ಪರಿಷ್ಕೃತ ಕೀ ಉತ್ತರಗಳನ್ನು ನ.21ರಂದು ಪ್ರಕಟಿಸಲಾಗಿದೆ.
ಪರಿಷ್ಕೃತ ಕೀ ಉತ್ತರಗಳನ್ವಯ ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ತಾತ್ಕಾಲಿಕ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಪ್ರಕಟಿತ ತಾತ್ಕಾಲಿಕ ಫಲಿತಾಂಶಕ್ಕೆ ಆಕ್ಷೇಪಣೆಗಳಿದ್ದಲ್ಲಿ ನ.23ರ ಬೆಳಿಗ್ಗೆ 11ಗಂಟೆಯೊಳಗೆ (https://docs.google.com) ದಾಖಲೆಗಳನ್ನು ಸಲ್ಲಿಸಬೇಕು. ಪೂರಕ ದಾಖಲೆಗಳಿಲ್ಲದ ಹಾಗೂ ಕೀ ಉತ್ತರಗಳಿಗೆ ಸಲ್ಲಿಸಲಾಗುವ ಆಕ್ಷೇಪಣೆಗಳನ್ನು ಈ ಹಂತದಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಕೆಪಿಎಸ್ಸಿ ತಿಳಿಸಿದೆ.
ಈ ಬಾರಿ ಕೇವಲ ಐದು ದಿನಗಳಲ್ಲೇ ಫಲಿತಾಂಶ ಪ್ರಕಟಿಸುವ ಮೂಲಕ ಆಯೋಗವು ತನ್ನ ಕಾರ್ಯವೈಖರಿಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಆಕ್ಷೇಪಣೆಗಳ ಪರಿಶೀಲನೆ ಪೂರ್ಣಗೊಂಡ ನಂತರ ಕೆಪಿಎಸ್ಸಿ ಕೆಎಎಸ್ ಮುಖ್ಯ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದೆ.
ಕೆಎಎಸ್ ಪ್ರಿಲಿಮ್ಸ್ ಫಲಿತಾಂಶ ಚೆಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ
https://kpsc.karnataka.gov.in/OmrPortal/omr_result/KPSCKasResult.aspx