ಬೆಂಗಳೂರು, ನ.22: ವಿಮಾನ ನಿಲ್ದಾಣಗಳಲ್ಲಿ ಸೌಲಭ್ಯ, ಪ್ರಯಾಣಿಕಸ್ನೇಹಿ ಸೌಕರ್ಯ ಹಾಗೂ ತಂತ್ರಜ್ಞಾನಗಳ ಬಳಕೆಗಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (Bengaluru Kempegowda International Airport) ಎಸಿಐನ (ACI) 3ನೇ ಹಂತದ ಮಾನ್ಯತೆ ಪಡೆದಿದ್ದು, ಇದರೊಂದಿಗೆ ಕೆಐಎಎಲ್ (KIAL) ಈ ಮಾನ್ಯತೆಗೆ ಭಾಜನವಾದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿಯು (ಎಸಿಐ) ಪ್ರವೇಶ ವರ್ಧಕ ಮಾನ್ಯತೆ (ಎಇಎ) ಕಾರ್ಯಕ್ರಮದಡಿ ವಿಮಾನ ನಿಲ್ದಾಣಗಳಲ್ಲಿನ ಸೌಲಭ್ಯ, ತಂತ್ರಜ್ಞಾನ ಬಳಕೆ, ಪ್ರಯಾಣಿಕ ಸ್ನೇಹಿ ಸೌಕರ್ಯಗಳನ್ನು ಆಧರಿಸಿ ಮಾನ್ಯತೆ ನೀಡುತ್ತದೆ. ಕೆಐಎಎಲ್, ಈ ಹಿಂದೆ ಎಸಿಐ-1 ಮತ್ತು 2ನೇ ಹಂತದ ಮಾನ್ಯತೆ ಪಡೆದಿತ್ತು. ಎಸಿಐ, ಪ್ರಯಾಣಿಕರ ಸರ್ವೆ ಮೂಲಕ ಈಗ ಕೆಐಎಎಲ್‌ಗೆ ಎಸಿಐನ 3ನೇ ಹಂತದ ಮಾನ್ಯತೆ ನೀಡಿದೆ. ವಿಮಾನ ನಿಲ್ದಾಣಗಳ ಕಾರ್ಯತಂತ್ರ, ನೀತಿ ನಿಯಮ ಮತ್ತು ಅವುಗಳಿಂದ ದೊರೆಯುವ ಫಲಿತಾಂಶವನ್ನು ಎಸಿಐ ಮೌಲ್ಯಮಾಪನ ಮಾಡುತ್ತದೆ. ಪ್ರಯಾಣಿಕರು, ಸಿಬ್ಬಂದಿ ಸೇರಿದಂತೆ ವಿಮಾನ ನಿಲ್ದಾಣದ ಎಲ್ಲ ಬಳಕೆದಾರರ ಪ್ರಯಾಣ ಅನುಭವದ ಅಭಿಪ್ರಾಯ ಆಧರಿಸಿ ಈ ಮಾನ್ಯತೆ ನೀಡಲಾಗಿದೆ.
ಈ ಮಾನ್ಯತೆಗೆ ಸಂತಸ ವ್ಯಕ್ತಪಡಿಸಿರುವ ಕೆಐಎಎಲ್, ʻಈ ಮಾನ್ಯತೆಯು ಪ್ರತಿ ಪ್ರಯಾಣಿಕರಿಗೂ ಗೌರವಯುತ ಪ್ರಯಾಣದ ಅನುಭವ ಸೃಷ್ಟಿಸುವ ನಮ್ಮ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ವಿಶೇಷಚೇತನರು ಅಥವಾ ಸಂಚರಿಸಲು ತೊಂದರೆ ಇರುವವರು ಪ್ರತಿ ಪ್ರಯಾಣವನ್ನು ಸುಲಭವಾಗಿ ಮತ್ತು ಗೌರವದಿಂದ ನಿರ್ವಹಿಸಲು ಸಾಧ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು ಶ್ರಮಿಸುತ್ತೇವೆ. ʼಗ್ರಾಹಕರು ಮೊದಲುʼ ಎಂಬ ತತ್ವದಲ್ಲಿ ನಂಬಿಕೆಯಿಟ್ಟಿರುವ ಕೆಐಎಎಲ್ ವಿಮಾನ ನಿಲ್ದಾಣ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿಎಸಿಐ 1ನೇ ಹಂತದಿಂದ (2024-ಡಿಸೆಂಬರ್) 3ನೇ ಹಂತಕ್ಕೆ (2025-ನವೆಂಬರ್) ಸ್ಥಿರವಾಗಿ ಮುಂದುವರಿದಿದೆ,ʼ ಎಂದು ಕೆಐಎಎಲ್ ತಿಳಿಸಿದೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣ ಸೇವಾ ನಿಯಮಿತ ವತಿಯಿಂದ ತಿರುಚಿನಾಪಳ್ಳಿ ವಿಮಾನ ನಿಲ್ದಾಣದಲ್ಲಿ ಓ’ವೆಟ್ರಾ ಲೌಂಜ್ ಪ್ರಾರಂಭ
2ನೇ ಏರ್‌ಪೋರ್ಟ್ 2-3 ದಿನದಲ್ಲಿಎಎಐ ವರದಿ
ರಾಜಧಾನಿ ಬೆಂಗಳೂರಿನಲ್ಲಿ2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಸ್ಥಳ ಪರಿಶೀಲನೆ ನಡೆಸಿದ್ದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಇನ್ನು 2-3 ದಿನಗಳಲ್ಲಿ ವರದಿ ನೀಡಲಿದೆ ಎಂದು ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಸ್ಥಳ ಆಯ್ಕೆ ಕುರಿತಂತೆ ಎಎಐ ತಾಂತ್ರಿಕ ಮಾನದಂಡ ಆಧರಿಸಿದ ವರದಿ ಸಲ್ಲಿಕೆಯಾದ ಬಳಿಕ, ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು,’’ ಎಂದು ಹೇಳಿದರು. ‘‘2ನೇ ವಿಮಾನ ನಿಲ್ದಾಣ ನಿರ್ಮಾಣ ಆರಂಭಿಸಲು 2033 ರವರೆಗೆ ನಿರ್ಬಂಧವಿದೆ. ಆದರೆ, ಈಗಿನಿಂದಲೇ ಅಗತ್ಯ ಪ್ರಕ್ರಿಯೆಗಳನ್ನು ಆರಂಭಿಸಿದರೆ ಆ ವೇಳೆಗೆ ಮುಗಿಸಬಹುದು. ವಿಮಾನ ನಿಲ್ದಾಣ ನಿರ್ಮಿಸಲು ಕನಿಷ್ಠ ಐದಾರು ವರ್ಷಗಳು ಬೇಕಾಗುತ್ತವೆ,’’ ಎಂದು ತಿಳಿಸಿದರು.
ಎಎಐ ಪರಿಶೀಲಿಸಿರುವ ಸ್ಥಳಗಳ ಪೈಕಿ ಒಂದಕ್ಕಿಂತ ಹೆಚ್ಚು ಸ್ಥಳಗಳಿಗೂ ಹಸಿರು ನಿಶಾನೆ ತೋರಬಹುದು. ಈ ಉದ್ದೇಶಕ್ಕೆ ಅಗತ್ಯವಾದ ಐದಾರು ಸಾವಿರ ಎಕರೆ ಭೂಮಿಯನ್ನೂ ಸರಕಾರ ನೀಡಬಹುದು. ಆದರೆ, ಏರ್‌ಪೋರ್ಟ್ ನಿರ್ಮಾಣ ಸಂಸ್ಥೆಗಳು ಇದು ಆರ್ಥಿಕವಾಗಿ ಲಾಭದಾಯಕವೇ ಎಂಬುದನ್ನು ಪ್ರಮುಖವಾಗಿ ನೋಡುತ್ತವೆ ಎಂದರು.
ಇದನ್ನೂ ಓದಿ: CM Siddaramaiah: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಆಕರ್ಷಕ ಕಲಾಲೋಕ ಮಳಿಗೆಗೆ ಸಿಎಂ ಸಿದ್ದರಾಮಯ್ಯ ಚಾಲನೆ