ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಖಾತೆ ಕೈತಪ್ಪಿದ್ದಕ್ಕೆ ಸಚಿವ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಸಚಿವ ಕೆ.ಎಚ್. ಮುನಿಯಪ್ಪ (K.H. Muniyappa) ಅವರು ಕೂಡ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಆದರೆ, ರಾಹುಲ್ ಗಾಂಧಿ ಅವರ ಜತೆ ಚರ್ಚೆ ಬಳಿಕ ಅವರು ರಾಜೀನಾಮೆಯಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.
ಮಲ್ಲಿಕಾರ್ಜುನ ಖರ್ಗೆ ಅವರ ನಾಮಪತ್ರ ಸಲ್ಲಿಕೆಗೆಂದು ಬೆಂಗಳೂರಿಗೆ ಬಂದಿದ್ದ ರಾಹುಲ್ ಗಾಂಧಿ ಜತೆ ಸಿಎಂ ಡಿಕೆ ಶಿವಕುಮಾರ್ ಅವರು ಸಚಿವರ ಖಾತೆ ಕ್ಯಾತೆ ವಿಚಾರ ಪ್ರಸ್ತಾಪಿಸಿದ್ದಾರೆ. ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿರುವ ಬಗ್ಗೆ ರಾಹುಲ್ ಗಮನಕ್ಕೆ ತಂದಿದ್ದಾರೆ. ಅಲ್ಲದೇ ಇದೇ ವೇಳೆ ಕೆ.ಎಚ್ ಮುನಿಯಪ್ಪ ಅವರ ಅಸಮಾಧಾನವೂ ಸಹ ಚರ್ಚೆಯಾಗಿದೆ.
ಡಿಕೆಶಿ ಸಂಪುಟದಲ್ಲಿ ಮತ್ತೆ ಆಹಾರ ಇಲಾಖೆ ಜವಾಬ್ದಾರಿ ನೀಡಿದ್ದಕ್ಕೆ ಹಿರಿಯ ಸಚಿವ ಕೆ.ಎಚ್. ಮುನಿಯಪ್ಪ (KH Muniyappa) ಅವರು ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ಖುದ್ದು ರಾಹುಲ್ ಗಾಂಧಿ ಅವರ ಬಳಿಯೇ ಇಂದು ಅಸಮಾಧಾನ ತೋಡಿಕೊಂಡಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ಅವರು ಗೊಂದಲ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಸಮಾಧಾನಗೊಂಡಿರುವ ಮುನಿಯಪ್ಪ, ಐ ಆ್ಯಮ್ ಹ್ಯಾಪಿ ಎಂದಿದ್ದಾರೆ.
ರಾಮಲಿಂಗಾರೆಡ್ಡಿ ನನಗೆ ಬಹಳ ಆಪ್ತರು, ಅವರೊಂದಿಗೆ ಮಾತನಾಡುವೆ ಎಂದ ಡಿ.ಕೆ. ಶಿವಕುಮಾರ್
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮುನಿಯಪ್ಪ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿದ್ದೆ. ರಾಹುಲ್ ಗಾಂಧಿ ಗೊಂದಲ ಸರಿಪಡಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಐ ಆ್ಯಮ್ ಹ್ಯಾಪಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ರಾಜೀನಾಮೆಯಿಂದ ಹಿಂದೆ ಸರಿದಿದ್ದಾರೆ.
ಬೇಸರ ಹೊರ ಹಾಕಿದ್ದ ಕೆ.ಎಚ್. ಮುನಿಯಪ್ಪ
ಸಿದ್ದರಾಮಯ್ಯನವರ ಸರ್ಕಾರದಲ್ಲೂ ಆಹಾರ ಇಲಾಖೆ ಖಾತೆಯನ್ನು ಮುನಿಯಪ್ಪನವರಿಗೆ ನೀಡಲಾಗಿತ್ತು. ಇದೀಗ ಡಿಕೆ ಶಿವಕುಮಾರ್ ಸಂಪುಟದಲ್ಲೂ ಸಹ ಅದೇ ಖಾತೆ ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡಿದ್ದ ಮುನಿಯಪ್ಪ, ಬೆಳಗ್ಗೆ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಬೇಸರ ಹೊರಹಾಕಿದ್ದರು.
ನಾನು ರಾಜಕೀಯದಲ್ಲಿ 8 ಬಾರಿ ಗೆದ್ದಿರುವ ಅತ್ಯಂತ ಹಿರಿಯ ನಾಯಕ. ಸಂಪುಟದಲ್ಲಿ ಪ್ರೊಟೊಕಾಲ್ ಪ್ರಕಾರ ಸೀನಿಯಾರಿಟಿ ನೋಡಿ ಖಾತೆ ಹಂಚಬೇಕಿತ್ತು. ಸಮಾಜ ಕಲ್ಯಾಣ ಅಥವಾ ಕೃಷಿ ಇಲಾಖೆಯಂತಹ ಜನಸೇವೆಗೆ ನೇರ ಅವಕಾಶವಿರುವ ದೊಡ್ಡ ಖಾತೆ ನೀಡುವಂತೆ ನಾನು ಮೊದಲೇ ಕೇಳಿದ್ದೆ. ಆದರೆ ಹಂಚಿಕೆಯಲ್ಲಿ ಯಾವುದೇ ಸಮಾತೋಲನ ಕಾಯ್ದುಕೊಂಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಇದೀಗ ಇವರನನು ರಾಹುಲ್ ಗಾಂಧಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಮಲಿಂಗಾ ರೆಡ್ಡಿ ಬೆನ್ನಲ್ಲೇ ಮುನಿಯಪ್ಪ ತಕರಾರು; ಬೇರೆ ಖಾತೆಗೆ ಪಟ್ಟು ಹಿಡಿದ ಸಚಿವ
ಮನವೊಲಿಸಿ, ಒಪ್ಪದಿದ್ರೆ ರಾಜೀನಾಮೆ ಅಂಗೀಕರಿಸಿ: ರಾಹುಲ್ ಗಾಂಧಿ ಸೂಚನೆ
ರಾಜ್ಯಸಭಾ ಚುನಾವಣೆಗಾಗಿ ಮಲ್ಲಿಕಾರ್ಜುನ ಖರ್ಗೆ ಅವರ ನಾಮಪತ್ರ ಸಲ್ಲಿಕೆ ಹಿನ್ನೆಲೆ ರಾಹುಲ್ ಗಾಂಧಿ ಅವರು ಇಂದು ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿರುವ ವಿಚಾರವನ್ನು ಸುರ್ಜೇವಾಲಾ, ವೇಣುಗೋಪಾಲ್ ಅವರು ರಾಹುಲ್ ಗಾಂಧಿ ಗಮನಕ್ಕೆ ತಂದಿದ್ದಾರೆ. ಬಳಿಕ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ರಾಹುಲ್ ಗಾಂಧಿ ಒನ್ ಲೈನ್ ಮೆಸೇಜ್ ಪಾಸ್ ಮಾಡಿದ್ದು, "ಚರ್ಚೆ ಮಾಡಿ ಮನವೊಲಿಸಿ, ಒಪ್ಪದಿದ್ರೆ ರಾಜೀನಾಮೆ ಅಂಗೀಕರಿಸಿ" ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.