ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕನ್ನಡಿಗರ ಹೆಮ್ಮೆಯ ನಂದಿನಿ (KMF Nandini) ಸಾಥ್ ನೀಡಲಿದೆ. ಆರ್‌ಸಿಬಿಗೆ (RCB) ಕೆಎಂಎಫ್ ಅಧಿಕೃತ ಡೈರಿ ಪಾರ್ಟ್ನರ್ ಆಗಿದ್ದು, ಸದ್ಯದಲ್ಲೇ ವಿರಾಟ್ ಕೊಹ್ಲಿ, ರಜತ್ ಪಟಿದಾರ್, ದೇವದತ್ ಪಡಿಕಲ್ ಭಾವಚಿತ್ರದ ಉತ್ಪನ್ನಗಳ ಅನಾವರಣ ಕೂಡ ಆಗಲಿದೆ.
ಈ ಬಗ್ಗೆ ಕೆಎಂಎಫ್ ಎಂ.ಡಿ ಬಿ ಶಿವಸ್ವಾಮಿ ಮಾಹಿತಿ ನೀಡಿದ್ದು, ನಂದಿನಿ ಉತ್ಪನ್ನಗಳನ್ನು ದೇಶ, ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ. ಆರ್‌ಸಿಬಿ ಜತೆಗೆ ನಮ್ಮ ಮಾರ್ಕೆಟ್ ವಿಸ್ತರಣೆಯಾಗಲಿದೆ. ಕಳೆದ 2024ರಿಂದ ಪ್ರಯತ್ನ ನಡೆಸಲಾಗಿತ್ತು. ಕ್ರೀಡೆಗಳಲ್ಲಿ ನಂದಿನಿ ಪ್ರಾಯೋಜಕತ್ವದಿಂದ ನಮ್ಮ ಉತ್ಪನ್ನಗಳು ಯುವಜನರನ್ನು ಸೆಳೆಯಲಿವೆ. ಆರ್‌ಸಿಬಿ ಹಾಗೂ ನಂದಿನಿ ಎರಡು ಐಕಾನಿಕ್ ಬ್ರ್ಯಾಂಡ್‌ಗಳು. ಇವೆರಡು ಒಂದಾದರೆ ಯುವಜನರನ್ನು ಸೆಳೆಯಬಹುದು ಎಂದು ಎಂ.ಡಿ ಶಿವಸ್ವಾಮಿ ಹೇಳಿದರು.
ಆರ್ಸಿಬಿಯ ಡೈರಿ ಪಾರ್ಟ್ನರ್ ಆಗಿರುವ ನಂದಿನಿ, ವಿರಾಟ್ ಕೊಹ್ಲಿ, ರಜತ್ ಪಟಿದಾರ್, ದೇವದತ್ ಪಡಿಕಲ್ ಭಾವಚಿತ್ರದ ಉತ್ಪನ್ನಗಳನ್ನು ಅನಾವರಣ ಮಾಡಲಿದೆ. ಇನ್ನು ಟೆಂಡರ್‌ನಲ್ಲಿ ನಂದಿನಿ ಬರೋಬ್ಬರಿ 4 ಕೋಟಿ 80 ಲಕ್ಷ ನೀಡಿ ಒಂದು ವರ್ಷದವರೆಗೆ ಪ್ರಾಯೋಜಕತ್ವ ಪಡೆದಿದೆ. ಇದರಿಂದ ಉತ್ತರ ಭಾರತದಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಅಮುಲ್‌ಗೆ ಸ್ಪರ್ಧೆ ನೀಡಲು ಕೆಎಂಎಫ್ ತೀರ್ಮಾನ
ಇನ್ನು, ಕೇವಲ ಚಿನ್ನಸ್ವಾಮಿ ಅಷ್ಟೇ ಅಲ್ಲದೇ ಆರ್‌ಸಿಬಿ ಪಂದ್ಯ ಇದ್ದ ಮೈದಾನದಲ್ಲಿ ನಂದಿನಿ ಉತ್ಪನ್ನ ಮಾರಾಟ ಮಾಡಲಾಗುವುದು ಎಂದು ಕೆಎಂಎಫ್ ಎಂ.ಡಿ ಶಿವಸ್ವಾಮಿ ಮಾಹಿತಿ ನೀಡಿದರು. ಈ ಮೂಲಕ ಅಮುಲ್‌ಗೆ ಸ್ಪರ್ಧೆ ನೀಡಲು ಕೆಎಂಎಫ್ ತೀರ್ಮಾನಿಸಿದ್ದು, ಕೇವಲ ದಕ್ಷಿಣ ಭಾರತ ಮಾತ್ರವಲ್ಲದೇ ಉತ್ತರ ಭಾರತದಲ್ಲೂ ತನ್ನ ಪ್ರಾಬಲ್ಯವನ್ನು ಹೆಚ್ಚಿಸಲು ನಿರ್ಧರಿಸಿದೆ. ಆದರೆ ಬೇಸರ ಸಂಗತಿಯೆಂದರೆ ಆಟಗಾರರ ಜೆರ್ಸಿ ಮೇಲೆ ಕೆಎಂಎಫ್ ಲೋಗೋ ಇರುವುದಿಲ್ಲ, ಮೈದಾನದಲ್ಲಿ ಉತ್ಪನ್ನ ಮಾರಾಟ ಮಾಡಲು ಅವಕಾಶ ಇದೆ ಎಂದು ಮಾಹಿತಿ ನೀಡಿದ್ದಾರೆ.