ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

KPSC Recruitment Scam: ಕೆಪಿಎಸ್‌ಸಿ ಪರೀಕ್ಷಾ ಅಕ್ರಮಗಳ ತನಿಖೆ ಸಿಐಡಿಗೆ ವರ್ಗಾವಣೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

KPSC Recruitment Scam: ಯಾವುದೇ ಪರೀಕ್ಷೆಗಳು ಅಥವಾ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ, ಅಕ್ರಮ ಆರೋಪಗಳು ಕಂಡುಬಂದರೆ, ಅವುಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರು, ಜುಲೈ 28: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸಂಬಂಧ ಸಾರ್ವಜನಿಕ ಪರೀಕ್ಷೆ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು (KPSC Recruitment Scam) ನಡೆದಿರುವ ಆರೋಪಗಳ ಕುರಿತು ದಾಖಲಾಗಿರುವ ಎರಡು ಪ್ರಕರಣಗಳ ತನಿಖೆಯನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ)ಗೆ ವರ್ಗಾಯಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.

ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಸಾರ್ವಜನಿಕ ಪರೀಕ್ಷೆ (ಭ್ರಷ್ಟಾಚಾರ ಮತ್ತು ನೇಮಕಾತಿಯಲ್ಲಿನ ಅನ್ಯಾಯದ ವಿಧಾನಗಳ ತಡೆ) ಅಧಿನಿಯಮ, 2023ರ ಕಲಂ 10ರಡಿ ದಾಖಲಾಗಿರುವ ಎರಡು ಪ್ರಕರಣಗಳ ಕುರಿತು ನ್ಯಾಯಸಮ್ಮತ, ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಸಾರ್ವಜನಿಕ ನೇಮಕಾತಿ ಪ್ರಕ್ರಿಯೆಯ ಪಾವಿತ್ರ್ಯ, ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯನ್ನು ಕಾಪಾಡುವುದು ರಾಜ್ಯ ಸರ್ಕಾರದ ಅಚಲ ಬದ್ಧತೆಯಾಗಿದೆ ಎಂದಿರುವ ಅವರು, ಪರೀಕ್ಷೆಗಳು ಅಥವಾ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ, ಅಕ್ರಮ, ಅಕ್ರಮ ವಿಧಾನಗಳು ಅಥವಾ ಯಾವುದೇ ರೀತಿಯ ದುರುಪಯೋಗ ನಡೆದಿರುವ ಆರೋಪಗಳು ಕಂಡುಬಂದರೆ, ಅವುಗಳನ್ನು ಯಾವುದೇ ವ್ಯಕ್ತಿಯ ಸ್ಥಾನಮಾನವನ್ನು ಪರಿಗಣಿಸದೆ, ನಿರ್ಭಯವಾಗಿ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಪ್ರಕರಣಗಳನ್ನು ಸಿಐಡಿಗೆ ವರ್ಗಾಯಿಸಿರುವುದು ಸ್ವತಂತ್ರ, ಪಾರದರ್ಶಕ ಹಾಗೂ ವಿಶ್ವಾಸಾರ್ಹ ತನಿಖೆ ನಡೆಸುವ ಸರ್ಕಾರದ ದೃಢ ಸಂಕಲ್ಪದ ಪ್ರತೀಕವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಲಕ್ಷಾಂತರ ಅಭ್ಯರ್ಥಿಗಳ ವಿಶ್ವಾಸವನ್ನು ಉಳಿಸುವುದು ಹಾಗೂ ಪ್ರತಿಭೆ ಮತ್ತು ಅರ್ಹತೆಗೆ ನ್ಯಾಯ ಒದಗಿಸುವುದು ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

KPSC scam: ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ತಾತ್ಕಾಲಿಕ ತಡೆ; ಅಕ್ರಮ ತನಿಖೆಗೆ ಆಂತರಿಕ ವಿಚಾರಣಾ ಉಪಸಮಿತಿ ರಚಿಸಿದ ಕೆಪಿಎಸ್‌ಸಿ

ಸಾರ್ವಜನಿಕ ಪರೀಕ್ಷೆಗಳ ಪಾವಿತ್ರ್ಯವನ್ನು ಕಾಪಾಡುವುದು ಹಾಗೂ ಅರ್ಹತೆ ಆಧಾರಿತ ನೇಮಕಾತಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.