ಬೆಂಗಳೂರು: ಕೆ.ಆರ್.ಪುರದಲ್ಲಿ ನಡೆದಿದ್ದ ತ್ರಿಬಲ್ ಮರ್ಡರ್ ಪ್ರಕರಣದಲ್ಲಿ (Bengaluru triple murder) ತಲೆಮರೆಸಿಕೊಂಡಿದ್ದ ಆರೋಪಿ, ಶ್ವೇತಾ ಪ್ರಿಯಕರ ಕೆನೆತ್‌ನನ್ನು ಪೊಲೀಸರು ಪುದುಚೇರಿಯಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ಕೆ.ಆರ್.ಪುರ ಪೊಲೀಸರು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ಆರೋಪಿ ಶ್ವೇತಾ ಪೊಲೀಸರ ವಶದಲ್ಲಿದ್ದು, ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಈ ನಡುವೆ ಕೆನೆತ್ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಿದ್ದ ಪೊಲೀಸರು ಹಲವು ರಾಜ್ಯಗಳಲ್ಲಿ ಹುಡುಕಾಟ ನಡೆಸಿದ್ದರು.
ಪೊಲೀಸರ ತನಿಖೆ ವೇಳೆ ಶ್ವೇತಾ ಮತ್ತು ಕೆನೆತ್ ಇಬ್ಬರೂ ಬೆಂಗಳೂರಿನಿಂದ ಬೈಕ್‌ನಲ್ಲಿ ಪುದುಚೇರಿಗೆ ತೆರಳಿರುವುದು ಗೊತ್ತಾಗಿತ್ತು. ಕೆನೆತ್ ಶ್ವೇತಾಳನ್ನು ಪುದುಚೇರಿವರೆಗೆ ಕರೆದೊಯ್ದಿದ್ದ. ಅಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಬಳಿಕ ಇಬ್ಬರೂ ಬೇರೆ ಬೇರೆಯಾಗಿದ್ದಾರೆ.
ಕೆನೆತ್ ಶ್ವೇತಾಳನ್ನು ಪುದುಚೇರಿಯಲ್ಲೇ ಬಿಟ್ಟು ಹೋಗಿದ್ದ. ಬಳಿಕ ಶ್ವೇತಾ ಪುದುಚೇರಿ ರೈಲು ನಿಲ್ದಾಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಳು. ಅಲ್ಲಿಂದ ಬೇರೆ ಕಡೆ ತೆರಳಲು ಆಕೆ ಯೋಜನೆ ರೂಪಿಸಿದ್ದಳಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಕೆನೆತ್ ಪತ್ತೆಗಾಗಿ ಕೆ.ಆರ್.ಪುರ ಪೊಲೀಸರು ತಿರುಚಿ, ವೆಲಾಂಗಣಿ, ಚೆನ್ನೈ ಹಾಗೂ ಕೊಯಂಬತ್ತೂರಿನಲ್ಲಿ ಹುಡುಕಾಟ ನಡೆಸಿದ್ದರು. ಆತ ವಿವಿಧ ಸ್ಥಳಗಳಲ್ಲಿ ಸಂಚರಿಸಿ ಕೊನೆಗೆ ಪುದುಚೇರಿಗೆ ತಲುಪಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಆತನ ಸಂಚಾರದ ಮಾಹಿತಿ ಆಧರಿಸಿ ಎರಡು ಪೊಲೀಸ್ ತಂಡಗಳು ನಿರಂತರವಾಗಿ ಬೆನ್ನುಹತ್ತಿದ್ದವು. ಕೊನೆಗೆ ಕಳೆದ ರಾತ್ರಿ ಪುದುಚೇರಿಯಲ್ಲಿ ಕೆನೆತ್‌ನನ್ನು ವಶಕ್ಕೆ ಪಡೆಯಲಾಗಿದೆ.
ಲಿಕ್ಕರ್ ಶಾಪ್‌ನಲ್ಲಿ ಸಿಕ್ಕಿಬಿದ್ದ
ಪೊಲೀಸರ ಕಣ್ಣು ತಪ್ಪಿಸಲು ಶ್ವೇತಾಳನ್ನು ಪಾಂಡಿಚೇರಿವರೆಗೂ ಕರೆದೊಯ್ದಿದ್ದ ಆರೋಪಿ ಕೆನತ್, ರೈಲ್ವೆ ಸ್ಟೇಷನ್‌ನಲ್ಲೇ ಆಕೆಯನ್ನು ಬಿಟ್ಟು, ಮೊಬೈಲ್ ಕೂಡ ಬಳಸದೆ ತಲೆಮರೆಸಿಕೊಂಡಿದ್ದ. ಆದರೆ ಕೆ.ಆರ್.ಪುರಂ ಪೊಲೀಸರು ಮತ್ತು ಪುದುಚೇರಿಯ ಎಎಸ್‌ಐ ರಾಮಲಿಂಗಮ್ ತಂಡ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ರಕ್ತ ಕೈಗಂಟಿಸಿಕೊಂಡಿದ್ದ ಹಂತಕ ಅಲ್ಲಿನ ಲಿಕ್ಕರ್ ಔಟ್‌ಲೆಟ್‌ನಲ್ಲಿ ಕುಡಿಯುತ್ತಿದ್ದಾಗ ಖಾಕಿ ಪಡೆ ದಾಳಿ ಮಾಡಿ, ಅರೆಸ್ಟ್ ಮಾಡಿದೆ.
ಆರೋಪಿಯನ್ನು ಬಂಧಿಸಿ, ಇಂದು ಕೆ.ಆರ್ ಪುರ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.
ತಾಯಿ ಹತ್ಯೆಗೆ ಸಂಚು, ಅನಿರೀಕ್ಷಿತವಾಗಿ ಬಂದ ತಂದೆ, ತಂಗಿಯ ಕಥೆಯನ್ನೂ ಮುಗಿಸಿದಳು!
ಬೆಂಗಳೂರಿನಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣ ಸಂಪೂರ್ಣ ಯೋಜಿತವಲ್ಲ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಮಗಳು ಶ್ವೇತಾ ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ತಾಯಿಯ ಕೊಲೆ ಮಾಡಿದ್ದಳು. ಶವವನ್ನು ವಿಲೇವಾರಿ ಮಾಡಲು ಯೋಜನೆ ಹಾಕಿಕೊಳ್ಳುತ್ತಿದ್ದಾಗ ಅನಿರೀಕ್ಷಿತವಾಗಿ ತಂದೆ ಮತ್ತು ಸಹೋದರಿ ಬಂದಿದ್ದು, ಬಳಿಕ ಅವರನ್ನು ಕೂಡ ಕೊಲೆ ಮಾಡಿದ್ದಾರೆ. ಪ್ರಕರಣದ ಬಳಿಕ ಮಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆಕೆಯ ಸ್ನೇಹಿತ ಪರಾರಿಯಾಗಿದ್ದ.
ಬೆಂಗಳೂರಿನ ಕೆಆರ್ ಪುರಂ ಪ್ರದೇಶದಲ್ಲಿ ಒಂದೇ ಕುಟುಂಬದ ಮೂವರು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇದು ತಾಯಿಯ ಹತ್ಯೆಗೆ ಮಗಳು ರೂಪಿಸಿದ ಯೋಜನೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಶ್ವೇತಾ (24) ತನ್ನ ಗೆಳೆಯ ಕೆನ್ನೆತ್ (26) ಜೊತೆ ಸೇರಿ ತಾಯಿಯನ್ನು ಕೊಲ್ಲಲು ಸಂಚು ರೂಪಿಸಿದ್ದಳು.
ಶ್ವೇತಾಳ ತಾಯಿ ಮುತ್ತುಲಕ್ಷ್ಮಿಯನ್ನು ಯಾರಿಗೂ ಅನುಮಾನ ಬಾರದಂತೆ ಕೊಲೆ ಮಾಡುವ ಯೋಜನೆ ಹಾಕಿಕೊಂಡಿದ್ದ ಶ್ವೇತಾ ಮತ್ತು ಕೆನ್ನೆತ್ ರಾತ್ರಿ ವೇಳೆ ಶವವನ್ನು ಸಾಗಿಸುವ ಯೋಜನೆ ಮಾಡಿಕೊಂಡಿದ್ದರು. ಆರೋಪಿಗಳಿಬ್ಬರು ಮುತ್ತುಲಕ್ಷ್ಮಿಯನ್ನು ಕೊಂದು ಮೃತದೇಹವನ್ನು ಮತ್ತೊಂದು ಬಾಡಿಗೆ ಫ್ಲಾಟ್‌ಗೆ ಸ್ಥಳಾಂತರಿಸಲು ಉದ್ದೇಶಿಸಿದ್ದರು. ಆದರೆ ಅಷ್ಟರಲ್ಲಿ ಶ್ವೇತಾಳ ತಂದೆ ಮತ್ತು ತಂಗಿ ಮನೆಗೆ ಮರಳಿದ್ದಾರೆ. ಇದರಿಂದ ಭಯಭೀತರಾದ ಅವರು ಅವರಿಬ್ಬರನ್ನೂ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.