ಪ್ರತಿಭೆ ಸಮಾಜದ ಉತ್ಪತ್ತಿ, ಸಮಾಜಮುಖಿಗಳಾಗೋಣ: ಕೆವಿಪಿ ಕರೆ
Pratibha puraskar program: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರು ಮತ್ತು ಬಳಕೆದಾರರ ಸಹಕಾರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಮಾತನಾಡಿದ್ದಾರೆ. ಪ್ರತಿಯೊಬ್ಬ ಮಗುವೂ ಹುಟ್ಟುತ್ತಲೇ ಪ್ರತಿಭೆ ತುಂಬಿಕೊಂಡೇ ಜನಿಸುತ್ತದೆ. ಅವಕಾಶಗಳು, ಪ್ರೋತ್ಸಾಹ ಸಿಕ್ಕಾಗ ಪ್ರತಿಭೆ ಹೊರಗೆ ಬರುತ್ತದೆ ಎಂದು ಅವರು ತಿಳಿಸಿದ್ದಾರೆ.

-

ಬೆಂಗಳೂರು ಸೆ 7: ಪ್ರತಿಭಾ ಪುರಸ್ಕಾರ ಎಂದರೆ ಗಾಡಿ ಚಕ್ರಕ್ಕೆ ಕೀಲೆಣ್ಣೆ ಹಾಕಿದಂತೆ. ಕೀಲೆಣ್ಣೆ ಹಾಕಿದರೆ ಚಕ್ರ ಚೆನ್ನಾಗಿ ಚಲಿಸುತ್ತದೆ. ಹಾಗೆಯೇ ಪ್ರೋತ್ಸಾಹ, ಪುರಸ್ಕಾರ ಸಿಕ್ಕರೆ ಮಕ್ಕಳ ಪ್ರತಿಭೆ ಅರಳುತ್ತದೆ. ಹೀಗೆ ಅರಳಿದ ಮಕ್ಕಳು ಸಂಸ್ಕಾರವಂತರಾಗಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ (KV Prabhakar) ಅಭಿಪ್ರಾಯಪಟ್ಟರು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರು ಮತ್ತು ಬಳಕೆದಾರರ ಸಹಕಾರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬ ಮಗುವೂ ಹುಟ್ಟುತ್ತಲೇ ಪ್ರತಿಭೆ ತುಂಬಿಕೊಂಡೇ ಜನಿಸುತ್ತದೆ. ಅವಕಾಶಗಳು, ಪ್ರೋತ್ಸಾಹ ಸಿಕ್ಕಾಗ ಪ್ರತಿಭೆ ಹೊರಗೆ ಬರುತ್ತದೆ. ಇವತ್ತು ಇಲ್ಲಿ ಪುರಸ್ಕಾರಗೊಂಡ ಮಕ್ಕಳಿಗೆ ಅವಕಾಶ ಸಿಕ್ಕಿದೆ. ಸಮಾಜ ಈ ಅವಕಾಶವನ್ನು ಒದಗಿಸಿರುವುದರ ಜತೆಗೆ ಪೋಷಕರು ತಮ್ಮ ವೈಯುಕ್ತಿಕ ಆಸೆ, ಆಕಾಂಕ್ಷೆಗಳನ್ನು ತ್ಯಾಗ ಮಾಡಿ ಮಕ್ಕಳಿಗೆ ಅಗತ್ಯ ಅವಕಾಶಕ್ಕೆ ನೀರು ಗೊಬ್ಬರ ಒದಗಿಸಿದ್ದಾರೆ. ಹೀಗಾಗಿ ನಿಮ್ಮೊಳಗಿನ ಪ್ರತಿಭೆಗೆ ಪುರಸ್ಕಾರ ಸಿಕ್ಕಿದೆ ಎಂದರು.
ಇಂದು ಇಲ್ಲಿ ಪುರಸ್ಕೃತಗೊಂಡ ಮಕ್ಕಳಲ್ಲಿ ನನ್ನದೊಂದು ನಿವೇದನೆ ಇದೆ. ಏನೆಂದರೆ, ನಿಮ್ಮ ಹಾಗೆಯೇ ಪ್ರತಿಭೆ ಇದ್ದೂ ಅವಕಾಶವಂಚಿತ ಮಕ್ಕಳು ಹೊರಗೆ ಸಾವಿರಾರು ಸಂಖ್ಯೆಯಲ್ಲಿದಗದಾರೆ. ಹೀಗಾಗಿ ನೀವುಗಳು ದೊಡ್ಡವರಾಗಿ ಬೇರೆ ಬೇರೆ ಒಳ್ಳೊಳ್ಳೆ ಹುದ್ದೆಗಳಿಗೆ ಹೋದಾಗ ಅವಕಾಶ ವಂಚಿತ ಮಕ್ಕಳ ರಾಯಭಾರಿಗಳಾಗಿ ಕೆಲಸ ಮಾಡಿ ಎಂದು ಕರೆ ನೀಡಿದರು.
ರಾಗಿ ಕಾಳಿಗೆ ಭೂಮಿಯನ್ನೇ ಸೀಳಿಕೊಂಡು ಮೇಲೆ ಬರುವ ಶಕ್ತಿ ಇರಬಹುದು. ಆದರೆ, ರಾಗಿ ಮೊಳಕೆಯೊಡೆಯಲು ಹದವಾದ ಭೂಮಿ ಸಿಗಬೇಕು. ನೀರು, ಗೊಬ್ಬರ ಬೇಕು. ಪ್ರತಿಭೆ ಕೂಡ ಹಾಗೆಯೇ. ಹದವಾದ ಅವಕಾಶ ಸಿಕ್ಕಾಗ ಪ್ರತಿಭೆ ಅನಾವರಣಗೊಳ್ಳುತ್ತದೆ. ನೀವೂ ಮತ್ತೊಬ್ಬರ ಬದುಕು ಕಟ್ಟಿಕೊಳ್ಳಲು ಹದವಾದ ಭೂಮಿಯಂತಾಗಬೇಕು. ಆಗ ಸಮಾಜ ನಿಮಗೆ ಕೊಟ್ಟಿದ್ದನ್ನು ನೀವು ಸಮಾಜಕ್ಕೇ ವಾಪಸ್ ಕೊಟ್ಟಂತಾಗುತ್ತದೆ, ಸಮಾಜದ ಋಣ ತೀರಿಸಿದಂತಾಗುತ್ತದೆ ಎಂದು ವಿವರಿಸಿದರು.
ಈ ಸುದ್ದಿಯನ್ನೂ ಓದಿ | KV Prabhakar: ಮನುಸ್ಮೃತಿಯ ಘರ್ ವಾಪ್ಸಿಯನ್ನು ಸಂವಿಧಾನ ತಡೆದು ನಿಲ್ಲಿಸಿದೆ: ಕೆ.ವಿ. ಪ್ರಭಾಕರ್
ನಿಮ್ಮ ಹಾಗೆಯೇ ಪ್ರತಿಭೆ ಇರುವ ಹಾಗೂ ಅವಕಾಶ ಇಲ್ಲದ ಮಕ್ಕಳು ಸಮಾಜದಲ್ಲಿ ಲಕ್ಷಾಂತರ ಇದ್ದಾರೆ. ಶಾಲೆಗೆ ಹೋಗಲು ಸಾಧ್ಯವಿಲ್ಲದೆ ಬೆಳಗ್ಗೆ ಹಾಲು ಮಾರುತ್ತಾ, ಹೂ-ತರಕಾರಿ-ಹಣ್ಣು ಮಾರುತ್ತಾ, ಗ್ಯಾರೇಜ್‌ಗಳಲ್ಲಿ, ಕಾರ್ಖಾನೆಗಳಲ್ಲಿ ದಿನಗೂಲಿಗಳಾಗಿ ದುಡಿಯುತ್ತಿರುವ ಮಕ್ಕಳು ಇದ್ದಾರೆ. ಅವರ ಪಾಲಿನ ಅವಕಾಶ ಅವರಿಗೂ ಸಿಗಬೇಕು. ಅವರ ಪರವಾಗಿಯೂ ನೀವು ಅವಕಾಶ ಸೃಷ್ಟಿಸುವವರಾಗಿ ಎಂದು ಕರೆ ನೀಡಿದರು.