KV Prabhakar: ಮನುಸ್ಮೃತಿಯ ಘರ್ ವಾಪ್ಸಿಯನ್ನು ಸಂವಿಧಾನ ತಡೆದು ನಿಲ್ಲಿಸಿದೆ: ಕೆ.ವಿ. ಪ್ರಭಾಕರ್
KV Prabhakar: ಸುದ್ದಿ ಮಾಧ್ಯಮದ ಆತ್ಮ ಆಗಿರುವ ʼವಾಕ್ ಸ್ವಾತಂತ್ರ್ಯ ಮತ್ತು ಜಾತ್ಯತೀತತೆ ಹಾಗೂ ಸಾಮಾಜಿಕ ನ್ಯಾಯʼ ವೇ ಅಂಬೇಡ್ಕರ್ ದೃಷ್ಟಿಕೋನದ ಆತ್ಮವೂ ಆಗಿದೆ. ಅಂಬೇಡ್ಕರ್ ಕೊಟ್ಟ ಸಂವಿಧಾನದ ಮೌಲ್ಯವೂ ಆಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ತಿಳಿಸಿದ್ದಾರೆ.

-

ಚಿತ್ರದುರ್ಗ: ಜಾತಿ ಶ್ರೇಷ್ಠತೆಯ ವ್ಯಸನದ ಮನುಸ್ಮೃತಿಯ ಘರ್ ವಾಪ್ಸಿಗೆ ನಿರಂತರ ಷಡ್ಯಂತ್ರ ನಡೆಯುತ್ತಿದ್ದು ಇದು ಸಾಧ್ಯವಾಗದಂತೆ ತಡೆದು ನಿಲ್ಲಿಸಿರುವುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ. ಈ ಕಾರಣಕ್ಕೇ ಸಂವಿಧಾನದ ಕುತ್ತಿಗಿಗೇ ಕೈ ಹಾಕಲಾಗುತ್ತಿದೆ. ಇದಕ್ಕೆ ಸುದ್ದಿ ಮಾಧ್ಯಮ ಮೂಕಸಾಕ್ಷಿಯಾಗಿರುವುದು ಅಪಾಯಕಾರಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ (KV Prabhakar) ಅಭಿಪ್ರಾಯಪಟ್ಟರು. ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಪ್ರಚಾರ ಇಲಾಖೆ, ಎಸ್.ಸಿ./ಎಸ್.ಟಿ. ಸಂಪಾದಕರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ‘ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಟಿಕೋನ’ ವಿಚಾರಗೋಷ್ಠಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುದ್ದಿ ಮಾಧ್ಯಮದ ಆತ್ಮ ಆಗಿರುವ ʼವಾಕ್ ಸ್ವಾತಂತ್ರ್ಯ ಮತ್ತು ಜಾತ್ಯತೀತತೆ ಹಾಗೂ ಸಾಮಾಜಿಕ ನ್ಯಾಯʼ ವೇ ಅಂಬೇಡ್ಕರ್ ದೃಷ್ಟಿಕೋನದ ಆತ್ಮವೂ ಆಗಿದೆ. ಅಂಬೇಡ್ಕರ್ ಕೊಟ್ಟ ಸಂವಿಧಾನದ ಮೌಲ್ಯವೂ ಆಗಿದೆ ಎಂದು ಅಭಿಪ್ರಾಯಪಟ್ಟರು.
ದೇಶದಲ್ಲಿ ಎರಡು ತದ್ವಿರುದ್ದವಾದ ಬೆಳವಣಿಗೆಗಳು ಅತೀ ವೇಗವಾಗಿ ನಡೆಯುತ್ತಿವೆ. ಒಂದು ಅಂಬೇಡ್ಕರ್ ಅವರ ವಿಗ್ರಹಗಳನ್ನು ಅತೀ ಹೆಚ್ಚು ನಿರ್ಮಿಸುತ್ತಲೇ ಅಂಬೇಡ್ಕರ್ ಅವರ ವಿಚಾರಗಳನ್ನು ಕೊಲ್ಲುವ ಪ್ರಕ್ರಿಯೆ ಕೂಡ ಹೆಚ್ಚು ವೇಗ ಪಡೆದುಕೊಂಡಿದೆ. ವಿಗ್ರಹಗಳನ್ನು ಸ್ಥಾಪಿಸಿ, ವಿಚಾರಗಳನ್ನು ಕೊಲ್ಲುವ ಈ ವಿದ್ಯಮಾನಕ್ಕೆ ಸುದ್ದಿ ಮಾಧ್ಯಮ ಮೂಕಸಾಕ್ಷಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಮ್ಮ 65 ವರ್ಷಗಳ ಜೀವಿತಾವಧಿಯಲ್ಲಿ ಅರ್ಧಕ್ಕೂ ಹೆಚ್ಚು ಆಯಸ್ಸನ್ನು ಅಂಬೇಡ್ಕರ್ ಅವರು ಪತ್ರಕರ್ತರಾಗಿ, ಸಂಪಾದಕರಾಗಿ, ಲೇಖಕರಾಗಿ, ಬರಹಗಾರರಾಗಿ ಕಳೆದಿದ್ದಾರೆ. 1920 ರಲ್ಲಿ "ಮೂಕನಾಯಕ", 1927 ರಲ್ಲಿ "ಬಹಿಷ್ಕೃತ ಭಾರತ", 1928 ರಲ್ಲಿ "ಸಮತಾ", 1930 ರಲ್ಲಿ "ಜನತಾ", 1943 ರಲ್ಲಿ ಪ್ರಬುದ್ಧ ಭಾರತ ಪತ್ರಿಕೆಗಳನ್ನು ಆರಂಭಿಸಿ ಮುನ್ನಡೆಸಿದರು.
ಸದ್ಯ ಸುಮಾರು 25000 ಪುಟದಷ್ಟು ಅಂಬೇಡ್ಕರ್ ಅವರ ಬರಹಗಳು ಲಭ್ಯವಿದೆ. ಸುಮಾರು ಐದು ವರ್ಷಗಳ ಕಾಲ ಜಗತ್ತಿನ ಎಲ್ಲಾ ಧಾರ್ಮಿಕ ಗ್ರಂಥಗಳನ್ನೂ ಅಭ್ಯಾಸ ಮಾಡಿ, ಅಧ್ಯಯನ ನಡೆಸಿ "ಬುದ್ಧ ಮತ್ತು ಅವನ ಧರ್ಮ" ಕೃತಿಯನ್ನು ಬರೆಯುವಾಗಲೇ ತಾವು ಮಾಡಿಟ್ಟಿದ್ದ ನೋಟ್ಸ್‌ಗಳ ರಾಶಿಯ ಮೇಲೇ ಕೊನೆಯುಸಿರೆಳೆದರು.
ತಮ್ಮ ಇಡೀ ಜೀವಮಾನವನ್ನು ಪ್ರಬುದ್ಧ ಭಾರತದ ನಿರ್ಮಾಣಕ್ಕಾಗಿ ನಿರಂತರವಾಗಿ ನಿಷ್ಠುರ ಸಂಪಾದಕೀಯಗಳನ್ನು, ಲೇಖನಗಳನ್ನು ಬರೆದರು. ಆ ನಿಷ್ಠುರತೆ ಇವತ್ತಿನ ಸುದ್ದಿ ಮಾಧ್ಯಮಗಳಲ್ಲಿ ಅಳಿಸುತ್ತಿದೆ. ಒಂದು ಕಡೆ ಮಾಧ್ಯಮಗಳಲ್ಲಿ ದಲಿತ ಸಮುದಾಯದ ಪ್ರಾತಿನಿಧ್ಯವೇ ಇಲ್ಲ ಎನ್ನುವ ಅಧ್ಯಯನ ವರದಿಗಳು ಬಂದಿವೆ. ನಿರ್ಣಾಯಕ ಸ್ಥಾನಗಳಲ್ಲಿ ಮಹಿಳೆಯರಿಗೆ, ದಲಿತರಿಗೆ ಸುದ್ದಿ ಸಂಸ್ಥೆಗಳು ನಿಷೇಧ ಹೇರಿವೆ ಎನ್ನುವ ವರದಿಗಳೂ ಇವೆ. ಈ ತಾರತಮ್ಯ ಸುದ್ದಿಗಳ, ಸಂಗತಿಗಳ ಆಯ್ಕೆಯ ಮೇಲೆ ಪರಿಣಾಮ ಬೀರುತ್ತವೆ. ಮಾತ್ರವಲ್ಲದೆ ಪತ್ರಿಕೆಗಳನ್ನು ರೂಪಿಸುವ ಮತ್ತು ಸುದ್ದಿಗಳನ್ನು ಗ್ರಹಿಸುವುದರಲ್ಲಿ ಮತ್ತು ಮಂಡಿಸುವುದರಲ್ಲೂ ಅಂಬೇಡ್ಕರ್ ದೃಷ್ಟಿಕೋನ ಕಾಣೆಯಾಗಿದೆ ಎಂದರು.
ಆದ್ದರಿಂದ ಅಂಬೇಡ್ಕರ್ ಅವರ ದೃಷ್ಟಿಕೋನದ ಮರುಸ್ಥಾಪನೆ ಮತ್ತು ಸುದ್ದಿ ಮಾಧ್ಯಮಗಳಲ್ಲಿ ನಾಪತ್ತೆಯಾಗಿರುವ ಕಾಳಜಿಗಳ ಮರು ಶೋಧನೆ ಆಗುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Chikkamagaluru News: ಚಿಕ್ಕಮಗಳೂರಿನಲ್ಲಿ ವಾಹನಗಳ ಪ್ರವೇಶಕ್ಕೆ ಮಿತಿ; ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ
ವಿಧಾನ ಪರಿಷತ್ ಸದಸ್ಯರಾದ ನವೀನ್ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಡಿ. ಉಮಾಪತಿ ಆಶಯ ಮಾತುಗಳನ್ನಾಡಿದರು. ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ಕಾರ್ಯದರ್ಶಿ ಸಹನಾ ಭಟ್, ಅಕಾಡೆಮಿ ಸದಸ್ಯರಾದ ಅಹೋಬಳಪತಿ ಸೇರಿ ಎಸ್.ಸಿ./ಎಸ್.ಟಿ. ಸಂಪಾದಕರ ಸಂಘದ ಪದಾಧಿಕಾರಿಗಳು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.