ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala Case: ಕೊಂದವರು ಯಾರು?; ಧರ್ಮಸ್ಥಳ ಕೇಸ್‌ ಕುರಿತು ಮಹಿಳಾ ಸಂಘಟನೆಗಳಿಂದ ಸೋನಿಯಾ ಗಾಂಧಿಗೆ ಪತ್ರ

Sonia Gandhi: ಸುಮಾರು 10 ಮಹಿಳಾ ಸಂಘಟನೆಗಳು ಹಾಗೂ 40 ಸಾಮಾಜಿಕ ಹೋರಾಟಗಾರ್ತಿಯರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದು, ಎಸ್‌ಐಟಿ ತನಿಖೆ, ಚಿನ್ನಯ್ಯನ ಬಂಧನ, ಸುಜಾತ ಭಟ್ ಪ್ರಕರಣ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿಕೆ ಬಗ್ಗೆಯೂ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ (Dharmasthala Case) ಮಧ್ಯಪ್ರವೇಶಿಸುವಂತೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರಿಗೆ ಮಹಿಳಾ ಸಂಘಟನೆಗಳು ಪತ್ರ ಬರೆದಿವೆ. ʻಧರ್ಮಸ್ಥಳದಲ್ಲಿ ಮಹಿಳೆಯರನ್ನು ಕೊಂದವರು ಯಾರು? (Who Killed the Women in Dharmasthala?ʼ ಶೀರ್ಷಿಕೆಯಲ್ಲಿ ಪತ್ರ ಬರೆಯಲಾಗಿದ್ದು, ಧರ್ಮಸ್ಥಳ ಪ್ರಕರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ತೀವ್ರ ಆತಂಕ ಹೊರಹಾಕಿವೆ.

ಸುಮಾರು 10 ಮಹಿಳಾ ಸಂಘಟನೆಗಳು ಹಾಗೂ 40 ಸಾಮಾಜಿಕ ಹೋರಾಟಗಾರ್ತಿಯರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದು, ಎಸ್‌ಐಟಿ ತನಿಖೆ, ಚಿನ್ನಯ್ಯನ ಬಂಧನ, ಸುಜಾತ ಭಟ್ ಪ್ರಕರಣ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿಕೆ ಬಗ್ಗೆಯೂ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ಈ ಪ್ರಕರಣದಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ, ಪ್ರಕರಣದಲ್ಲಿ ಉರುಳಿಲ್ಲ ಎನ್ನುವಂತೆ ದಾರಿ ತಪ್ಪಿಸುವಂತಹ ಹೇಳಿಕೆಯನ್ನು ಡಿಸಿಎಂ ನೀಡಿದ್ದಾರೆ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವ ಡಾ.ಜಿ ಪರಮೇಶ್ವರ್ ವಿಪಕ್ಷಗಳ ಒತ್ತಡಕ್ಕೆ ಮಣಿದಿದ್ದಾರೆ ಎಂದು ಮಹಿಳಾ ಹೋರಾಟಗಾರರು ಅಸಮಾಧಾನ ಹೊರಹಾಕಿದ್ದಾರೆ.

ಎಸ್‌ಐಟಿ, 2018ರ ವಿ.ಎಸ್ ಉಗ್ರಪ್ಪ ಸಮಿತಿ ನೀಡಿದ ವರದಿ ಪರಿಗಣಿಸಬೇಕು. ಎಸ್‌ಐಟಿ ನ್ಯಾಯ ಸಮ್ಮತ ತನಿಖೆ ನಡೆಸಲು ಸರ್ಕಾರದ ಜನಪ್ರತಿನಿಧಿಗಳು ಸಹಕರಿಸಬೇಕು. ಸೌಜನ್ಯ ಪ್ರಕರಣದ ತನಿಖೆಯಲ್ಲಿ ಲೋಪ ಎಸಗಿದ ಅಧಿಕಾರಿಗಳನ್ನು ನ್ಯಾಯಲಯದ ಆದೇಶದಂತೆ ತನಿಖೆಗೆ ಒಳಪಡಿಸಬೇಕು ಎಂದು ಕೋರಲಾಗಿದೆ.

ಪತ್ರದಲ್ಲಿ ಏನಿದೆ?

2025ರ ಜುಲೈನಲ್ಲಿ ಮಹಿಳಾ ಆಯೋಗದ ಅಧ್ಯಕ್ಷರು ಸಿಎಂಗೆ ಪತ್ರ ಬರೆದಿದ್ದರು. ಧರ್ಮಸ್ಥಳದಲ್ಲಿ ನಡೆದಿದ್ದ ಅಸಹಜ ಸಾವು, ಲೈಂಗಿಕ ದೌರ್ಜನ್ಯಗಳ ಬಗ್ಗೆ ಎಸ್‌ಐಟಿ ರಚಿಸಿ ಎಂದು ಪತ್ರ ಬರೆಯಲಾಗಿತ್ತು. ಮಾಧ್ಯಮಗಳಲ್ಲಿ ಮತ್ತು ಸ್ಥಳೀಯ ಸಾಮಾಜಿಕ ಹೋರಾಟಗಾರರು ಹೇಳುವಂತೆ ಸಾಕಷ್ಟು ದೌರ್ಜನ್ಯ ನಡೆದಿತ್ತು. 2012ರ ಸೌಜನ್ಯ ಕೇಸ್, 1986 ಪದ್ಮಲತಾ ಕೇಸ್, 1979ರ ವೇದವಲ್ಲಿ ಪ್ರಕರಣ ಇವುಗಳಲ್ಲಿ ಪ್ರಮುಖವಾದದ್ದು. ಆರ್‌ಟಿಐ ದಾಖಲೆ ಅನ್ವಯ 2001-2012ರ ನಡುವೆ ಉಜಿರೆ ಮತ್ತು ಧರ್ಮಸ್ಥಳದಲ್ಲಿ 424 ಸಾವುಗಳು ಸಂಭವಿಸಿವೆ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸೌಜನ್ಯ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದರೂ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಲು ಇದುವರೆಗೆ ಸಾಧ್ಯವಾಗಿಲ್ಲ. ಜುಲೈ ತಿಂಗಳ ಆರಂಭದಲ್ಲಿ ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಹಲವು ಸಾವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತೋರಿಸುವುದಾಗಿ ಮಾಧ್ಯಮಗಳ ಮುಂದೆ ಬಂದಿದ್ದ ಮಾಧ್ಯಮಗಳು ಹಾಗೂ ಕೆಲವು ರಾಜಕೀಯ ಮುಖಂಡರು ಇದರ ಲಾಭ ಪಡೆದುಕೊಂಡಿದ್ದಾರೆ. ಸುಜಾತ ಭಟ್‌ಗೆ ರಕ್ಷಣೆ ಕೊಡಬೇಕಾಗಿತ್ತು, ಕೊಟ್ಟಿಲ್ಲ. ತನಿಖೆ ನಡೆಯುತ್ತಿರುವಾಗಲೇ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿದ್ದು, ದೂರುದಾರರನ್ನೇ ಅರೆಸ್ಟ್ ಮಾಡಲಾಯಿತು. ಬಿಜೆಪಿ ಇದನ್ನು ಧರ್ಮಯುದ್ಧ ಎಂದು ಬಿಂಬಿಸುತ್ತಿದೆ.

ಈ ಸುದ್ದಿಯನ್ನೂ ಓದಿ | Dharmasthala Case: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಕೇರಳದ ಯುಟ್ಯೂಬರ್‌ಗೆ ಎಸ್‌ಐಟಿ ನೋಟಿಸ್‌

ಇನ್ನು ಎಸ್‌ಐಟಿ ತನಿಖೆ ನಡೆಯುತ್ತಿರುವಾಗಲೇ ಕೆಲವು ಕಾಂಗ್ರೆಸ್ ನಾಯಕರೂ ಹೇಳಿಕೆಗಳನ್ನು ಕೊಡುವುದು ಕಂಡು ಬರುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್, ಗೃಹಸಚಿವ ಪರಮೇಶ್ವರ್, ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಧರ್ಮಸ್ಥಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡದಂತೆ ವಾರ್ನ್ ಮಾಡಿದ್ದಾರೆ. ಹಾಗಾಗಿ ನೀವು ಒಬ್ಬ ವಿರೋಧ ಪಕ್ಷದ ಹಿರಿಯ ನಾಯಕಿಯಾಗಿ ನಾವು ನಿಮಗೆ ಪತ್ರ ಬರೆಯುತ್ತಿದ್ದೇವೆ. 2018ರ ಉಗ್ರಪ್ಪ ವರದಿಯನ್ನು ಎಸ್‌ಐಟಿ ತನಿಖೆಯಲ್ಲಿ ಪರಿಗಣಿಸಬೇಕು. ಈ ಪ್ರಕರಣದ ಸಂತ್ರಸ್ತರಿಗೆ ನ್ಯಾಯ ಸಿಗಬೇಕು. ಕಾಂಗ್ರೆಸ್ ನಾಯಕರು ಎಸ್‌ಐಟಿ ತನಿಖೆಯ ವಿರುದ್ಧ ಹೇಳಿಕೆಗಳನ್ನು ಕೊಡಬಾರದು. ಸೌಜನ್ಯ ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳನ್ನೂ ತನಿಖೆಗೆ ಒಳಪಡಿಸಬೇಕು. ಅದಕ್ಕಾಗಿ ಮಧ್ಯಪ್ರವೇಶಿಸಬೇಕು ಎಂದು ಮಹಿಳಾ ಸಂಘಟನೆಗಳು ಪತ್ರದಲ್ಲಿ ಒತ್ತಾಯಿಸಿವೆ.

ಮಹಿಳಾ ಸಂಘಟನೆಗಳು ಬರೆದಿರುವ ಪತ್ರ ಇಲ್ಲಿದೆ

letter-to-soniagandhi-english