ಬೆಂಗಳೂರು, ಆ.31: ರಾಷ್ಟ್ರೀಯ ಗೀತೆ 'ವಂದೇ ಮಾತರಂ' ರಚನೆಯಾಗಿ 150 ವರ್ಷಗಳು ಪೂರೈಸಿದ ಸಂಭ್ರಮದ ಹಿನ್ನೆಲೆಯಲ್ಲಿ, ನಗರದ (Bengaluru News) ಕನ್ನಡ ಭವನದ ನಯನ ಸಭಾಂಗಣದಲ್ಲಿ ಭಾನುವಾರ ನಡೆದ 'ಮಹಿಳಾ ಯಕ್ಷೋತ್ಸವ - 2026' ಕಾರ್ಯಕ್ರಮದಲ್ಲಿ ಯಕ್ಷಗಾನ ನೃತ್ಯದ ಮೂಲಕ ವಿಶಿಷ್ಟ ನಮನ ಸಲ್ಲಿಸಲಾಯಿತು.
ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ 'ವಂದೇ ಮಾತರಂ' ಗೀತೆಗೆ ಹೆಜ್ಜೆ ಇಡುವ ಮೂಲಕ ದೇಶಭಕ್ತಿ ಹಾಗೂ ಕಲೆಯ ಅಪೂರ್ವ ಸಂಗಮವನ್ನು ಅನಾವರಣಗೊಳಿಸಲಾಯಿತು. ಯಕ್ಷಕಲಾವಿದೆಯರು ವಂದೇ ಮಾತರಂ ಬಳಿಕ ಜೈ ಹಿಂದ್ ಹಾಗೂ ಭಾರತ್ ಮಾತಾಕೀ ಜೈ ಎಂಬ ಜಯಘೋಷ ಮಾಡಿ ಯಕ್ಷನಮನ ಸಲ್ಲಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹಿರಿಯ ಲೇಖಕಿ, ಪತ್ರಕರ್ತೆ ಹಾಗೂ ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಡಾ.ಆರ್. ಪೂರ್ಣಿಮಾ, ʼಯಕ್ಷಗಾನವನ್ನು ಸಾಮಾನ್ಯವಾಗಿ ಗಂಡುಕಲೆ ಎಂದೇ ಕರೆಯಲಾಗುತ್ತಿತ್ತು. ಆದರೆ ಅಂತಹ ಕ್ಷೇತ್ರದಲ್ಲಿ ಮಹಿಳೆಯರೂ ಕೂಡ ಯಕ್ಷಗಾನದ ಎಲ್ಲಾ ಪ್ರಾಕಾರಗಳಲ್ಲಿ ಗಣನೀಯ ಸಾಧನೆ ಮಾಡಿ ಹೆಸರುಗಳಿಸುತ್ತಿರುವುದು ಹೆಮ್ಮೆಯ ಸಂಗತಿ. ಯಾವುದೇ ಇತಿಹಾಸ (History)ವನ್ನು ನೋಡಿದಾಗ ಅಲ್ಲಿ his story (ಅವನ ಕಥೆ) ಯನ್ನಷ್ಟೇ ಹುಡುಕಲಾಗುತ್ತಿತ್ತು. ಆದರೆ ಇಂದು her story (ಅವಳ ಕಥೆ)ಯೂ ದಾಖಲಾಗುವ ಸಂದರ್ಭ ಒದಗಿಬಂದಿದೆ" ಎಂದು ಅಭಿಪ್ರಾಯಪಟ್ಟರು.
26 ವರ್ಷಗಳ ಯಕ್ಷಗಾನ ಸೇವೆಗೆ ಮೆಚ್ಚುಗೆ
ಕಳೆದ 26 ವರ್ಷಗಳಿಂದ ಸತತವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಸಂಸ್ಥೆಯ ರೂವಾರಿ ಕೆ. ಗೌರಿ ಅವರ ಕೊಡುಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಡಾ. ಪೂರ್ಣಿಮಾ, "ಮಹಿಳೆಯರು, ಯುವತಿಯರು ಹಾಗೂ ಬಾಲಕಿಯರಿಗೆ ಯಕ್ಷಗಾನ ಕಲೆಯ ಸೂಕ್ಷ್ಮತೆಗಳನ್ನು ಧಾರೆಯೆರೆದು, ಪ್ರಸಂಗ ರೂಪದಲ್ಲಿ ವೇದಿಕೆಗೆ ತಂದು ಯಕ್ಷೋತ್ಸವ ನಡೆಸುತ್ತಿರುವುದು ಅತ್ಯಂತ ಗಣನೀಯ ಕೆಲಸ" ಎಂದರು.
ಕುಂಬಳೆ ಸುಂದರ ರಾಯರ ಕೃತಿ ಪ್ರಕಟಣೆ
ವೀಣೆ ರಾಜಾರಾಯರ ಪುತ್ರಿಯಾದ ತಾವು ಉದಯವಾಣಿ ಪತ್ರಿಕೆಯ ಸಂಪಾದಕರಾಗಿದ್ದಾಗ ಹಾಗೂ ಮಂಗಳೂರಿನಲ್ಲಿ 'ಪ್ರಜಾವಾಣಿ' ಬ್ಯೂರೋ ಮುಖ್ಯಸ್ಥರಾಗಿದ್ದ ದಿನಗಳಲ್ಲಿ ಯಕ್ಷಗಾನದೊಂದಿಗೆ ಬೆಳೆದ ಬಾಂಧವ್ಯವನ್ನು ಸ್ಮರಿಸಿದ ಡಾ. ಪೂರ್ಣಿಮಾ, ಪ್ರಕಾಶಕಿಯಾಗಿ ತಾವು ಯಕ್ಷಗಾನದ ಅಪ್ರತಿಮ ಕಲಾವಿದ ದಿ. ಕುಂಬಳೆ ಸುಂದರ ರಾಯರ ಕುರಿತ ಕೃತಿಯನ್ನು, ಖ್ಯಾತ ಸಾಹಿತಿ ಡಾ. ನಾ. ದಾಮೋದರ ಶೆಟ್ಟಿ ಅವರ ಸಂಪಾದಕತ್ವದಲ್ಲಿ ಹೊರತಂದಿರುವುದಾಗಿ ಇದೇ ಸಂದರ್ಭದಲ್ಲಿ ಪ್ರಕಟಿಸಿದರು.
ಗಣ್ಯರ ಉಪಸ್ಥಿತಿ ಹಾಗೂ ಪ್ರಸಂಗ ಪ್ರದರ್ಶನ
ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ವಿದ್ವಾಂಸ ಡಾ. ಆನಂದರಾಮ ಉಪಾಧ್ಯ, ಸರಳ ಯೋಗ ವೇದಿಕೆ ಟ್ರಸ್ಟ್ ಕಾರ್ಯಾಧ್ಯಕ್ಷ ಜಯಪ್ರಕಾಶ್ ಎ.ಜಿ.ಕೆ., ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆಯ ನಿರ್ದೇಶಕಿ ಗೌರಿ ಕೆ. ಸಾಸ್ತಾನ ಹಾಗೂ ಯಕ್ಷಗುರು ಶ್ರೀನಿವಾಸ ಸಾಸ್ತಾನ ಉಪಸ್ಥಿತರಿದ್ದರು.
ಉತ್ಸವದ ಭಾಗವಾಗಿ ಯಕ್ಷಗಾನ ಪೂರ್ವರಂಗ, ‘ಕನಕಾಂಗಿ ಕಲ್ಯಾಣʼ ಮತ್ತು ‘ಸುದರ್ಶನ ವಿಜಯ’ ಪೌರಾಣಿಕ ಪ್ರಸಂಗಗಳನ್ನು ಮಹಿಳಾ ಮತ್ತು ಬಾಲ ಕಲಾವಿದೆಯರು ಯಶಸ್ವಿಯಾಗಿ ಪ್ರಸ್ತುತಪಡಿಸಿದರು. ಯಕ್ಷಗಾನ ಗುರುಗಳಾದ ಶ್ರೀನಿವಾಸ ಸಾಸ್ತಾನ ಹಾಗೂ ಗೌತಮ್ ಸಾಸ್ತಾನ ಕಾರ್ಯಕ್ರಮ ಸಂಯೋಜಿಸಿದ್ದು, ಅಂಬಿಕಾ ವಿಜಯಕುಮಾರ್ ಮತ್ತು ಭಾರ್ಗವಿ ಶ್ರೀ ಹರ್ಷ ನಿರೂಪಣೆ ಮಾಡಿದರು.
ಹಿಮ್ಮೇಳ: ಭಾಗವತರಾಗಿ ಸುಬ್ರಹ್ಮಣ್ಯ ನಾವುಡ, ವಿಶ್ವನಾಥ ಶೆಟ್ಟಿ; ಮೃದಂಗದಲ್ಲಿ ನರಸಿಂಹ ಆಚಾರ್, ರಘು ಶರ್ಮ ಹಾಗೂ ಚೆಂಡೆಯಲ್ಲಿ ಸುಬ್ರಹ್ಮಣ್ಯ ಗಾಣಿಗ ಸಾಥ್ ನೀಡಿದರು.
ಮುಮ್ಮೇಳ: ಗೌರಿ ಕೆ. ಸಾಸ್ತಾನ, ಅನ್ನಪೂರ್ಣೇಶ್ವರಿ, ಸುಮ ಅನಿಲ್ ಕುಮಾರ್, ಆಶಾ ಆರ್., ಚೈತ್ರ ಹೊನ್ನಾವರ, ವೀಣಾ ಕಠಾರೆ, ಲಕ್ಷ್ಮೀ ರಾವ್, ಕವಿತ, ಶಶಿಕಲ, ಸರಿತ, ಸೌಗಂಧಿ ನಾಯಕ್, ಶ್ವೇತ, ಗಗನ, ರಕ್ಷಾ ಆರ್., ದೃಷ್ಟಿ, ಚೈತನ್ಯ, ಶ್ರೇಯಾ, ಅನುಷ, ಸಹನ, ಯಾದ್ವಿಯುತಿ, ಕೃತಿ ಅಮ್ಮೆಂಬಳ, ಧೃತಿ ಅಮ್ಮೆಂಬಳ, ಅಭಿಶ್ರೀ, ಸಮೃದ್ಧಿ, ಸೌಜನ್ಯ ನಾವಡ, ಮಾನಸ ನಾವಡ, ಚಿನ್ಮಯಿ, ಮಾನ್ಯ, ರಕ್ಷಾ ಹಾಗೂ ಅಮಿತ ಮೊದಲಾದವರು ವಿವಿಧ ವೇಷಗಳಲ್ಲಿ ಮಿಂಚಿದರು.