Bengaluru Woman Murder: ಅಕ್ರಮ ಸಂಬಂಧ ಶಂಕೆ; ಮಗಳೆದುರೇ ಪತ್ನಿಗೆ 11 ಬಾರಿ ಚಾಕುವಿನಿಂದ ಇರಿದು ಕೊಂದ 2ನೇ ಗಂಡ!
Bengaluru Murder Case: ಬೆಂಗಳೂರು ನಗರದ ಸುಂಕದಕಟ್ಟೆ ಬಳಿ ಸೋಮವಾರ ಬೆಳಗ್ಗೆ ಘಟನೆ ನಡೆದಿದೆ. ಮೃತ ಮಹಿಳೆಯನ್ನು ರೇಖಾ ಎಂದು ಗುರುತಿಸಲಾಗಿದೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ರೇಖಾಳನ್ನು ಪೊಲೀಸರು ಹಾಗೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರೇಖಾ ಮೃತಪಟ್ಟಿದ್ದಾರೆ.

-

ಬೆಂಗಳೂರು: ನಗರದಲ್ಲಿ ಮತ್ತೊಬ್ಬ ಮಹಿಳೆಯ ಭೀಕರ ಹತ್ಯೆ ನಡೆದಿದೆ. ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಮಗಳ ಎದುರೇ ಪತ್ನಿಗೆ ಆಕೆಯ 2ನೇ ಗಂಡ 11 ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾನೆ. ನಗರದ ಸುಂಕದಕಟ್ಟೆ ಬಳಿ ಸೋಮವಾರ ಬೆಳಗ್ಗೆ ಘಟನೆ (Bengaluru Woman Murder) ನಡೆದಿದೆ. ಮೃತ ಮಹಿಳೆಯನ್ನು ರೇಖಾ ಎಂದು ಗುರುತಿಸಲಾಗಿದ್ದು, ಲೋಕೇಶ್ ಅಲಿಯಾಸ್ ಲೋಹಿತಾಶ್ವ ಕೊಲೆ ಆರೋಪಿಯಾಗಿದ್ದಾನೆ.
ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ರೇಖಾಳನ್ನು ಪೊಲೀಸರು ಹಾಗೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರೇಖಾ ಮೃತಪಟ್ಟಿದ್ದಾರೆ. ಚಾಕು ಇರಿದ ನಂತರ ಲೊಕೇಶ್ ಪರಾರಿಯಾಗಿದ್ದು, ಆರೋಪಿಗಾಗಿ ಕಾಮಾಕ್ಷಿ ಪಾಳ್ಯ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಮೃತ ರೇಖಾ ತುಮಕೂರಿನ ಶಿರಾ ಮೂಲದವರಾಗಿದ್ದು, ಕಳೆದ ನಾಲ್ಕು ತಿಂಗಳಿಂದ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ನೆಲೆಸಿದ್ದರು. ಲೋಕೇಶ್ ಅಲಿಯಾಸ್ ಲೋಹಿತಾಶ್ವನ ಜತೆಗೆ ಪರಿಚಯ ಸ್ನೇಹ ಇತ್ತು. ಹೀಗಾಗಿ ರೇಖಾ ಆತನಿಗೆ ತಾನು ಕೆಲಸ ಮಾಡುವ ಸ್ಥಳದಲ್ಲಿ ಡ್ರೈವರ್ ಕೆಲಸ ಕೊಡಿಸಿದ್ದಳು. ಆದರೆ ರೇಖಾ ಮೇಲೆ ಲೋಕೇಶ್ ಮೂರನೇ ಅನೈತಿಕ ಸಂಬಂಧ ಹೊಂದಿರುವ ಅನುಮಾನ ವ್ಯಕ್ತಪಡಿಸಿದ್ದ. ಈ ವಿಚಾರವಾಗಿ ಇಂದು ಬೆಳಗ್ಗೆ ಗಲಾಟೆ ಮಾಡಿ, ಚಾಕುವಿನಿಂದ ಇರಿದಿದ್ದಾನೆ. ರೇಖಾಗೆ ಒಟ್ಟು ಹನ್ನೊಂದು ಬಾರಿ ಚಾಕು ಇರಿದಿದ್ದಾನೆ. ತಲೆಮರೆಸಿಕೊಂಡ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.
ಇನ್ನು ರೇಖಾ ಹಾಗೂ ಲೋಹಿತಾಶ್ವ ಇಬ್ಬರೇ ಗುಟ್ಟಾಗಿ ಮದುವೆಯಾಗಿದ್ದರು. ರೇಖಾಗೆ ಈಗಾಗಲೇ ಮೊದಲ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮೊದಲ ಪತಿಯಿಂದ ಡಿವೋರ್ಸ್ ಪಡೆದು ಲೋಹಿತಾಶ್ವ ಜತೆ ಎರಡನೇ ಮದುವೆ ಆಗಿದ್ದರು. ಲೋಹಿತಾಶ್ವ ಕೂಡ ಮೊದಲ ಹೆಂಡತಿಯನ್ನು ಬಿಟ್ಟಿದ್ದ. ಆದರೆ, ತನ್ನನ್ನು ಬಿಟ್ಟು ಮತ್ತೊಬ್ಬನ ಜತೆ ರೇಖಾ ಸಹವಾಸ ಬೆಳೆಸಿದ್ದಳು ಎಂಬ ಶಂಕೆಯಲ್ಲಿ ಲೋಹಿತಾಶ್ವ ಆಕೆಯನ್ನು ಕೊಂದಿದ್ದಾನೆ ಎಂದು ತಿಳಿದುಬಂದಿದೆ.