ಬೆಂಗಳೂರು, ನ.18: ದೇಶದ ಪ್ರಮುಖ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆ ಮೇಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (ಎಂಇಐಎಲ್) ಗ್ರೂಪ್ (MEIL) ಸುಮಾರು 700 ಮಿಲಿಯನ್ ಡಾಲರ್ ಮೊತ್ತದ ಬೃಹತ್ ಹೂಡಿಕೆಯನ್ನು ಆಕರ್ಷಿಸಿದೆ. ರಚನಾತ್ಮಕ ಈಕ್ವಿಟಿ ಹೂಡಿಕೆ ಮತ್ತು ಆಸ್ತಿಗಳ ಪ್ರಸ್ತಾವಿತ ಹಣಗಳಿಕೆ ಒಳಗೊಂಡ ನವೀನ ಹಣಕಾಸು ವ್ಯವಸ್ಥೆಯ ಮೂಲಕ ಈ ಹೂಡಿಕೆ ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಶ್ವದ ಪ್ರಮುಖ ಮೂರು ಜಾಗತಿಕ ಹೂಡಿಕೆ ಸಂಸ್ಥೆಗಳಾದ ಡಿಕೆ, ಎಚ್ಎಚ್ ಮತ್ತು ವರದೆ ಪಾರ್ಟ್ನರ್ಸ್ ಈ ವಹಿವಾಟಿನಲ್ಲಿ ಭಾಗವಹಿಸಿವೆ. ಇದು ಎಂಇಐಎಲ್ ಸಮೂಹದ ದೂರದೃಷ್ಟಿ, ವೈವಿಧ್ಯಮಯ ಉದ್ಯಮ ಕ್ಷೇತ್ರಗಳು ಹಾಗೂ ದೀರ್ಘಕಾಲೀನ ಬೆಳವಣಿಗೆಯ ಸಾಧ್ಯತೆಗಳ ಮೇಲೆ ಜಾಗತಿಕ ಹೂಡಿಕೆದಾರರ ವಿಶ್ವಾಸವನ್ನು ಪ್ರತಿಬಿಂಬಿಸಿದೆ.
ಭಾರತದ ಮುಂದಿನ ದಶಕದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಪಾಲ್ಗೊಳ್ಳಲು ಎಂಇಐಎಲ್ ಸಮೂಹ ಅತ್ಯುತ್ತಮ ವೇದಿಕೆಯಾಗಿದೆ ಎಂದು ಹೂಡಿಕೆದಾರರು ಗುರುತಿಸಿದ್ದಾರೆ ಎನ್ನಲಾಗಿದೆ. ವಿವಿಧ ಪ್ರಮುಖ ಕ್ಷೇತ್ರಗಳಲ್ಲಿ ಸಂಸ್ಥೆಯ ವ್ಯಾಪಕ ಉಪಸ್ಥಿತಿ, ಮಹತ್ವಾಕಾಂಕ್ಷೆಯ ಯೋಜನೆಗಳು ಹಾಗೂ ಅತ್ಯುತ್ತಮ ಯೋಜನಾ ಅನುಷ್ಠಾನ ಸಾಮರ್ಥ್ಯಗಳು ಹೂಡಿಕೆದಾರರ ವಿಶ್ವಾಸ ಗಳಿಸಿವೆ.
ಜಾಗತಿಕ ಹೂಡಿಕೆದಾರರು ನಿಗದಿಪಡಿಸಿರುವ ಮೌಲ್ಯಮಾಪನದಲ್ಲಿಯೂ ಈ ವಿಶ್ವಾಸ ವ್ಯಕ್ತವಾಗಿದೆ. ಎಂಇಐಎಲ್ ಸಮೂಹ ಮೌಲ್ಯವನ್ನು ಸುಮಾರು 1 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಸಮೂಹದ ಇಂಧನ ಪರಿವರ್ತನೆ ವಿಭಾಗವಾದ ಇಪಿಟಿಎಲ್ ಸಂಸ್ಥೆಗೆ ಪ್ರಸ್ತುತ ಸುಮಾರು 14,000 ಕೋಟಿ ರೂ. ಮೌಲ್ಯ ನಿಗದಿಪಡಿಸಲಾಗಿದೆ. ಈ ಮೌಲ್ಯಮಾಪನಗಳು ಸಂಸ್ಥೆಗಳ ಕಾರ್ಯಾಚರಣೆಯ ವ್ಯಾಪ್ತಿ ಹಾಗೂ ಭವಿಷ್ಯದ ಬೆಳವಣಿಗೆಯ ಅಗಾಧ ಸಾಮರ್ಥ್ಯವನ್ನು ಎತ್ತಿ ತೋರಿಸಿವೆ.
"ಭಾರತದ ದೀರ್ಘಕಾಲೀನ ಮೂಲಸೌಕರ್ಯ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಯಲ್ಲಿ ಪಾಲ್ಗೊಳ್ಳಲು ಎಂಇಐಎಲ್ ಸಮೂಹ ಒಂದು ಉತ್ತಮ ಅವಕಾಶವಾಗಿದೆ ಎಂದು ಜಾಗತಿಕ ಹೂಡಿಕೆದಾರರು ಪರಿಗಣಿಸಿದ್ದಾರೆ. ಗ್ರೂಪ್ನ ದೂರದೃಷ್ಟಿ, ವೈವಿಧ್ಯಮಯ ಉದ್ಯಮ ಕ್ಷೇತ್ರಗಳು ಹಾಗೂ ಸಾಬೀತಾಗಿರುವ ಯೋಜನಾ ಅನುಷ್ಠಾನ ಸಾಮರ್ಥ್ಯಗಳ ಮೇಲಿನ ವಿಶ್ವಾಸವೇ ಈ ಹೂಡಿಕೆಗೆ ಪ್ರಮುಖ ಕಾರಣವಾಗಿದೆ. ಇದು ಸಂಸ್ಥೆಯ ಬೆಳವಣಿಗೆಯ ಪಯಣ ಮತ್ತು ಭವಿಷ್ಯದ ಮಹತ್ವಾಕಾಂಕ್ಷೆಗಳಿಗೆ ದೊರೆತಿರುವ ಬಲವಾದ ಮನ್ನಣೆಯಾಗಿದೆ" ಎಂದು ಬೆಳವಣಿಗೆಯ ಬಗ್ಗೆ ತಿಳಿದಿರುವ ಮೂಲವೊಂದು ತಿಳಿಸಿದೆ.
ಈ ವಹಿವಾಟು ಎಂಇಐಎಲ್ ಸಮೂಹ ಬೆಳವಣಿಗೆಯ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತದ ಅಭಿವೃದ್ಧಿಯ ಪಯಣದ ಮೇಲೆ ಅಂತಾರಾಷ್ಟ್ರೀಯ ಹೂಡಿಕೆದಾರರು ಹೊಂದಿರುವ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿದೆ.
ಕಳೆದ ಮೂರು ದಶಕಗಳಲ್ಲಿ ಎಂಇಐಎಲ್ ಸಮೂಹ ಸಂಸ್ಥೆಯು ಭಾರತದ ಪ್ರಮುಖ ಮೂಲಸೌಕರ್ಯ ಮತ್ತು ಎಂಜಿನಿಯರಿಂಗ್ ಉದ್ಯಮ ಸಮೂಹಗಳಲ್ಲಿ ಒಂದಾಗಿ ಬೆಳೆದಿದೆ. 20ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಸಂಸ್ಥೆಯು ನೀರಾವರಿ, ಸಾರಿಗೆ, ಇಂಧನ, ತೈಲ ಮತ್ತು ಅನಿಲ, ಉತ್ಪಾದನೆ, ಸ್ವಚ್ಛ ಸಾರಿಗೆ ಹಾಗೂ ಅತ್ಯಾಧುನಿಕ ಮೂಲಸೌಕರ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ.
ಜೋಜಿಲಾ ಸುರಂಗ, ಮುಂಬೈ ಕರಾವಳಿ ರಸ್ತೆ, ಥಾಣೆ–ಬೊರಿವಲಿ ಅವಳಿ ಸುರಂಗ, ಪೋಲವರಂ ಯೋಜನೆ, ಕಾಳೇಶ್ವರಂ ಏತ ನೀರಾವರಿ ಯೋಜನೆ ಹಾಗೂ ಪಾಲಮೂರು–ರಂಗಾರೆಡ್ಡಿ ಏತ ನೀರಾವರಿ ಯೋಜನೆಗಳು ಎಂಇಐಎಲ್ ಸಮೂಹ ಕೈಗೆತ್ತಿಕೊಂಡಿರುವ ಪ್ರಮುಖ ರಾಷ್ಟ್ರೀಯ ಮೂಲಸೌಕರ್ಯ ಯೋಜನೆಗಳಾಗಿವೆ. ಸಂಸ್ಥೆಯ ರಸ್ತೆ ಅಭಿವೃದ್ಧಿ ಯೋಜನೆಗಳು ಸುಮಾರು 1,975 ಕಿಲೋ ಮೀಟರ್ ವ್ಯಾಪ್ತಿಯನ್ನು ಹೊಂದಿವೆ.
ಇಂಧನ ಕ್ಷೇತ್ರದಲ್ಲಿ ಹೈಡ್ರೋಕಾರ್ಬನ್, ವಿದ್ಯುತ್ ಉತ್ಪಾದನೆ, ನವೀಕರಿಸಬಹುದಾದ ಇಂಧನ ಮತ್ತು ಇಂಧನ ಸಂಗ್ರಹಣೆಯಂತಹ ಕ್ಷೇತ್ರಗಳಲ್ಲಿ ಎಂಇಐಎಲ್ ಸಮೂಹ ತನ್ನ ಸಾಮರ್ಥ್ಯವನ್ನು ವಿಸ್ತರಿಸಿದೆ. ಒಟ್ಟು 9,110 ಮೆಗಾವ್ಯಾಟ್ಗಿಂತಲೂ ಅಧಿಕ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಸುಮಾರು 3,000 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಯೋಜನೆಗಳನ್ನೂ ಅನುಷ್ಠಾನಗೊಳಿಸುತ್ತಿದೆ.
ಇದರ ಜತೆಗೆ, ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ತಲಾ 700 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಅಣು ವಿದ್ಯುತ್ ರಿಯಾಕ್ಟರ್ಗಳ ನಿರ್ಮಾಣದ ಮೂಲಕ ಭಾರತದ ಅಣುಶಕ್ತಿ ಕಾರ್ಯಕ್ರಮದಲ್ಲಿಯೂ ಎಂಇಐಎಲ್ ಸಮೂಹ ಪ್ರವೇಶಿಸಿದೆ. ಇದರಿಂದ ಕಾರ್ಯತಂತ್ರದ ಮಹತ್ವ ಹೊಂದಿರುವ ಮೂಲಸೌಕರ್ಯ ಕ್ಷೇತ್ರದಲ್ಲಿ ಸಂಸ್ಥೆಯ ಸ್ಥಾನ ಮತ್ತಷ್ಟು ಬಲಗೊಂಡಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಂಗೋಲಿಯಾದ ಮೊದಲ ಗ್ರೀನ್ಫೀಲ್ಡ್ ತೈಲ ಸಂಸ್ಕರಣಾಗಾರ ಯೋಜನೆಯ ಪ್ರಮುಖ ಕಾಮಗಾರಿಗಳಲ್ಲಿ ಎಂಇಐಎಲ್ ಪಾಲ್ಗೊಂಡಿದೆ. ದೇಶೀಯವಾಗಿಯೂ ಪ್ರಮುಖ ಇಂಧನ ಮೂಲಸೌಕರ್ಯ ಮತ್ತು ತೈಲ ಸಂಸ್ಕರಣಾಗಾರ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.
ಸಾಂಪ್ರದಾಯಿಕ ಮೂಲಸೌಕರ್ಯ ಕ್ಷೇತ್ರಗಳಾಚೆಗೆ ಹೊಸ ಮತ್ತು ಉದಯೋನ್ಮುಖ ಉದ್ಯಮಗಳಲ್ಲಿಯೂ ಗ್ರೂಪ್ ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತಿದೆ. ಒಲೆಕ್ಟ್ರಾ ಮತ್ತು ಈವೇ ಟ್ರಾನ್ಸ್ ಸಂಸ್ಥೆಗಳು ವಿದ್ಯುತ್ ಚಾಲಿತ ವಾಹನಗಳ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿದ್ದರೆ, ಡ್ರಿಲ್ಮೆಕ್ ಮತ್ತು ಐ--ಕಾಮ್ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಡ್ರಿಲ್ಲಿಂಗ್ ತಂತ್ರಜ್ಞಾನ, ಉತ್ಪಾದನೆ, ದೂರಸಂಪರ್ಕ ಹಾಗೂ ಕಾರ್ಯತಂತ್ರದ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಾಮರ್ಥ್ಯವನ್ನು ಬಲಪಡಿಸುತ್ತಿವೆ.
ಇದೇ ವೇಳೆ, ಮೆಘಾ ಗ್ಯಾಸ್ ಸಂಸ್ಥೆಯು ವಿವಿಧ ರಾಜ್ಯಗಳಲ್ಲಿ ನಗರ ಅನಿಲ ವಿತರಣಾ ಜಾಲವನ್ನು ವಿಸ್ತರಿಸುತ್ತಿದೆ. ಆರೋಗ್ಯ ಸೇವೆ, ಕೌಶಲ್ಯ ಅಭಿವೃದ್ಧಿ ಮತ್ತು ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿನ ಗ್ರೂಪ್ನ ಉಪಕ್ರಮಗಳು ರಾಷ್ಟ್ರ ನಿರ್ಮಾಣದ ಬದ್ಧತೆಯನ್ನು ಪ್ರತಿಬಿಂಬಿಸುತ್ತಿವೆ.
ಒಟ್ಟಾರೆ, 700 ಮಿಲಿಯನ್ ಡಾಲರ್ ಮೊತ್ತದ ಈ ಹೂಡಿಕೆಯು ಎಂಇಐಎಲ್ ಗ್ರೂಪ್ನ ಬೆಳವಣಿಗೆಯ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಸಂಸ್ಥೆಯ ದೂರದೃಷ್ಟಿ, ಕಾರ್ಯ ನಿರ್ವಹಣಾ ಸಾಮರ್ಥ್ಯ ಮತ್ತು ಭವಿಷ್ಯದ ಬೆಳವಣಿಗೆಯ ಅವಕಾಶಗಳ ಮೇಲೆ ಜಾಗತಿಕ ಹೂಡಿಕೆದಾರರು ಹೊಂದಿರುವ ವಿಶ್ವಾಸಕ್ಕೆ ಇದು ಸಾಕ್ಷಿಯಾಗಿದೆ. ಭಾರತದ ಮೂಲಸೌಕರ್ಯ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಎಂಇಐಎಲ್ ಗ್ರೂಪ್ನ ಮಹತ್ವಾಕಾಂಕ್ಷೆಗೆ ಈ ಹೂಡಿಕೆ ಮತ್ತಷ್ಟು ಬಲ ನೀಡಿದೆ.