ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು (PM Narendra Modi) ಇಂದು ಕರ್ನಾಟಕದ ಬೆಂಗಳೂರಿನಲ್ಲಿ ₹15,600 ಕೋಟಿಗೂ ಹೆಚ್ಚು ಮೌಲ್ಯದ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ, ಶಂಕುಸ್ಥಾಪನೆ ಮತ್ತು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸಂಪರ್ಕ ಮತ್ತು ಇಂಧನ ಭದ್ರತೆ ಒಳಗೊಂಡ ಯೋಜನೆಗಳ ಮೂಲಕ ಬೆಂಗಳೂರು ಮತ್ತು ಕರ್ನಾಟಕದ ಅಭಿವೃದ್ಧಿ ಪಯಣಕ್ಕೆ ಹೊಸ ವೇಗವನ್ನು ನೀಡುವ ದಿನ ಇದಾಗಿದೆ ಎಂದು ಅವರು ಹೇಳಿದರು.
ಬೆಂಗಳೂರಿನ ಐಐಎಂಬಿ ಆಡಿಟೋರಿಯಂನಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. "ಮೆಟ್ರೋ ಮತ್ತು ರೈಲಿಗೆ ಸಂಬಂಧಿಸಿದ ಯೋಜನೆಗಳಿಂದ ಹಿಡಿದು ಇಂಧನ ಭದ್ರತೆಯ ಕಾಮಗಾರಿಗಳವರೆಗೆ, ಈ ಎಲ್ಲಾ ಯೋಜನೆಗಳು ಕರ್ನಾಟಕದ ಮೂಲಸೌಕರ್ಯಕ್ಕೆ ಹೊಸ ಶಕ್ತಿಯನ್ನು ನೀಡಲಿವೆ. ಮೂಲಸೌಕರ್ಯ ಮತ್ತು ಸುಧಾರಿತ ಸಂಪರ್ಕವು ಸಮಾಜದ ಪ್ರತಿಯೊಂದು ವರ್ಗವನ್ನು ತಲುಪುವ ಪ್ರಗತಿ, ಉದ್ಯೋಗ ಮತ್ತು ಉದ್ಯಮಕ್ಕೆ ಹೊಸ ಹಾದಿಗಳನ್ನು ಸೃಷ್ಟಿಸುತ್ತದೆ ಹಾಗೂ ಬಡತನದ ವಿರುದ್ಧದ ಹೋರಾಟವನ್ನು ಬಲಪಡಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸುಮಾರು 50 ಕೋಟಿ ನಾಗರಿಕರು ತೀವ್ರ ಬಡತನದಿಂದ ಹೊರಬಂದಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ವಿಕಸಿತ ಕರ್ನಾಟಕದ ಮೂಲಕ ವಿಕಸಿತ ಭಾರತ
ಹೊಸದಾಗಿ ಚಾಲನೆ ನೀಡಲಾದ ಯೋಜನೆಗಳು, ವಿಕಸಿತ ಕರ್ನಾಟಕದ ಮೂಲಕ ವಿಕಸಿತ ಭಾರತ ನಿರ್ಮಾಣಕ್ಕೆ ಹೊಸ ವೇಗವನ್ನು ನೀಡಲಿವೆ, ಮತ್ತು ಅದೇ ಸಮಯದಲ್ಲಿ ಟೆಕ್ ಸಿಟಿಯಾಗಿ ಬೆಂಗಳೂರಿನ ಗುರುತನ್ನು ಮತ್ತಷ್ಟು ಬಲಪಡಿಸಲಿವೆ ಎಂದು ತಿಳಿಸಿದರು.
ಬೆಂಗಳೂರು ಮೆಟ್ರೋದ ಹೊಸ ಪಿಂಕ್ ಲೈನ್ ಲೋಕಾರ್ಪಣೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಈ ಮಾರ್ಗವು ಐಐಎಂ ಬೆಂಗಳೂರು, ಹಲವಾರು ಶಿಕ್ಷಣ ಸಂಸ್ಥೆಗಳು ಮತ್ತು ನಗರದಾದ್ಯಂತ ಇರುವ ಪ್ರಮುಖ ವ್ಯಾಪಾರ, ತಂತ್ರಜ್ಞಾನ ಹಾಗೂ ವಾಣಿಜ್ಯ ಕೇಂದ್ರಗಳಿಗೆ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸಲಿದೆ ಎಂದು ಉಲ್ಲೇಖಿಸಿದರು. "ಬೆಂಗಳೂರಿನ ಲಕ್ಷಾಂತರ ಜನರಿಗೆ ಪ್ರಯಾಣದಲ್ಲಿ ಅನುಕೂಲವಾಗುವುದು ಮಾತ್ರವಲ್ಲದೆ, ಅವರ ಹಣ ಮತ್ತು ಸಮಯವೂ ಉಳಿತಾಯವಾಗಲಿದೆ," ಎಂದು ಮೋದಿ ಅಭಿಪ್ರಾಯಪಟ್ಟರು.
ಈ ಪ್ರದೇಶದೊಂದಿಗೆ ಆಳವಾದ ಬಾಂಧವ್ಯ ಹೊಂದಿದ್ದ ದಿವಂಗತ ಅನಂತ್ ಕುಮಾರ್ ಅವರ ಪುಣ್ಯತಿಥಿಯು ನಿನ್ನೆಯಾಗಿತ್ತು ಎಂಬುದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಅಗಲಿದ ನಾಯಕನಿಗೆ ಹೃತ್ಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು. "ಇಂದು ಈ ಮೆಟ್ರೋ ಮಾರ್ಗವನ್ನು ನೋಡಿ ಅವರ ಆತ್ಮಕ್ಕೂ ಸಂತೋಷವಾಗಿರಬೇಕು," ಎಂದು ತಿಳಿಸಿದರು.

ಆವಿಷ್ಕಾರ, ಆರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ ಬೆಂಗಳೂರು
ಬೆಂಗಳೂರನ್ನು ದೇಶದ ಐಟಿ ರಫ್ತಿನ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನ ಕೊಡುಗೆ ನೀಡುವ ಹಾಗೂ ಆವಿಷ್ಕಾರ ಮತ್ತು ಆರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ ಆಗಿ ಕಾರ್ಯನಿರ್ವಹಿಸುವ 'ಭಾರತದ ಸಿಲಿಕಾನ್ ವ್ಯಾಲಿ' ಎಂದು ಬಣ್ಣಿಸಿದ ಪ್ರಧಾನಿ, ಕೇಂದ್ರ ಸರ್ಕಾರವು ಬೆಂಗಳೂರು ಪ್ರದೇಶದ ಕ್ಷಿಪ್ರ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದರು. 2014 ರಲ್ಲಿ ಕೇವಲ 17 ಕಿಲೋಮೀಟರ್ಗಳಷ್ಟಿದ್ದ ನಮ್ಮ ಮೆಟ್ರೋವನ್ನು ಇಂದು 100 ಕಿಲೋಮೀಟರ್ಗಳಿಗಿಂತ ಹೆಚ್ಚಿನ ದೂರಕ್ಕೆ ವಿಸ್ತರಿಸಲಾಗಿದ್ದು, ದೆಹಲಿ-ಎನ್ಸಿಆರ್ ಮತ್ತು ಮುಂಬೈ ಮಹಾನಗರ ಪ್ರದೇಶದ ನಂತರ 100 ಕಿಲೋಮೀಟರ್ ಮೆಟ್ರೋ ಮೈಲಿಗಲ್ಲನ್ನು ದಾಟಿದ ಭಾರತದ ಮೂರನೇ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ. "ನಮ್ಮ ಮೆಟ್ರೋದ ಈ ಯಶಸ್ಸು ಸುಗಮ ಜೀವನ (Ease of Living) ಮತ್ತು ಸುಗಮ ಪ್ರಯಾಣದ (Ease of Travel) ಕುರಿತು ದೇಶದ ಹೊಸ ಆಲೋಚನೆಯ ಫಲಿತಾಂಶವಾಗಿದೆ, ಹಾಗೂ ಮಧ್ಯಮ ವರ್ಗದ ಕುಟುಂಬಗಳ ಜೀವನವನ್ನು ಉತ್ತಮಗೊಳಿಸುವ ದೇಶದ ಬದ್ಧತೆಯ ಫಲವಾಗಿದೆ," ಎಂದು ಮೋದಿ ಪ್ರತಿಪಾದಿಸಿದರು.
ಭಾರತೀಯ ರೈಲ್ವೆಯು ವಸಾಹತುಶಾಹಿ ಯುಗದ ಮನಸ್ಥಿತಿಯನ್ನು ತೊರೆದು ಹೊಸ ಪರಂಪರೆಯನ್ನು ನಿರ್ಮಿಸುತ್ತಿದೆ ಎಂದ ಪ್ರಧಾನಮಂತ್ರಿಯವರು, ವಂದೇ ಭಾರತ್ ರೈಲುಗಳು ಮತ್ತು ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ರೋಡ್ ಜೊತೆಗೆ ಕರ್ನಾಟಕದ 60 ಕ್ಕೂ ಹೆಚ್ಚು ನಿಲ್ದಾಣಗಳನ್ನು ಒಳಗೊಂಡ ಅಮೃತ ಭಾರತ್ ನಿಲ್ದಾಣಗಳ ಮೂಲಕ ನಿಲ್ದಾಣಗಳು, ಎಂಜಿನ್ಗಳು ಮತ್ತು ಬೋಗಿಗಳು ಭಾರತದ ವಿಶಿಷ್ಟ ಗುರುತನ್ನು ಹೊಂದಿವೆ ಎಂದರು. ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುವ ಮೂಲಕ ಈ ನಿಲ್ದಾಣಗಳು ಆಧುನಿಕತೆಯನ್ನು ಸಂವೇದನಾಶೀಲತೆಯೊಂದಿಗೆ ಹೇಗೆ ಬೆಸೆಯುತ್ತಿವೆ ಎಂಬುದನ್ನು ಅವರು ಒತ್ತಿ ಹೇಳಿದರು. "ಈ ಹಿಂದೆ ವಿಮಾನ ನಿಲ್ದಾಣಗಳಲ್ಲಿ ಕಂಡುಬರುತ್ತಿದ್ದ ಸೌಲಭ್ಯಗಳನ್ನು ಈಗ ರೈಲು ನಿಲ್ದಾಣಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಒದಗಿಸಲು ಪ್ರಯತ್ನಿಸಲಾಗುತ್ತಿದೆ," ಎಂದು ಪ್ರಧಾನ ಮಂತ್ರಿ ಮೋದಿ ಉಲ್ಲೇಖಿಸಿದರು.
ಕರ್ನಾಟಕದ ಅನುದಾನದಲ್ಲಿ ಒಂಬತ್ತು ಪಟ್ಟು ಹೆಚ್ಚಳ
ಕಳೆದ 10 ರಿಂದ 12 ವರ್ಷಗಳಲ್ಲಿ ಭಾರತದ ರೈಲ್ವೆ ಬಜೆಟ್ ಹಲವು ಪಟ್ಟು ಹೆಚ್ಚಾಗಿದ್ದು, ಕರ್ನಾಟಕದ ಅನುದಾನದಲ್ಲಿ ಒಂಬತ್ತು ಪಟ್ಟು ಹೆಚ್ಚಳವಾಗಿದೆ ಎಂದು ತಿಳಿಸಿದ ಪ್ರಧಾನಮಂತ್ರಿಯವರು, ರಾಜ್ಯವು ತನ್ನ ಮೊದಲ ವಂದೇ ಭಾರತ್ ಸ್ಲೀಪರ್ ರೈಲನ್ನು ಪಡೆದ ಕೆಲವೇ ದಿನಗಳಲ್ಲಿ ಇಂದು ನಾಲ್ಕು ಅಮೃತ ನಿಲ್ದಾಣಗಳು, ಎರಡು ದ್ವಿಗುಣಗೊಳಿಸುವಿಕೆ ಮತ್ತು ವಿದ್ಯುದ್ದೀಕರಣ ಯೋಜನೆಗಳು ಹಾಗೂ ಕರ್ನಾಟಕವನ್ನು ಗೋವಾದೊಂದಿಗೆ ಬೆಸೆಯುವ ಹೊಸ ವಂದೇ ಭಾರತ್ ರೈಲನ್ನು ಪಡೆದುಕೊಂಡಿದೆ ಎಂದು ಉಲ್ಲೇಖಿಸಿದರು. "ಈ ರೈಲಿನ ಮೂಲಕ, ಮಂಗಳೂರು ಸೇರಿದಂತೆ ಕರ್ನಾಟಕದ ಇಡೀ ಕರಾವಳಿ ಮಾರ್ಗದ ಸಹಪ್ರಯಾಣಿಕರಿಗೆ ಸೆಮಿ-ಹೈ-ಸ್ಪೀಡ್ ರೈಲಿನ ಹೊಸ ಅನುಭವ ಸಿಗಲಿದೆ," ಎಂದು ಮೋದಿ ಅಭಿಪ್ರಾಯಪಟ್ಟರು.
ಇರಾನ್ ಮತ್ತು ಗಲ್ಫ್ ಪ್ರದೇಶದ ಸುತ್ತಲೂ ನಡೆಯುತ್ತಿರುವ ಯುದ್ಧವು ಇಂಧನ ಭದ್ರತೆಯ ಪ್ರಮುಖ ಮಹತ್ವವನ್ನು ತೋರಿಸಿಕೊಟ್ಟಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಕಳೆದ ದಶಕದಲ್ಲಿ ತೆಗೆದುಕೊಂಡ ಕ್ರಮಗಳಿಂದಾಗಿ ಭಾರತವು ಈ ಸವಾಲಿನ ಅವಧಿಯನ್ನು ದೃಢವಾಗಿ ಎದುರಿಸಿತು ಎಂದು ವಿವರಿಸಿದರು. ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಉತ್ಪಾದನೆ, ಕಚ್ಚಾ ತೈಲ ಸಂಗ್ರಹಣೆ, ಸೌರ, ಜಲ ಮತ್ತು ಪವನ ಶಕ್ತಿ, ಬಹುತೇಕ ಸಂಪೂರ್ಣ ರೈಲು ವಿದ್ಯುದ್ದೀಕರಣ ಮತ್ತು ಮೆಟ್ರೋ ಜಾಲಗಳನ್ನು ವಿಸ್ತರಿಸಲಾಗಿದ್ದು, ಕರ್ನಾಟಕದ ಮೂರು ಹೊಸ ಯೋಜನೆಗಳನ್ನು ಅವರು ವಿವರಿಸಿದರು: 80,000 ಮೆಟ್ರಿಕ್ ಟನ್ ಶೇಖರಣಾ ಸಾಮರ್ಥ್ಯವನ್ನು ಸೇರಿಸುವ ಮಂಗಳೂರು ಎಲ್ಪಿಜಿ ಯೋಜನೆ, ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನ ಪೂರೈಕೆಯನ್ನು ಸುಗಮಗೊಳಿಸುವ ದೇವನಗೊಂದಿ ಮಾರ್ಕೆಟಿಂಗ್ ಟರ್ಮಿನಲ್, ಮತ್ತು ಪ್ರತಿದಿನ 13 ಟನ್ ಜೈವಿಕ ಅನಿಲವನ್ನು ಉತ್ಪಾದಿಸುವ ಬೆಂಗಳೂರು ಸಿಬಿಜಿ (CBG) ಸ್ಥಾವರ. "ಇದು ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸುತ್ತದೆ ಮತ್ತು ನೈಸರ್ಗಿಕ ಅನಿಲ ಆಮದಿನ ಮೇಲೆ ಖರ್ಚು ಮಾಡುವ ಹಣವೂ ಉಳಿತಾಯವಾಗಲಿದೆ," ಎಂದು ಉಲ್ಲೇಖಿಸಿದರು.
300 ಗಿಗಾವ್ಯಾಟ್ ಮೀರಿದ ಇಂಧನ ಸಾಮರ್ಥ್ಯ
ಇಂದು ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 300 ಗಿಗಾವ್ಯಾಟ್ಗಳನ್ನು ಮೀರಿದೆ. ಕೇಂದ್ರದ ಯೋಜನೆಗಳು ಭಾರತೀಯ ನಾಗರಿಕರನ್ನು ವಿದ್ಯುತ್ ಗ್ರಾಹಕರಿಂದ ವಿದ್ಯುತ್ ಉತ್ಪಾದಕರನ್ನಾಗಿ ಪರಿವರ್ತಿಸುತ್ತಿವೆ ಎಂದು ತಿಳಿಸಿದ ಪ್ರಧಾನಮಂತ್ರಿಯವರು, ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಸುಮಾರು 80,000 ರೂಪಾಯಿಗಳ ಕೇಂದ್ರದ ನೆರವಿನೊಂದಿಗೆ ಕರ್ನಾಟಕದ 40,000 ಕ್ಕೂ ಹೆಚ್ಚು ಕುಟುಂಬಗಳು ಸೇರಿದಂತೆ ದೇಶಾದ್ಯಂತ 60 ಲಕ್ಷಕ್ಕೂ ಹೆಚ್ಚು ಮನೆಗಳು ಮೇಲ್ಛಾವಣಿ ಸೌರ ಸ್ಥಾವರಗಳನ್ನು ಅಳವಡಿಸಿಕೊಂಡಿವೆ ಎಂದು ಉಲ್ಲೇಖಿಸಿದರು. ಅಲ್ಲದೆ, ವಿದ್ಯುತ್ ವೆಚ್ಚವನ್ನು ಕಡಿತಗೊಳಿಸಲು ಹಾಗೂ ಹೊಸ ಆದಾಯ ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ಪಿಎಂ ಕುಸುಮ್ ಯೋಜನೆಯಡಿ ಕರ್ನಾಟಕದ ರೈತರಿಗೆ 8 ಲಕ್ಷಕ್ಕೂ ಹೆಚ್ಚು ಸೌರ ಪಂಪ್ಗಳ ಮೂಲಕ ನೀರಾವರಿ ವ್ಯವಸ್ಥೆ ಮಾಡಲಾಗುತ್ತಿದೆ. "ಅಂದರೆ, ಕರ್ನಾಟಕದ ಅನ್ನದಾತರು ಈಗ ಊರ್ಜಾದಾತರಾಗಿಯೂ ಬದಲಾಗುತ್ತಿದ್ದಾರೆ," ಎಂದು ತಿಳಿಸಿದರು.
PM Narendra Modi in Mysuru: ವಿಜ್ಞಾನ ಕ್ಷೇತ್ರದಲ್ಲಿ ಭಾರತ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ: ಪ್ರಧಾನಿ ಮೋದಿ
ಕರ್ನಾಟಕದಲ್ಲಿ ಇಂದಿನ ಯೋಜನೆಗಳು ರಾಷ್ಟ್ರದ ಅಭಿವೃದ್ಧಿಯ ಪಥವನ್ನು ಮತ್ತಷ್ಟು ವೇಗಗೊಳಿಸಲಿವೆ ಎಂದು ಹೇಳುವ ಮೂಲಕ ಮತ್ತು ಜನತೆಗೆ ತಮ್ಮ ಶುಭಾಶಯಗಳನ್ನು ಕೋರುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿಯವರು, ಮಧ್ಯಮ ವರ್ಗದ ಕುಟುಂಬಗಳನ್ನು ಸಶಕ್ತಗೊಳಿಸುವ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದರು. "ಮಧ್ಯಮ ವರ್ಗದವರ ಉಳಿತಾಯ ಹೆಚ್ಚಾಗಬೇಕು, ಅವರ ಕೊಳ್ಳುವ ಶಕ್ತಿ ಬಲಗೊಳ್ಳಬೇಕು ಮತ್ತು ತಮ್ಮ ಕುಟುಂಬದ ಕನಸುಗಳನ್ನು ನನಸಾಗಿಸುವ ಜೊತೆಗೆ ದೇಶದ ಆರ್ಥಿಕ ಪ್ರಗತಿಯಲ್ಲೂ ಅವರು ಪಾಲುದಾರರಾಗಬೇಕು ಎಂಬುದೇ ನಮ್ಮ ಪ್ರಯತ್ನವಾಗಿದೆ," ಎಂದು ಪ್ರಧಾನಿಗಳು ಹೇಳಿದರು.