ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕ್ಲಸ್ಟರ್ ಕಿಚನ್‌ಗೆ ವಿರೋಧ, ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಆರಂಭ

Mid-day meal workers protest: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು 9 ದಿನಗಳಿಂದಲೂ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಬಿಸಿಯೂಟ ಕಾರ್ಯಕರ್ತರು ಕೂಡ ಅನಿರ್ಧಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ. ಕ್ಲಸ್ಟರ್‌ ಕಿಚನ್‌ ವ್ಯವಸ್ಥೆ ನಿರ್ಧಾರ ಕೈಬಿಡಬೇಕು, ಗೌರವಧನ ಹೆಚ್ಚಳ ಮಾಡುವುದು ಬಿಸಿಯೂಟ ನೌಕರರ ಪ್ರಮುಖ ಬೇಡಿಕೆಗಳಾಗಿವೆ.

ಬೆಂಗಳೂರು: ಆಶಾ ಕಾರ್ಯಕರ್ತೆಯರ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಮತ್ತೊಂದು ಹೋರಾಟದ ಬಿಸಿ ತಟ್ಟಿದೆ. ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬಿಸಿಯೂಟ ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬುಧವಾರ ಅನಿರ್ದಿಷ್ಟಾವಧಿ ಮುಷ್ಕರ (Mid-day meal workers protest) ಆರಂಭಿಸಿದ್ದಾರೆ. ರಾಜಧಾನಿಯಲ್ಲಿ ಮಾತ್ರವಲ್ಲದೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬಿಸಿಯೂಟ ತಯಾರಿಕೆ ಸ್ಥಗಿತಗೊಳಿಸಿ ನೌಕರರು ಪ್ರತಿಭಟನೆ ನಡೆಸಿದ್ದಾರೆ.

ಕ್ಲಸ್ಟರ್ ಮಟ್ಟದಲ್ಲಿ ಕೇಂದ್ರೀಕೃತ ಅಡುಗೆ ಕೇಂದ್ರಗಳನ್ನು ಆರಂಭಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿರುವ ಬಿಸಿಯೂಟ ನೌಕರರು, ತಮ್ಮ ಉದ್ಯೋಗದ ಭದ್ರತೆ ಹಾಗೂ ಜೀವನೋಪಾಯದ ರಕ್ಷಣೆಗಾಗಿ ಹೋರಾಟ ನಡೆಸುತ್ತಿದ್ದಾರೆ.

ರಾಜ್ಯದಲ್ಲಿ ಸುಮಾರು 1.20 ಲಕ್ಷ ಬಿಸಿಯೂಟ ಕಾರ್ಯಕರ್ತೆಯರಿದ್ದು, ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಗೆ ಬಂದರೆ ಸುಮಾರು 60 ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯಿದೆ. ಇದು ತಮ್ಮ ಬದುಕು ಮತ್ತು ಉದ್ಯೋಗದ ಉಳಿವಿನ ಪ್ರಶ್ನೆಯಾಗಿದ್ದು, ಸರ್ಕಾರ ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದ್ದಾರೆ.

ಬಿಸಿಯೂಟ ಯೋಜನೆಯ ಮೂಲ ಉದ್ದೇಶವನ್ನು ಮರೆಮಾಚಿ ಕ್ಲಸ್ಟರ್ ಕಿಚನ್ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಅಡುಗೆ ಕೆಲಸವನ್ನು ಖಾಸಗಿ ಸಂಘ-ಸಂಸ್ಥೆಗಳಿಗೆ ವಹಿಸಲು ಸರ್ಕಾರ ಮುಂದಾಗಿದೆ. ಈ ಕ್ರಮದಿಂದ ಬಿಸಿಯೂಟ ನೌಕರರ ಉದ್ಯೋಗ ಮತ್ತು ಜೀವನೋಪಾಯದ ಮೇಲೆ ಪರಿಣಾಮ ಉಂಟಾಗಲಿದೆ ಎಂದು ನೌಕರರು ಆತಂಕ ವ್ಯಕ್ತಪಡಿಸಿದ್ದಾರೆ.

ನೌಕರರ ಪ್ರಮುಖ ಬೇಡಿಕೆಗಳೇನು?

  • ಕ್ಲಸ್ಟರ್ ಕಿಚನ್ ಯೋಜನೆಯ ಪ್ರಸ್ತಾವನೆ ಕೈಬಿಡಬೇಕು.
  • ಕನಿಷ್ಠ 10,500 ರೂ. ಗೌರವಧನ ನೀಡಬೇಕು ಮತ್ತು ಸಮವಸ್ತ್ರ ಒದಗಿಸಬೇಕು
  • ಈಗಾಗಲೇ ಕೆಲಸ ಮಾಡುತ್ತಿರುವ ನೌಕರರ ಉದ್ಯೋಗ ಭದ್ರತೆ ಖಚಿತಪಡಿಸಬೇಕು.
  • ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವವರನ್ನು ಡಿ ಗ್ರೂಪ್ ನೌಕರರಾಗಿ ಪರಿಗಣಿಸಬೇಕು