Midday Meal: ಶಾಲಾ ಮಕ್ಕಳಿಗೆ ಬೇಸಿಗೆಯಲ್ಲೂ ಬಿಸಿಯೂಟ; ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ
ರಾಜ್ಯದಲ್ಲಿ ಬೇಸಿಗೆಯಲ್ಲಿ ಬಿಸಿಯೂಟ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಕೇಂದ್ರದ ಪಾಲಿನ 29.58 ಕೋಟಿ ರೂ. ಹಾಗೂ ರಾಜ್ಯದ ಪಾಲಿನ 17.42 ಕೋಟಿ ಹಾಗೂ ರಾಜ್ಯ ಸರ್ಕಾರದ ಹೆಚ್ಚುವರಿ ಅನುದಾನ 26.92 ಕೋಟಿ ಒಳಗೊಂಡಂತೆ ಒಟ್ಟಾರೆಯಾಗಿ 73.93 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.


ಬೆಂಗಳೂರು: 2024-25ನೇ ಸಾಲಿನ ಏಪ್ರಿಲ್-ಮೇ ಬೇಸಿಗೆ ರಜೆ ಅವಧಿಯಲ್ಲಿ ಬರಪೀಡಿತ 31 ಜಿಲ್ಲೆಗಳ 223 ತಾಲೂಕುಗಳಲ್ಲಿ 1 ರಿಂದ 8ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆ (Midday Meal) ಅನುಷ್ಠಾನಕ್ಕೆ ಸಂಬಂಧಿಸಿದಂತೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾಲಿನ ಅನುದಾನ ಬಿಡುಗಡೆ ಸಂಬಂಧ ರಾಜ್ಯ ಸರ್ಕಾರದ ಮಹತ್ವದ ಆದೇಶ ಹೊರಡಿಸಿದೆ. ಬೇಸಿಗೆಯಲ್ಲಿ ಬಿಸಿಯೂಟ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಕೇಂದ್ರದ ಪಾಲಿನ ಅನುದಾನ 29.58 ಕೋಟಿ ರೂ., ರಾಜ್ಯದ ಪಾಲಿನ ಅನುದಾನ 17.42 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದ ಪಾಲಿನ ಹೆಚ್ಚುವರಿ ಅನುದಾನ (State Top-up Amount-ಅಡುಗೆ ಸಿಬ್ಬಂದಿ ಹೆಚ್ಚುವರಿ ಸಂಭಾವನೆ ಮೊತ್ತ) 26.92 ಕೋಟಿ ರೂ. ಒಳಗೊಂಡಂತೆ ಒಟ್ಟಾರೆಯಾಗಿ 73.93 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.
ಈ ಆದೇಶದಲ್ಲಿ ಬಿಡುಗಡೆ ಮಾಡಲಾಗಿರುವ ಅನುದಾನಕ್ಕೆ ವೆಚ್ಚ ಭರಿಸಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು, ಸಂಬಂಧಿಸಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಮುಖ್ಯ ಲೆಕ್ಕಾಧಿಕಾರಿಗಳಿಗೆ ಅನುಮತಿ ನೀಡಲಾಗಿದೆ. ಈ ಅನುದಾನವನ್ನು 1-8ನೇ ತರಗತಿ ಮಧ್ಯಾಹ್ನ ಉಪಹಾರ ಯೋಜನೆಯನ್ನು ಅನುಷ್ಠಾನ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿಯಂತೆ ನಿಗದಿತ ಉದ್ದೇಶಗಳಿಗೆ ಮಾತ್ರ ವೆಚ್ಚ ಭರಿಸಬೇಕು ಎಂದು ಸೂಚಿಸಲಾಗಿದೆ.
ಅನುದಾನವನ್ನು ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯ (ಮಧ್ಯಾಹ್ನ ಉಪಹಾರ ಯೋಜನೆ) Single Nodal Agency ಖಾತೆಗೆ ಜಮೆ ಮಾಡಿ, ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯ (ಮಧ್ಯಾಹ್ನ ಉಪಹಾರ ಯೋಜನೆ) ಅನುಷ್ಠಾನಕ್ಕಾಗಿ ನಿಯಮಾನುಸಾರ ಬಳಸಿಕೊಳ್ಳಬೇಕು. ಮಧ್ಯಾಹ್ನ ಉಪಹಾರ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆರ್ಥಿಕ ಮತ್ತು ಭೌತಿಕ ಗುರಿಗಳನ್ನು ತಂತ್ರಾಂಶದಲ್ಲಿ ನಿಗದಿಪಡಿಸಬೇಕು. ಹಾಗೂ ಅದರನ್ವಯ ಭರಿಸಲಾಗುವ ವೆಚ್ಚದ ವಿವರಗಳು ಪ್ರತಿ ಮಾಹೆ ಅವಲೋಕನ (New Decision Support System) ತಂತ್ರಾಂಶದಲ್ಲಿ ಇಂದೀಕರಣಗೊಂಡಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | KAS Prelims Result: ಕೆಎಎಸ್ ಪೂರ್ವಭಾವಿ ಮರುಪರೀಕ್ಷೆ ಫಲಿತಾಂಶ ಪ್ರಕಟ; ಮುಖ್ಯ ಪರೀಕ್ಷೆಗೆ ಅರ್ಹರಾದವರ ಪಟ್ಟಿ ಇಲ್ಲಿದೆ
2024-25ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗೆ (ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್) ಕೇಂದ್ರದ ಪಾಲು ಒಟ್ಟು 480 ಕೋಟಿ ರೂ., ರಾಜ್ಯದ ಪಾಲು ಒಟ್ಟು 320 ಕೋಟಿ ಹಾಗೂ ರಾಜ್ಯ ಯೋಜನೆ ಕ್ಷೀರ ಭಾಗ್ಯಕ್ಕೆ ರಾಜ್ಯದ ಪಾಲಿನ ಹೆಚ್ಚುವರಿ ಅನುದಾನ ಒಟ್ಟು 303 ಕೋಟಿ ಸೇರಿ 1103 ಕೋಟಿ ಅನುದಾನ ಮೀಸಲಿಡಲಾಗಿದೆ. ಈ ಪೈಕಿ ಈಗಾಗಲೇ ಕೇಂದ್ರದ ಪಾಲಿನ 254 ಕೋಟಿ ರೂ., ರಾಜ್ಯದ ಪಾಲಿನ 150 ಕೋಟಿ ಹಾಗೂ ರಾಜ್ಯದ ಹೆಚ್ಚುವರಿ ಅನುದಾನ 199.48 ಕೋಟಿ ಸೇರಿ 603.58 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದೀಗ 73.93 ಕೋಟಿ ಬಿಡುಗಡೆಯಾಗಿದ್ದು, ಇನ್ನೂ ಬಾಕಿ 499.41 ಕೋಟಿ ಬಿಡುಗಡೆಯಾಗಬೇಕಿದೆ.