Class 1 age limit: ಪೋಷಕರಿಗೆ ಗುಡ್ ನ್ಯೂಸ್; 1ನೇ ತರಗತಿ ಪ್ರವೇಶಕ್ಕೆ ಮಕ್ಕಳ ಕನಿಷ್ಠ ವಯೋಮಿತಿ ಸಡಿಲಿಕೆ
Class 1 age limit: ‘ಮಗುವಿಗೆ 5 ವರ್ಷ 5 ತಿಂಗಳಾಗಿದ್ದರೂ ಶಾಲೆಗೆ ಸೇರಿಸಲು ಈ ವರ್ಷ ಅವಕಾಶ ಮಾಡಿಕೊಡಲಾಗುತ್ತದೆ. ಎಸ್ಇಪಿ ವರದಿ ಆಧಾರದ ಮೇರೆಗೆ ಕಡ್ಡಾಯ 6 ವರ್ಷ ವಯೋಮಿತಿಯನ್ನು ಸಡಿಲಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.


ಬೆಂಗಳೂರು: ಪೋಷಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಒಂದನೇ ತರಗತಿ ಪ್ರವೇಶಾತಿಗೆ (Class 1 age limit) ನಿಗದಿಪಡಿಸಿದ್ದ ಮಕ್ಕಳ ಕನಿಷ್ಠ ವಯೋಮಿತಿಯನ್ನು ಶಿಕ್ಷಣ ಇಲಾಖೆ ಸಡಿಲಗೊಳಿಸಿದೆ. ಈ ಮೊದಲು 1ನೇ ತರಗತಿ ಸೇರ್ಪಡೆಗೆ ಕನಿಷ್ಠ 6 ವರ್ಷ ವಯಸ್ಸು ಆಗಬೇಕಿತ್ತು. ಆದರೆ, ಇದೀಗ ಅದನ್ನು 5 ವರ್ಷ 5 ತಿಂಗಳಿಗೆ ಇಳಿಕೆ ಮಾಡಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸಚಿವ ಮಧು ಬಂಗಾರಪ್ಪ ಅವರು ಮಾಹಿತಿ ನೀಡಿದ್ದಾರೆ.
‘ಮಗುವಿಗೆ 5 ವರ್ಷ 5 ತಿಂಗಳಾಗಿದ್ದರೂ ಶಾಲೆಗೆ ಸೇರಿಸಲು ಈ ವರ್ಷ ಅವಕಾಶ ಮಾಡಿಕೊಡಲಾಗುತ್ತದೆ. ಎಸ್ಇಪಿ (State Education Policy) ವರದಿ ಆಧಾರದ ಮೇರೆಗೆ ಕಡ್ಡಾಯ 6 ವರ್ಷ ವಯೋಮಿತಿಯನ್ನು ಸಡಿಲಿಸಲಾಗಿದೆ. ಆದರೆ, ಒಂದನೇ ತರಗತಿ ಸೇರ್ಪಡೆಗೆ ಯುಕೆಜಿ ಆಗಿರಬೇಕು. ಇದು ಕೇವಲ ಈ ವರ್ಷಕ್ಕೆ ಮಾತ್ರ ಅನ್ವಯವಾಗಲಿದ್ದು. ಮುಂದಿನ ವರ್ಷದಿಂದ ವಯೋಮಿತಿ 6 ವರ್ಷವೇ ಇರಲಿದೆ ಎಂದು ಹೇಳಿದರು.
ಈ ವರ್ಷ ಮಾತ್ರ ವಿನಾಯಿತಿ
‘ವಯಸ್ಸಿನ ಮಿತಿಯ ಬಗ್ಗೆ ಎಲ್ಲರೂ ಒತ್ತಡ ಹೇರುತ್ತಾ ಇದ್ದರು. ಈ ವಿಚಾರದಲ್ಲಿ ಪೋಷಕರಿಗೆ ಒಂದು ಮನವಿಯನ್ನು ಮಾಡುತ್ತಿದ್ದೇನೆ. ಮಕ್ಕಳನ್ನು ಯಂತ್ರದ ತರ ಓದಿಸಬೇಡಿ. ಹಾಗೆ ಮಾಡಿದರೆ ಮಕ್ಕಳಲ್ಲಿ ಒತ್ತಡ ಹೆಚ್ಚಾಗುತ್ತದೆ. ವಯೋಮಿತಿ ವಿಚಾರದಲ್ಲಿ ಪೋಷಕರು ಗೊಂದಲದಲ್ಲಿದ್ದಾರೆ. ದೇಶದಲ್ಲಿ ಎಲ್ಲ ಕಡೆಗಳಲ್ಲಿ ಒಂದನೇ ತರಗತಿ ಸೇರ್ಪಡೆಗೆ ಆರು ವರ್ಷ ವಯೋಮಿತಿ ಇದೆ. ಆದರೆ ನಾವು ಮಾತ್ರ ಈ ಬಾರಿ ವಿನಾಯಿತಿ ನೀಡಿದ್ದೇವೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Job Recruitment: ರಾಜ್ಯ ಸಿವಿಲ್ ಸೇವೆ ಹುದ್ದೆಗಳ ಹೊಸ ನೇಮಕಾತಿಗೆ ಸರ್ಕಾರ ತಡೆ
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧನ್ಯವಾದ
1ನೇ ತರಗತಿಯ ಮಕ್ಕಳ ದಾಖಲಾತಿ ವಯಸ್ಸನ್ನು 6 ವರ್ಷದಿಂದ 5 ವರ್ಷ 5 ತಿಂಗಳಿಗೆ ಇಳಿಸುವ ತೀರ್ಮಾನವನ್ನು ಕೈಗೊಂಡ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಹಾಗೂ ರಾಜ್ಯ ಸರ್ಕಾರದ ತೀರ್ಮಾನವನ್ನು ಸ್ವಾಗತಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಿಳಿಸಿದೆ.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಹಾಗೂ ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚು ಮಾಡುವ ದೃಷ್ಟಿಯಿಂದ ಇಂತಹ ಐತಿಹಾಸಿಕ ತೀರ್ಮಾನವನ್ನು ಕೈಗೊಂಡಿರುವ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಹಾಗೂ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಅನಂತ ಅನಂತ ಧನ್ಯವಾದಗಳನ್ನು ತಿಳಿಸುತ್ತೇವೆ.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವ ಸಲುವಾಗಿ ಶಿಕ್ಷಕರ ಸಂಘಟನೆಯು ನಿರಂತರವಾಗಿ ಶಿಕ್ಷಣ ಸಚಿವರನ್ನು ಭೇಟಿ ಮಾಡಿ 1ನೇ ತರಗತಿಯ ಮಕ್ಕಳ ದಾಖಲಾತಿ ವಯಸ್ಸನ್ನು 6 ವರ್ಷದಿಂದ 5 ವರ್ಷಕ್ಕೆ ಇಳಿಸಲು ಒತ್ತಾಯಿಸಲಾಗಿತ್ತು. ಈ ಕಾರಣಕ್ಕಾಗಿ ಮಾನ್ಯ ಸಚಿವರು 1ನೇ ತರಗತಿಯ ದಾಖಲಾತಿ ವಯೋಮಿತಿಯನ್ನು 5 ವರ್ಷ 6 ತಿಂಗಳಿಗೆ ಇಳಿಸಿದ್ದು, ಇದು ಸರ್ಕಾರಿ ಶಾಲೆಗಳನ್ನು ಉಳಿಸುವಲ್ಲಿ ಮಹತ್ವದ ತೀರ್ಮಾನವಾಗಿದ್ದು ಇದನ್ನು ಶಿಕ್ಷಕರ ಸಂಘ ಸ್ವಾಗತಿಸುತ್ತದೆ ಎಂದು ಸಂಘ ತಿಳಿಸಿದೆ.