Karnataka CM Row: ಆಪ್ತ ಶಾಸಕರ ದೆಹಲಿ ಭೇಟಿ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದ ಡಿ.ಕೆ. ಶಿವಕುಮಾರ್
DK Shivakumar: ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ಪೂರೈಸಿದ ದಿನವೇ ಅಧಿಕಾರ ಹಂಚಿಕೆ ವಿಚಾರ ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ನನಗೆ ಆರೋಗ್ಯ ಸರಿಯಿಲ್ಲದ ಕಾರಣಕ್ಕೆ ಮನೆಯಿಂದ ಹೊರಗಡೆ ಬಂದಿಲ್ಲ. ಶಾಸಕರು ದೆಹಲಿಗೆ ತೆರಳಿರುವ ಬಗ್ಗೆ ನನಗೆ ತಿಳಿಯದು ಎಂದು ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ -
ಬೆಂಗಳೂರು, ನ. 20: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆ ಕಾಂಗ್ರೆಸ್ ಹೈಕಮಾಂಡ್ ನಾಯಕರ ಜತೆ ಚರ್ಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆಪ್ತ ಶಾಸಕರ ಬಳಗ ದೆಹಲಿಗೆ ಗುರುವಾರ ತೆರಳಿದೆ. ಈ ಬಗ್ಗೆ ಇದೀಗ ಡಿ.ಕೆ.ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದು, ಸಚಿವರು, ಶಾಸಕರು, ಎಂಎಲ್‌ಸಿಗಳ ದೆಹಲಿ ಭೇಟಿ ಬಗ್ಗೆ ಗೊತ್ತಿಲ್ಲ. ಯಾರೂ ನನ್ನ ಬಳಿ ಕೇಳಿಯೂ ಇಲ್ಲ. ಈ ವಿಚಾರ ನನಗೆ ಗೊತ್ತೂ ಇಲ್ಲ ಎಂದು ತಿಳಿಸಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಗುರುವಾರ ರಾತ್ರಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದ್ದಾರೆ. ಸರ್ಕಾರಕ್ಕೆ ಎರಡೂವರೆ ವರ್ಷ ಪೂರೈಸಿದ ದಿನವೇ ಅಧಿಕಾರ ಹಂಚಿಕೆ ವಿಚಾರ ಚರ್ಚೆಯಾಗುತ್ತಿರುವ ಬಗ್ಗೆ ಕೇಳಿದಾಗ, "ನನಗೆ ಆರೋಗ್ಯ ಸರಿಯಿಲ್ಲದ ಕಾರಣಕ್ಕೆ ಮನೆಯಿಂದ ಹೊರಗಡೆ ಬಂದಿಲ್ಲ. ಸ್ನಾನವನ್ನೂ ಮಾಡಿಲ್ಲ" ಎಂದಿದ್ದಾರೆ.
ಐದೂ ವರ್ಷವೂ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅವರು ಚಾಮರಾಜನಗರದಲ್ಲಿ ಹೇಳಿರುವ ಬಗ್ಗೆ ಕೇಳಿದಾಗ, "ಬಹಳ ಸಂತೋಷ, ಅವರಿಗೆ ಮುಖ್ಯಮಂತ್ರಿ ಹುದ್ದೆ ಜವಾಬ್ದಾರಿಯನ್ನು ಪಕ್ಷ ಕೊಟ್ಟಿದೆ. ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಇರುವುದಿಲ್ಲ ಎಂದು ಯಾರೂ ಹೇಳಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯರ ಭೇಟಿಯ ಬಗ್ಗೆ ಕೇಳಿದಾಗ, "ವಿಧಾನಪರಿಷತ್ ಸಭಾಧ್ಯಕ್ಷರು ಹಾಗೂ ಉಪ ಸಭಾಧ್ಯಕ್ಷರನ್ನು ಈ ಬಾರಿ ಕಾಂಗ್ರೆಸ್ ಪಕ್ಷದಿಂದಲೇ ಆಯ್ಕೆ ಮಾಡಬೇಕು ಎಂದು ಪಕ್ಷದ ಸದಸ್ಯರುಗಳು ಮನವಿ ಮಾಡಿದ್ದಾರೆ. ಈ ಹಿಂದೆಯೇ ಇದನ್ನು ಮಾಡಬೇಕಿತ್ತು. ಮೇಲ್ಮನೆಯಲ್ಲಿ ವಿಪಕ್ಷಗಳ ಹಾಗೂ ನಮ್ಮ ಸಂಖ್ಯೆ ಸಮನಾಗಿದೆ. ಗಾಯತ್ರಿ ಅವರ ಪ್ರಕರಣವನ್ನು ನ್ಯಾಯಲಯದಲ್ಲಿ ಗೆದ್ದಿದ್ದೇವೆ. ಅಲ್ಲಿಂದ ಆದೇಶ ಪಡೆಯಬೇಕಿದೆ. ಆಗ ನಮ್ಮ ಸದಸ್ಯರ ಸಂಖ್ಯೆ ಹೆಚ್ಚಳವಾಗಲಿದೆ ಎಂದು ಸದಸ್ಯರು ತಿಳಿಸಿದ್ದಾರೆ" ಎಂದರು.
ಚಲುವರಾಯಸ್ವಾಮಿ ನೇತೃತ್ವದಲ್ಲಿ ದೆಹಲಿಗೆ ತೆರಳಿರುವ ಶಾಸಕರ ತಂಡ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ʼನವೆಂಬರ್ ಕ್ರಾಂತಿʼ ಶುರುವಾಗಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಸಿಎಂ ಕುರ್ಚಿ ಕಾಳಗ (Karnataka CM Row) ಇದೀಗ ದೆಹಲಿ ಅಂಗಳ ತಲುಪಿದೆ. ಒಂದೆಡೆ ಚಾಮರಾಜನಗರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಉಳಿದ ಅವಧಿ ನಾನೇ ಸಿಎಂ ಆಗಿರಲಿದ್ದೇನೆ ಎಂದು ಗುರುವಾರ ಹೇಳಿಕೆ ನೀಡಿದ್ದರು. ಮತ್ತೊಂದೆಡೆ ಡಿ.ಕೆ.ಶಿವಕುಮಾರ್ ಅವರ ಬಣ ದೆಹಲಿಗೆ ತೆರಳಿದ್ದು, ಕಾಂಗ್ರೆಸ್ ಹೈಕಮಾಂಡ್ ನಾಯಕರ ಭೇಟಿಗೆ ಮುಂದಾಗಿದ್ದಾರೆ.
ಕೃಷಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಟೀಂ ಸಮುದಾಯದ ಶಾಸಕರು ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಈ ತಂಡದಲ್ಲಿ ಮಾಗಡಿ ಶಾಸಕ ಬಾಲಕೃಷ್ಣ, ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಮಂಡ್ಯ ಶಾಸಕ ರವಿಕುಮಾರ್ ಗಣಿಗ, ಅನೇಕಲ್ ಶಾಸಕ ಶಿವಣ್ಣ, ನೆಲಮಂಗಲ ಶಾಸಕ ಶ್ರೀನಿವಾಸ್, ಕುಣಿಗಲ್ ಶಾಸಕ ಎಚ್.ಡಿ. ರಂಗನಾಥ್, ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್, ದಾವಣಗೆರೆ ಜಿಲ್ಲೆಯ ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಇದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿಗೆ ಡಿಕೆಶಿ ಆಪ್ತ ಶಾಸಕರು ಸಂಜೆ ಭೇಟಿ ನೀಡಿದಾಗ ಖರ್ಗೆ ಅವರು ಸೋನಿಯಾ ಗಾಂಧಿ ಅವರ ಭೇಟಿಗೆ ತೆರಳಿದ್ದರು. ಶಾಸಕರೊಂದಿಗೆ ಸಮಯ ನಿಗದಿಯಾಗಿದೆ ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ : DK Shivakumar: ನಮ್ಮ ನೀರಾವರಿ ಯೋಜನೆಗಳ ಪರ ಕೋರ್ಟ್ ತೀರ್ಪಿದ್ದರೂ ಕೇಂದ್ರದಿಂದ ಅಸಹಕಾರ: ಡಿಕೆಶಿ ಬೇಸರ
ಸಿಎಂ ಸ್ಥಾನವನ್ನು ಡಿ.ಕೆ.ಶಿವಕುಮಾರ್‌ಗೆ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರಲು ಹಾಕಲು ಸಚಿವರು, ಶಾಸಕರ ದಂಡು ದೆಹಲಿಗೆ ಹೊರಟಿದೆ. ಒಕ್ಕಲಿಗ ಸಮುದಾಯದ ನಾಯಕ ಡಿ.ಕೆ.ಶಿವಕುಮಾರ್‌ಗೆ ಸಿಎಂ ಸ್ಥಾನ ನೀಡಬೇಕು. ಈ ಮೂಲಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಒಕ್ಕಲಿಗ ಸಮುದಾಯಕ್ಕೆ ನ್ಯಾಯ ನೀಡುವಂತೆ ಕಾಂಗ್ರೆಸ್ ಹೈಕಮ್ಯಾಂಡ್ ಮೇಲೆ ಚಲುವರಾಯಸ್ವಾಮಿ ನೇತೃತ್ವದಲ್ಲಿ ತೀವ್ರ ಒತ್ತಡ ಹೇರಲಾಗುತ್ತಿದೆ.