ಮಧುಗಿರಿ: ತಾಲೂಕು ಪಂಚಾಯಿತಿಯಲ್ಲಿ (Madhugiri Taluk Panchayath) ಸುಮಾರು 4 ಕೋಟಿಗೂ ಹೆಚ್ಚು ಹಣ ದುರುಪಯೋಗ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಮಧುಗಿರಿ ತಾಲೂಕು ಪಂಚಾಯಿತಿ ಹಾಲಿ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್. ಲಕ್ಷ್ಮಣ್ ಹಾಗೂ ಈ ಹಿಂದಿನ ಇಒಗಳಾದ ದೊಡ್ಡಸಿದ್ದಯ್ಯ ಹಾಗೂ ಎಚ್. ಶಶಿಧರ್ ಅವರನ್ನು ರಾಜ್ಯ ಸರ್ಕಾರ ಇಲಾಖಾ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತುಗೊಳಿಸಿದೆ. ಈ ಹಗರಣದಲ್ಲಿ ಈಗಾಗಲೇ ದ್ವಿತೀಯ ದರ್ಜೆಯ ಸಹಾಯಕಿ ಸೌಮ್ಯ ಅಮಾನತುಗೊಂಡಿದ್ದಾರೆ.
ಮಧುಗಿರಿ ತಾಲೂಕಿನಲ್ಲಿ 21 ನಿವೃತ್ತ ನೌಕರರ ಅಂತಿಮ ಗಳಿಕೆ ರಜೆ ನಗದೀಕರಣ ಬಿಲ್‌ಗಳನ್ನು ಅಕ್ರಮವಾಗಿ 147 ಬಾರಿ ಒಟ್ಟು 4.24 ಕೋಟಿ ರೂಗಳನ್ನು ನಗದೀಕರಿಸಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ ಆರೋಪದ ಮೇಲೆ ಎಸ್‌ಡಿಎ ಸೌಮ್ಯ ಅವರನ್ನು ಜಿ.ಪಂ ಸಿಇಒ ಬಿ.ವಿ ಅಶ್ವಿಜಾ ಅಮಾನತ್ತು ಮಾಡಿ ಅದೇಶಿಸಿದ್ದರು. ನಂತರ ಈ ಹಗರಣಕ್ಕೆ ಸಂಬಂಧಿಸಿದಂತೆ 82,77,533 ರೂ ಫಲಾನುಭವಿಗಳ ಹೆಸರು ತಾಳೆ ಆಗದ ಕಾರಣ ಈ ಬಗ್ಗೆ ತಾಪಂ ಇಒ ಲಕ್ಷ್ಮಣ್ ಯಾವುದೇ ದಾಖಲೆಗಳನ್ನು ಒದಗಿಸದ ಕಾರಣ ತಕ್ಷಣ ಜಾರಿಗೆ ಬರುವಂತೆ ಮಧುಗಿರಿ ಇಒ ಬಿ.ಎಸ್. ಲಕ್ಷ್ಮಣ್ ಹಾಗೂ ಈ ಹಿಂದೆ ಮಧುಗಿರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಹಾಲಿ ಚಿಕ್ಕನಾಯಕನಹಳ್ಳಿ ತಾ.ಪಂ ಇಒ ದೊಡ್ಡಸಿದ್ಧಯ್ಯ ಹಾಗೂ ಈ ಹಿಂದೆ ಮಧುಗಿರಿಯಲ್ಲಿ ಕಾರ್ಯ ನಿರ್ವಹಿಸಿದ್ದ ಹಾಲಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಇಒ ಎಚ್.ಶಶಿಧರ್ ಅವರನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜಂಟಿ ಕಾರ್ಯದರ್ಶಿ ಜಯಲಕ್ಷ್ಮಿ ಅವರು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಸರ್ಕಾರದ ಈ ಆದೇಶದ ಹಿನ್ನೆಲೆಯಲ್ಲಿ ತುಮಕೂರು ಜಿಪಂ ಸಿಇಒ ಬಿ.ವಿ.ಅಶ್ವಿಜಾ ಅವರು ಬಿ.ಎಸ್. ಲಕ್ಷ್ಮಣ್ ಅವರನ್ನು ಶುಕ್ರವಾರ ಕರ್ತವ್ಯದಿಂದ ಬಿಡುಗಡೆ ಮಾಡಿದ್ದು, ಪಾವಗಡ ತಾಪಂ ಇಓ ಬಿ.ಕೆ.ಉತ್ತಮ್ ಅವರನ್ನು ಪ್ರಭಾರದಲ್ಲಿ ಇರಿಸಿ ಆದೇಶಿಸಿದ್ದಾರೆ.
ಮಧುಗಿರಿ ತಾ.ಪಂ ಕಛೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿ ಸೌಮ್ಯ ಅವರು ನಿವೃತ್ತ ನೌಕರರ ಅಂತಿಮ ಗಳಿಕೆ ರಜೆ ನಗದಿಕರಣ ಬಿಲ್ಲುಗಳನ್ನು ನಗದಿಕರಿಸಿ ತಮ್ಮ ಮತ್ತು ಕುಟುಂಬದ ಸದಸ್ಯರ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಸರ್ಕಾರಿ ಹಣವನ್ನು ವರ್ಗಾವಣೆ ಮಾಡಿಕೊಂಡು ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರನ ಅಂತಿಮ ಗಳಿಕೆ ರಜೆಗಳನ್ನು ಪಾವತಿಸುವಲ್ಲಿ ರೂ. 4.24 ಕೋಟಿ ರೂ.ಗಳನ್ನು ಅನುಮಾನಾಸ್ಪದವಾಗಿ ಪಾವತಿಸಿರುವುದು ಕಂಡು ಬಂದಿರುವ ಬಗ್ಗೆ, ವರದಿ ನೀಡಿದ್ದರು.
ಈ ಬಗ್ಗೆ ಪರಿಶೀಲಿಸಿದಾಗ ಇದರಲ್ಲಿ ಮಂಜುಳಮ್ಮ, ವ್ಯವಸ್ಥಾಪಕರು (ನಿವೃತ್ತ) ಮೊತ್ತ 491730, ರಂಗನಾಥಯ್ಯ ಪಿ, ಕಾರ್ಯದರ್ಶಿ (ನಿವೃತ್ತ) ಪ್ರಸ್ತುತ ಮರಣ ಹೊಂದಿರುತ್ತಾರೆ. ಇವರಿಗೆ ಪಾವತಿಯಾಗಿರುವ ಮೊತ್ತ ರೂ 14850, ನ್ಯಾಯಬದ್ಧ ಪಾವತಿಗಳಾಗಿದ್ದು ಸರಿ ಇರುತ್ತದೆ. ಇದನ್ನು ಹೊರತುಪಡಿಸಿ, ಉಳಿಕೆ 4.19 ಕೋಟಿ ರೂ. ಗಳನ್ನು ಅನುಮಾನಾಸ್ಪದವಾಗಿ ಪಾವತಿಸಿರುವುದು ಕಂಡುಬಂದಿರುತ್ತದೆ.
ಅಮಾನತ್ತುಗೊಂಡ ಬೆನ್ನಲ್ಲೆ ಪರಿಶೀಲನೆ ಮಾಡಿದ ಇಒ, ತಾ.ಪಂನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಹಾಗೂ ಮರಣ ಹೊಂದಿದ ಸರ್ಕಾರಿ ನೌಕರರ ಗಳಿಕೆ ರಜೆಯನ್ನು ನೌಕರರ ಹೆಸರಿನಲ್ಲಿ ಆನೇಕ ಬಾರಿ ಕಾರ್ಯ ನಿರ್ವಾಹಕ ಅಧಿಕಾರಿಗಳ ಖಜಾನೆ-2 ಲಾಗಿನ್ ಹಾಗೂ ಡಿಜಿಟಲ್ ಸಹಿಯ ಕೀ ಅನ್ನು ಅನಧಿಕೃತವಾಗಿ ನನ್ನ ಗಮನಕ್ಕೆ ತರದೆ ದುರ್ಬಳಕೆ ಮಾಡಿಕೊಂಡು ಗಳಿಗೆ ರಜೆ ನಗದೀಕರಣವನ್ನು ನಮ್ಮ ಕಚೇರಿಯ ಸಿಬ್ಬಂದಿ ಶಾಖೆಯ ಫೆ1 2020 ರಿಂದ ಮಾ31 2025 ವರೆಗೆ ಎಸ್‌ಡಿಎ ಸೌಮ್ಯಳ ಗಂಡ ರಮೇಶ್, ಸಂಬಂಧಿಕರಾದ ಜಿ. ಆರ್. ಶಿವಲೀಲ, ಸುಮ ಜಿ. ಆರ್, ಮೀನಾಕ್ಷಿ ಜಿ. ಆರ್, ಹಾಗೂ ಕಚೇರಿಯ ಸಿಬ್ಬಂದಿ ಎಂ. ಎನ್. ಪ್ರವೀಣ್ ಎಂಬುವವರ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಿರುವುದು ಕಂಡು ಬಂದಿರುತ್ತದೆ.
ಹಣ ಪಾವತಿಯಾಗಿರುವ ಖಾತೆಯ ವಿವರ : ಜಿ.ಆರ್. ರಮೇಶ್ ರವರ ವಿವಿಧ ಬ್ಯಾಂಕ್ ಖಾತೆಗೆ ನಾಲ್ಕು ಬಾರಿ 19,749,810, 61,97,020, 29,70,757, 5,90,440 ರೂ.ಗಳು, ಶಿವಲೀಲಾ 4,438,080, 4,467,960, ಎಂ.ಎನ್. ಪ್ರವೀಣ್ ಖಾತೆಗೆ 12,31,890, ಜಿ.ಆರ್. ಉಮಾ ಖಾತೆಗೆ 16,72,610, ಜಿ.ಆರ್. ಮೀನಾಕ್ಷಿ ಖಾತೆಗೆ 5,81,850 ಒಟ್ಟು 4,19,00,417 ರೂಗಳು ವಿವಿಧ ಖಾತೆಗೆ ಜಾಮಾ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಎ1 ಸೌಮ್ಯ ಎಸ್.ಡಿ.ಎ , ಎ2 ರಮೇಶ್, ಎ3 ಶಿವಲೀಲಾ, ಎ4 ಪ್ರವೀಣ್, ಎ5 ಸುಮಾ ಜಿ.ಆರ್, ಎ6 ಮೀನಾಕ್ಷಿ ಜಿ.ಆರ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಕರಣದ ಬಗ್ಗೆ ಮಧುಗಿರಿ ಪೋಲೀಸ್ ಠಾಣೆಯ ದೂರು ದಾಖಲಾಗಿದ್ದರೂ ಸಹ ಯಾವುದೇ ಆರೋಪಿಗಳನ್ನು ಪೋಲೀಸರು ಬಂಧಿಸಿಲ್ಲ.
(ವರದಿ: ಜಲಾಲ್ ಬಾಷ ಐ.ಡಿ.ಹಳ್ಳಿ)