ಬೆಂಗಳೂರು: ವಿದ್ಯುತ್ ಕಂಬಗಳ ನಡುವೆ ತಲೆ ಸಿಲುಕಿ ಒದ್ದಾಡುತ್ತಿದ್ದ ಹಸುವನ್ನು ಸ್ಥಳೀಯರ ಸಹಾಯದೊಂದಿಗೆ ಬಸವನಗುಡಿ ಕ್ಷೇತ್ರದ ಶಾಸಕ ರವಿ ಸುಬ್ರಮಣ್ಯ (MLA Ravi Subramanya) ಅವರು ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಶಾಸಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಬಸವನಗುಡಿ ವಿಧಾನಸಭಾ ಕ್ಷೇತ್ರದ ಕತ್ರಿಗುಪ್ಪೆ ವಾಟರ್ ಟ್ಯಾಂಕ್ ಹಿಂಭಾಗದ ರಸ್ತೆಯಲ್ಲಿ ಗುರುವಾರ ಎರಡು ವಿದ್ಯುತ್ ಕಂಬಗಳ ನಡುವೆ ತಲೆ ಸಿಕ್ಕಿ ಹಾಕಿಕೊಂಡು ಹಸು ಒದ್ದಾಡುತ್ತಿದ್ದದ್ದನ್ನು ಕಂಡ ಶಾಸಕ ರವಿ ಸುಬ್ರಮಣ್ಯ ಅವರು ಸಾರ್ವಜನಿಕರ ಸಹಾಯದೊಂದಿಗೆ ತಕ್ಷಣ ಹಸುವನ್ನು ರಕ್ಷಿಸಿದ್ದಾರೆ.
ಜಾನುವಾರುಗಳನ್ನು ರಸ್ತೆಗೆ ಬಿಟ್ಟು ನಿರ್ಲಕ್ಷ್ಯ ಮಾಡಬೇಡಿ: ಶಾಸಕ ಮನವಿ
ಅಪಾಯದಲ್ಲಿ ಸಿಲುಕಿದ ಹಸುವಿನ ರಕ್ಷಣೆ ಬಳಿಕ ಶಾಸಕ ರವಿ ಸುಬ್ರಮಣ್ಯ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ನಿತ್ಯದ ಕ್ಷೇತ್ರ ಪರಿಶೀಲನೆ ವೇಳೆ ಮನಸ್ಸಿಗೆ ನೋವುಂಟು ಮಾಡುವ ದೃಶ್ಯವೊಂದು ಕಂಡಿತು. ಎರಡು ಕಂಬಗಳ ನಡುವೆ ಸಿಲುಕಿ, ತೀವ್ರ ನೋವು ಮತ್ತು ಆತಂಕದಿಂದ ನರಳುತ್ತಿದ್ದ ಈ ಹಸುವನ್ನು ಕಂಡ ತಕ್ಷಣವೇ ನಾವು ಸ್ಥಳಕ್ಕೆ ಧಾವಿಸಿ ಸುರಕ್ಷಿತವಾಗಿ ರಕ್ಷಣೆ ಮಾಡಿದೆವು.
ಇಂತಹ ದೃಶ್ಯಗಳು ನಿಜಕ್ಕೂ ಬೇಸರ ಮೂಡಿಸುತ್ತವೆ. ಹಾಲು ಕೊಡುವವರೆಗೂ ಹಸು ಬೇಕು, ನಂತರ ಅದರ ಜವಾಬ್ದಾರಿ ಬೀದಿಪಾಲು ಎಂಬ ಮನೋಭಾವ ಬದಲಾಗಬೇಕು. ಹಸುವಿನಿಂದ ಜೀವನೋಪಾಯ ಪಡೆಯುವವರು, ಅದರ ಜೀವನಪೂರ್ತಿ ಆರೈಕೆ ಮತ್ತು ರಕ್ಷಣೆಯ ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕು. ಬೀದಿಗೆ ಬಿಟ್ಟು ಅವು ನೋವು ಅನುಭವಿಸುವಂತೆ ಮಾಡುವುದು ಮಾನವೀಯತೆಯಲ್ಲ ಎಂದು ಹೇಳಿದ್ದಾರೆ.
ಪ್ರತಿಯೊಬ್ಬ ಜಾನುವಾರು ಮಾಲೀಕರಿಗೂ ನನ್ನ ಮನವಿ ಏನೆಂದರೆ, ನಿಮ್ಮ ಜಾನುವಾರುಗಳನ್ನು ರಸ್ತೆಗೆ ಬಿಟ್ಟು ನಿರ್ಲಕ್ಷ್ಯ ಮಾಡಬೇಡಿ. ಅವುಗಳ ಆರೈಕೆ ಮಾಡಿ, ರಕ್ಷಿಸಿ. "ಪ್ರಾಣಿ ಹಿಂಸೆ ಮಹಾಪಾಪ... ಕರುಣೆ ನಮ್ಮ ಕರ್ತವ್ಯ" ಎಂದು ಸಲಹೆ ನೀಡಿದ್ದಾರೆ.