ಬೆಂಗಳೂರು: ನಗರದ ನಾಯಂಡಹಳ್ಳಿಯ ವಿನಾಯಕ ಲೇಔಟ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು (Bengaluru cylinder blast) ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಹಾಗೂ ಮೂರು ವರ್ಷದ ಮಗು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಒಂದೇ ಕುಟುಂಬದ ಹಲವು ಸದಸ್ಯರು ಗಂಭೀರವಾಗಿ ಗಾಯಗೊಂಡಿದ್ದರು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರನ್ನು ಲಕ್ಷ್ಮಮ್ಮ ಹಾಗೂ ಅವರ ಮೂರು ವರ್ಷದ ಮಗು ಎಂದು ಗುರುತಿಸಲಾಗಿದೆ. ಸ್ಫೋಟದಲ್ಲಿ ಲಕ್ಷ್ಮಮ್ಮ ಅವರಿಗೆ ಸುಮಾರು ಶೇ.70ರಷ್ಟು ಸುಟ್ಟ ಗಾಯಗಳಾಗಿದ್ದವು. ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಳೆದ ಶುಕ್ರವಾರ ಘಟನೆ ನಡೆದಿತ್ತು. ಮನೆಯ ಬಾಗಿಲು ತೆರೆದು ಅಡುಗೆ ಮಾಡಲು ಸ್ಟೌವ್ ಹಚ್ಚಿದ ಕೆಲವೇ ಕ್ಷಣಗಳಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಕರಿಲಿಂಗಪ್ಪ, ಅವರ ಪತ್ನಿ ಲಕ್ಷ್ಮಮ್ಮ ಹಾಗೂ ನಾಲ್ವರು ಮಕ್ಕಳು ಗಾಯಗೊಂಡಿದ್ದರು. ಕೂಡಲೇ ಎಲ್ಲರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ತಾಯಿ-ಮಗು ಮೃತಪಟ್ಟಿದ್ದಾರೆ.
ರಾಯಚೂರು ಮೂಲದ ಕರಿಲಿಂಗಪ್ಪ ಅವರ ಕುಟುಂಬ ವಿನಾಯಕ ಲೇಔಟ್‌ನಲ್ಲಿ ಕಳೆದ 25 ವರ್ಷಗಳಿಂದ ವಾಸವಾಗಿತ್ತು. ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದ ಈ ಕುಟುಂಬ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು.
ಘೋರ ಕೃತ್ಯ: ಹೆಣ್ಣು ಮಗು ಜನಿಸಿದ್ದಕ್ಕೆ ಒಂದು ದಿನದ ಕಂದಮ್ಮನನ್ನೇ ಬಲಿ ಪಡೆದ ಪಾಪಿ ತಾಯಿ
ನೀರಿನ ಸಂಪ್‌ಗೆ ಬಿದ್ದು 6 ವರ್ಷದ ಬಾಲಕ ಸಾವು
ಹುಬ್ಬಳ್ಳಿ: ನೀರಿನ ಸಂಪಿನಲ್ಲಿ ಬಿದ್ದು 6 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಉಣಕಲ್ ಗ್ರಾಮದ ಗಣೇಶ್ ಕಾಲೋನಿ ನಿವಾಸಿ ಸಿದ್ಧಾರ್ಥ್ ಮೃತ ದುರ್ದೈವಿ. ಸಿದ್ಧಾರ್ಥ್ 1ನೇ ತರಗತಿ ಓದುತ್ತಿದ್ದ.
ನೀರು ತೆಗೆಯಲು ತೆರೆದಿದ್ದ ಸಂಪಿನಲ್ಲಿ ಆಯತಪ್ಪಿ ಬಾಲಕ ಬಿದ್ದಿದ್ದಾನೆ. ಬಾಲಕ ಬಿದ್ದಿದ್ದನ್ನು ಗಮನಿಸಿದ ತಂದೆ ನಾಗಪ್ಪ ರಕ್ಷಣೆಗೆ ಯತ್ನಿಸಿದ್ದು, ಕೂಡಲೇ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಬಾಲಕ ಮೃತಪಟ್ಟಿದ್ದಾನೆ. ಸದ್ಯ ಕಿಮ್ಸ್ ಶವಾಗಾರಕ್ಕೆ ಸಿದ್ಧಾರ್ಥ್ ಮೃತದೇಹ ರವಾನಿಸಲಾಗಿದೆ. ಶವಾಗಾರದ ಎದುರು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.