ಬೆಂಗಳೂರು, ಫೆ.05 : ಬೆಂಗಳೂರಿನ (Bengaluru) ‘ನಮ್ಮ ಮೆಟ್ರೋ’ ಪ್ರಯಾಣ ದರವನ್ನು ಶೇ. 5ರಷ್ಟು ಹೆಚ್ಚಿಸಲು (Namma Metro ticket price hike) ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಫೆ.9, ಸೋಮವಾರದಿಂದ ಹೊಸ ದರಗಳು ಜಾರಿಗೆ ಬರಲಿದೆ. ನಿರ್ವಹಣಾ ವೆಚ್ಚದ ಹೆಚ್ಚಳದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್ (BMRCL) ತಿಳಿಸಿದೆ. ದರ ಏರಿಕೆಗೆ ಮೆಟ್ರೋ ಪ್ರಯಾಣಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಕಳೆದ ವರ್ಷ ಅಂದರೆ 2025ರ ಫೆಬ್ರವರಿ 9ರಂದು ಬಿಎಂಆರ್‌ಸಿಎಲ್ ದರಗಳಲ್ಲಿ ಗಣನೀಯ ಬದಲಾವಣೆ ಮಾಡಿತ್ತು. ಕಾಕತಾಳೀಯ ಎಂಬಂತೆ ಈ ವರ್ಷವೂ ಫೆಬ್ರವರಿ 9ರಿಂದಲೇ ಹೊಸ ದರಗಳು ಜಾರಿಯಾಗುತ್ತಿವೆ. ಈ ಬಾರಿ ಶೇಕಡಾ 5ರಷ್ಟು ಏರಿಕೆ ಮಾಡಲಾಗಿದ್ದು, ಕನಿಷ್ಠ ಮತ್ತು ಗರಿಷ್ಠ ದರಗಳಲ್ಲಿ 2 ರಿಂದ 5 ರೂಪಾಯಿಗಳವರೆಗೆ ವ್ಯತ್ಯಾಸವಾಗುವ ಸಾಧ್ಯತೆಯಿದೆ. ಬಿಎಂಆರ್‌ಸಿಎಲ್ ಇಂದೇ ಅಥವಾ ನಾಳೆ ಅಧಿಕೃತ ದರ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ನಡೆದ ಬೆಂಗಳೂರು ಮೆಟ್ರೋ ರೈಲು ನಿಗಮದ ಉನ್ನತ ಮಟ್ಟದ ಬೋರ್ಡ್ ಸಭೆಯಲ್ಲಿ ದರ ಏರಿಕೆಯ ಕುರಿತು ಸುದೀರ್ಘ ಚರ್ಚೆ ನಡೆದಿತ್ತು. ವಿದ್ಯುತ್ ವೆಚ್ಚದ ಹೆಚ್ಚಳ, ನಿರ್ವಹಣಾ ವೆಚ್ಚ ಹಾಗೂ ಸಿಬ್ಬಂದಿಗಳ ವೇತನ ಹೆಚ್ಚಳದ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯ ಎಂದು ಬಿಎಂಆರ್‌ಸಿಎಲ್ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಗೆ ಇಂದು ರಾಜ್ಯ ಸರ್ಕಾರ ಅಂತಿಮ ಅನುಮೋದನೆ ನೀಡಿದೆ.