ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Navikotsava 2026: ನವೆಂಬರ್ 22ರಂದು ಜಪಾನ್‌ನಲ್ಲಿ ಕನ್ನಡದ ಜಾತ್ರೆ: 8ನೇ ನಾವಿಕೋತ್ಸವಕ್ಕೆ ಭರ್ಜರಿ ಸಿದ್ಧತೆ

Navikotsava 2026: ಈ ಬಾರಿಯ ನಾವಿಕೋತ್ಸವಕ್ಕೆ ‘ಕಿಜುನಾ’ ಎಂಬ ಅರ್ಥಪೂರ್ಣ ಜಪಾನಿ ಹೆಸರನ್ನಿಡಲಾಗಿದೆ. ಜಪಾನಿ ಭಾಷೆಯಲ್ಲಿ ಕಿಜುನಾ ಎಂದರೆ ಬಾಂಧವ್ಯ, ಆತ್ಮೀಯ ಸಂಬಂಧ ಎಂದರ್ಥ. ಕಾರ್ಯಕ್ರಮಕ್ಕೆ ಅಮೆರಿಕದಿಂದ ಸುಮಾರು 300 ಕನ್ನಡಿಗರು ಜಪಾನ್‌ಗೆ ಆಗಮಿಸುವ ನಿರೀಕ್ಷೆಯಿದೆ.

| ಬೆಂಕಿ ಬಸಣ್ಣ, ನ್ಯೂಯಾರ್ಕ್

ಜಪಾನ್‌ನಲ್ಲಿ ಕನ್ನಡದ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಉದಯರವಿಯ ನಾಡಿನ ರಾಜಧಾನಿ ಟೋಕಿಯೊದಲ್ಲಿ ನವೆಂಬರ್ 22ರಂದು ಕನ್ನಡದ ಸಾಂಸ್ಕೃತಿಕ ವೈಭವ ಅನಾವರಣಗೊಳ್ಳಲಿದೆ. ಉತ್ತರ ಅಮೆರಿಕದ ವಿಶ್ವ ಕನ್ನಡಿಗರ ಸಂಘಟನೆ ‘ನಾವಿಕ’ ಹಾಗೂ ಜಪಾನ್‌ನ ಟೋಕಿಯೊ ಕನ್ನಡ ಬಳಗ ಜಂಟಿಯಾಗಿ ಆಯೋಜಿಸಿರುವ ಎಂಟನೇ ನಾವಿಕೋತ್ಸವಕ್ಕೆ (Navikotsava) ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ವಿಶೇಷವೆಂದರೆ, ನಾವಿಕೋತ್ಸವದ ಜೊತೆಗೆ ಕನ್ನಡ ರಾಜ್ಯೋತ್ಸವ ಹಾಗೂ ಟೋಕಿಯೊ ಕನ್ನಡ ಬಳಗದ 25ನೇ ವಾರ್ಷಿಕೋತ್ಸವವೂ ಒಂದೇ ವೇದಿಕೆಯಲ್ಲಿ ಮೇಳೈಸಲಿವೆ.

‘ಕಿಜುನಾ’ — ವಿಶ್ವ ಕನ್ನಡಿಗರನ್ನು ಬೆಸೆಯುವ ಬಾಂಧವ್ಯ!

ಈ ಬಾರಿಯ ನಾವಿಕೋತ್ಸವಕ್ಕೆ ‘ಕಿಜುನಾ’ (KIZUNA – 絆) ಎಂಬ ಅರ್ಥಪೂರ್ಣ ಜಪಾನಿ ಹೆಸರನ್ನಿಡಲಾಗಿದೆ. ಜಪಾನಿ ಭಾಷೆಯಲ್ಲಿ ಕಿಜುನಾ ಎಂದರೆ ಬಾಂಧವ್ಯ, ಆತ್ಮೀಯ ಸಂಬಂಧ ಎಂದರ್ಥ.

ದೇಶಗಳು ಬೇರೆ, ಭಾಷೆಗಳು ಬೇರೆ, ಸಂಸ್ಕೃತಿಗಳು ಬೇರೆ. ಆದರೆ ಕನ್ನಡಿಗರ ಹೃದಯಗಳನ್ನು ಬೆಸೆಯುವ ಕನ್ನಡಾಭಿಮಾನ ಒಂದೇ! ಸಾವಿರಾರು ಮೈಲುಗಳ ದೂರದಲ್ಲಿದ್ದರೂ ಕನ್ನಡಿಗರನ್ನು ಒಂದೇ ಕುಟುಂಬದಂತೆ ಒಗ್ಗೂಡಿಸುವ ಸ್ನೇಹ, ಪ್ರೀತಿ ಹಾಗೂ ಬಾಂಧವ್ಯದ ಸಂಕೇತವೇ ಈ ‘ಕಿಜುನಾ’.

ಅಮೆರಿಕದಿಂದ 300 ಕನ್ನಡಿಗರು: ಡಾ. ಅನು ಭಟ್

ನಾವಿಕ ಸಂಸ್ಥೆಯ ಅಧ್ಯಕ್ಷೆ ಡಾ. ಅನು ಭಟ್ ಅವರು ಈ ಮಹೋತ್ಸವದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಅಮೆರಿಕದಿಂದ ಸುಮಾರು 300 ಕನ್ನಡಿಗರು ಜಪಾನ್‌ಗೆ ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಟೋಕಿಯೊ ಕನ್ನಡ ಬಳಗದೊಂದಿಗೆ ಜಂಟಿಯಾಗಿ ಈ ಮಹೋತ್ಸವವನ್ನು ಆಚರಿಸುತ್ತಿರುವುದು ನಾವಿಕ ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದೆ. ವಿಶ್ವದ ವಿವಿಧ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಕುಟುಂಬ ಸಮೇತರಾಗಿ ಭಾಗವಹಿಸಿ ಈ ಸಾಂಸ್ಕೃತಿಕ ಸಂಭ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಆತ್ಮೀಯ ಆಹ್ವಾನ ನೀಡಿದ್ದಾರೆ.

ವಿಶ್ವ ಕನ್ನಡಿಗರ ಸ್ವಾಗತಕ್ಕೆ ಟೋಕಿಯೊ ಸಜ್ಜು!

ಟೋಕಿಯೊ ಕನ್ನಡ ಬಳಗದ ಮಾಧ್ಯಮ ಸಂಯೋಜಕ ಗಣೇಶ ಮೇಗೂರು ಅವರು ಕಾರ್ಯಕ್ರಮದ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ್ದು, ತಮ್ಮ ಬಳಗದ ಬೆಳ್ಳಿ ಹಬ್ಬವನ್ನು ನಾವಿಕ ಸಂಸ್ಥೆಯೊಂದಿಗೆ ಜಂಟಿಯಾಗಿ ಆಚರಿಸುತ್ತಿರುವುದು ಜಪಾನ್ ಕನ್ನಡಿಗರಿಗೆ ವಿಶೇಷ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ.

ಕಳೆದ 25 ವರ್ಷಗಳಿಂದ ಜಪಾನ್‌ನಲ್ಲಿ ಕನ್ನಡ ಭಾಷೆ, ಕಲೆ, ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಉಳಿಸಿ ಬೆಳೆಸುತ್ತಿರುವ ಟೋಕಿಯೊ ಕನ್ನಡ ಬಳಗ, ವಿಶ್ವದ ವಿವಿಧ ದೇಶಗಳಿಂದ ಆಗಮಿಸುವ ಕನ್ನಡಿಗರನ್ನು ಆತ್ಮೀಯವಾಗಿ ಸ್ವಾಗತಿಸಲು ಉತ್ಸಾಹದಿಂದ ಸಜ್ಜಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಗಣ್ಯರು ಹಾಗೂ ಕಲಾವಿದರ ಸಮಾಗಮ

ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ವೇದಿಕೆಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರು ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟ ಡಾ. ಶ್ರೀನಾಥ್ ಹಾಗೂ ಅವರ ಪತ್ನಿ ಗೀತಾ ಶ್ರೀನಾಥ್ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಇದಲ್ಲದೆ, ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿ ಹಾಗೂ ಹಿರಿಯ ಐಎಎಸ್ ಅಧಿಕಾರಿ ಕೆ.ಎ. ದಯಾನಂದ ಮತ್ತು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಸೇರಿದಂತೆ ಹಲವು ಗಣ್ಯರನ್ನು ಈ ಮಹೋತ್ಸವಕ್ಕೆ ಆಹ್ವಾನಿಸಲಾಗಿದೆ.

ರಾಜಕೀಯ, ಸಾಹಿತ್ಯ, ಸಿನಿಮಾ, ಕಲೆ, ಸಂಸ್ಕೃತಿ ಹಾಗೂ ಮಾಧ್ಯಮ ಕ್ಷೇತ್ರಗಳ ಗಣ್ಯರ ಉಪಸ್ಥಿತಿಯ ನಿರೀಕ್ಷೆಯೊಂದಿಗೆ ಈ ಕಾರ್ಯಕ್ರಮ ವಿಶೇಷ ಮಹತ್ವ ಪಡೆದುಕೊಂಡಿದೆ.

ಜಪಾನ್ ನೆಲದಲ್ಲಿ ಕನ್ನಡದ ಸಾಂಸ್ಕೃತಿಕ ವೈಭವ

ಸಂಗೀತ, ನೃತ್ಯ, ನಾಟಕ, ಸಾಹಿತ್ಯ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಾವಿಕೋತ್ಸವದ ಪ್ರಮುಖ ಆಕರ್ಷಣೆಗಳಾಗಲಿವೆ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ವಾಣಿಜ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ವಿಚಾರ ವಿನಿಮಯಕ್ಕೂ ಅವಕಾಶ ಕಲ್ಪಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕನ್ನಡಿಗರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಯುವಪೀಳಿಗೆಗೆ ಸ್ಫೂರ್ತಿ ನೀಡಲಿದ್ದಾರೆ.

ಅಮೆರಿಕದಿಂದ ವಿಶ್ವದತ್ತ ನಾವಿಕದ ಕನ್ನಡಯಾತ್ರೆ!

2009ರಲ್ಲಿ ಸ್ಥಾಪನೆಯಾದ ‘ನಾವಿಕ’ (ನಾವು ವಿಶ್ವ ಕನ್ನಡಿಗರು) ಸಂಸ್ಥೆ ಕನ್ನಡ ಭಾಷೆ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪಸರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಬೆಸ ಸಂಖ್ಯೆಯ ವರ್ಷಗಳಲ್ಲಿ ಅಮೆರಿಕದಲ್ಲಿ ವಿಶ್ವ ಕನ್ನಡ ಸಮ್ಮೇಳನಗಳನ್ನು ಹಾಗೂ ಸಮ ಸಂಖ್ಯೆಯ ವರ್ಷಗಳಲ್ಲಿ ಅಮೆರಿಕದ ಹೊರಗಿನ ದೇಶಗಳಲ್ಲಿ ನಾವಿಕೋತ್ಸವಗಳನ್ನು ಆಯೋಜಿಸುವುದು ಈ ಸಂಸ್ಥೆಯ ವಿಶೇಷ ಪರಂಪರೆ.

2012, 2014 ಹಾಗೂ 2016ರಲ್ಲಿ ಬೆಂಗಳೂರಿನಲ್ಲಿ, 2018ರಲ್ಲಿ ಮೈಸೂರಿನಲ್ಲಿ, 2020ರಲ್ಲಿ ಕೋವಿಡ್ ಕಾರಣದಿಂದ ಆನ್‌ಲೈನ್‌ನಲ್ಲಿ, 2022ರಲ್ಲಿ ಕೀನ್ಯಾದ ನೈರೋಬಿಯಲ್ಲಿ ಹಾಗೂ 2024ರಲ್ಲಿ ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ನಾವಿಕೋತ್ಸವಗಳು ನಡೆದಿವೆ. ಈ ವಿಶ್ವಯಾತ್ರೆಯ ಮುಂದಿನ ಹೆಜ್ಜೆಯಾಗಿ 2026ರಲ್ಲಿ ಜಪಾನ್‌ನ ಟೋಕಿಯೊ ಎಂಟನೇ ನಾವಿಕೋತ್ಸವಕ್ಕೆ ಆತಿಥ್ಯ ವಹಿಸುತ್ತಿದೆ.

ನಾವಿಕೋತ್ಸವದ ಜೊತೆಗೆ ಒಂಬತ್ತು ದಿನಗಳ ಜಪಾನ್ ಪ್ರವಾಸ!

ನಾವಿಕೋತ್ಸವದಲ್ಲಿ ಭಾಗವಹಿಸುವ ಕನ್ನಡಿಗರಿಗಾಗಿ ನವೆಂಬರ್ 21ರಿಂದ 29ರವರೆಗೆ ಎಂಟು ರಾತ್ರಿ, ಒಂಬತ್ತು ದಿನಗಳ ಜಪಾನ್ ಪ್ರವಾಸವನ್ನೂ ಆಯೋಜಿಸಲಾಗಿದೆ.

ನವೆಂಬರ್ 21ರಂದು ಟೋಕಿಯೊಗೆ ಆಗಮಿಸುವ ಕನ್ನಡಿಗರು, 22ರಂದು ನಾವಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ. 23ರಂದು ಟೋಕಿಯೊ ನಗರದ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲಿದ್ದು, 24ರಂದು ವಿಶ್ವವಿಖ್ಯಾತ ಮೌಂಟ್ ಫುಜಿ ಪರ್ವತ ಹಾಗೂ ಹಕೋನೆ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.

ನವೆಂಬರ್ 25ರಂದು ಎರಡನೇ ಮಹಾಯುದ್ಧದ ಇತಿಹಾಸಕ್ಕೆ ಸಾಕ್ಷಿಯಾದ ಹಿರೋಷಿಮಾ ಹಾಗೂ ಮಿಯಾಜಿಮಾ ದ್ವೀಪವನ್ನು ವೀಕ್ಷಿಸಿ, ಬುಲೆಟ್ ರೈಲಿನಲ್ಲಿ ಒಸಾಕಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. 26ರಂದು ಐತಿಹಾಸಿಕ ದೇವಾಲಯಗಳಿಗೆ ಪ್ರಸಿದ್ಧವಾದ ಕ್ಯೋಟೊ ನಗರಕ್ಕೆ ಭೇಟಿ ನೀಡಲಿದ್ದಾರೆ.

ನವೆಂಬರ್ 27ರಂದು ಒಸಾಕಾ ಹಾಗೂ ನಾರಾದ ಪ್ರಸಿದ್ಧ ಜಿಂಕೆ ಉದ್ಯಾನವನವನ್ನು ವೀಕ್ಷಿಸಲಿದ್ದು, 28ರಂದು ಬುಲೆಟ್ ರೈಲಿನಲ್ಲಿ ಟೋಕಿಯೊಗೆ ಮರಳಲಿದ್ದಾರೆ. ನವೆಂಬರ್ 29ರಂದು ತಮ್ಮ ಮುಂದಿನ ಪ್ರಯಾಣಕ್ಕೆ ತೆರಳಲಿದ್ದಾರೆ. ಜಪಾನ್‌ನ ಅತ್ಯಾಧುನಿಕ ತಂತ್ರಜ್ಞಾನ, ಬುಲೆಟ್ ರೈಲು, ಐತಿಹಾಸಿಕ ಪರಂಪರೆ ಹಾಗೂ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಈ ಪ್ರವಾಸ ಅವಕಾಶ ಕಲ್ಪಿಸಲಿದೆ.

ಜಪಾನ್‌ನಲ್ಲಿ ಮೊಳಗಲಿದೆ ಕನ್ನಡದ ಡಿಂಡಿಮ!

ಶಿಸ್ತು, ಸಮಯಪ್ರಜ್ಞೆ ಹಾಗೂ ತಂತ್ರಜ್ಞಾನಕ್ಕೆ ಹೆಸರಾದ ಜಪಾನ್‌ನಲ್ಲಿ ಕನ್ನಡಿಗರ ಭಾಷಾಭಿಮಾನ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸೊಬಗು ಅನಾವರಣಗೊಳ್ಳಲಿದೆ. ರಾಷ್ಟ್ರಕವಿ ಕುವೆಂಪು ಅವರ ಅಮರ ಸಂದೇಶವಾದ “ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ಆಶಯಕ್ಕೆ ಈ ನಾವಿಕೋತ್ಸವ ಜೀವಂತ ಉದಾಹರಣೆಯಾಗಲಿದೆ.

ನಾಡು ಬೇರೆಯಾದರೂ ನುಡಿ ಕನ್ನಡ, ದೇಶ ಬೇರೆಯಾದರೂ ಹೃದಯ ಕನ್ನಡ!

ಉದಯರವಿಯ ನಾಡಿನಲ್ಲಿ ಕನ್ನಡದ ಡಿಂಡಿಮ ಮೊಳಗಲಿ, ವಿಶ್ವ ಕನ್ನಡಿಗರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿ!