ಬೆಂಗಳೂರು: ಸಾವಿರಾರು ಕೋಟಿ ರೂಪಾಯಿ ಬ್ಯಾಂಕ್ ಸಾಲವನ್ನು ಮರುಪಾವತಿಸಲು ವಿಫಲರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ (Naseer Ahmad) ಅವರನ್ನು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಅಧಿಕೃತವಾಗಿ ದಿವಾಳಿ ಎಂದು ಘೋಷಿಸಿದೆ.
ಎನ್‌ಸಿಎಲ್‌ಟಿಯ ಈ ಮಹತ್ವದ ಆದೇಶದಿಂದಾಗಿ ನಸೀರ್ ಅಹ್ಮದ್ ಅವರು ತಮ್ಮ ಎಂಎಲ್‌ಸಿ ಸ್ಥಾನದಿಂದ ಅನರ್ಹಗೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ. ನ್ಯಾಯಾಂಗ ಸದಸ್ಯ ಸುನಿಲ್ ಕುಮಾರ್ ಅಗರ್ವಾಲ್ ಮತ್ತು ತಾಂತ್ರಿಕ ಸದಸ್ಯ ರಾಧಾಕೃಷ್ಣ ಶ್ರೀಪಾದ ಅವರನ್ನೊಳಗೊಂಡ ಎನ್‌ಸಿಎಲ್‌ಟಿಯ ಬೆಂಗಳೂರು ಪೀಠವು ಜೂನ್ 8ರಂದು ಈ ಆದೇಶ ಹೊರಡಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್‌ಗಳ ಒಕ್ಕೂಟವು ದಿವಾಳಿತನ ಸಂಹಿತೆ (IBC)-2016ರ ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿರುವ ಮೆಸರ್ಸ್ ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್ ಕಂಪನಿಯು ಪಡೆದಿದ್ದ 1,454 ಕೋಟಿಗೂ ಅಧಿಕ ಮೊತ್ತದ ಬಾಕಿ ಸಾಲದ ವಸೂಲಾತಿಗಾಗಿ ಕಳೆದ 2019ರಿಂದಲೇ ಈ ಕಾನೂನು ಪ್ರಕ್ರಿಯೆ ನಡೆದಿತ್ತು.
ಧರ್ಮಸ್ಥಳ ʼಬುರುಡೆʼ ನಾಟಕ: ಪ್ರಕಾಶ್ ರಾಜ್ ಪಾತ್ರಧಾರಿ?
ನಸೀರ್ ಅಹ್ಮದ್ ಅವರು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸ್ಕಾಟ್ಸ್ ಗಾರ್ಮೆಂಟ್ಸ್ ಕಂಪನಿಗೆ ಪಡೆದಿದ್ದ ಭಾರಿ ಮೊತ್ತದ ಸಾಲಕ್ಕೆ ಅವರ ಕುಟುಂಬದ ಸದಸ್ಯರೇ ವೈಯಕ್ತಿಕ ಜಾಮೀನುದಾರರಾಗಿದ್ದರು. ಹೀಗಾಗಿ, ಕಂಪನಿಯ ಹಿಂದಿನ ನಿರ್ದೇಶಕರಾಗಿದ್ದ ನಸೀರ್ ಅಹ್ಮದ್ ಅವರ ಪತ್ನಿ ನುಝತ್ ಆಯಿಷಾ ನಸೀರ್ ಮತ್ತು ಮಗ ಅವೈಜ್ ಅಹ್ಮದ್ ಅವರನ್ನೂ ಸಹ ಎನ್‌ಸಿಎಲ್‌ಟಿ ಜಂಟಿಯಾಗಿ ದಿವಾಳಿ ಎಂದು ಘೋಷಿಸಿದೆ. ಇದರಿಂದಾಗಿ ಇಡೀ ಕುಟುಂಬವೇ ಈಗ ಆರ್ಥಿಕ ಮತ್ತು ಕಾನೂನಾತ್ಮಕವಾಗಿ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.
ಎಂಎಲ್‌ಸಿ ಸ್ಥಾನದಿಂದ ಅನರ್ಹ ಸಾಧ್ಯತೆ
ಎನ್‌ಸಿಎಲ್‌ಟಿ ಆದೇಶದ ಬೆನ್ನಲ್ಲೇ ನಸೀರ್ ಅಹ್ಮದ್ ಅವರ ರಾಜಕೀಯ ಭವಿಷ್ಯಕ್ಕೆ ಹಿನ್ನಡೆಯಾಗಿದೆ. ಐಬಿಸಿ (IBC) ನಿಯಮಾವಳಿಗಳ ಸೆಕ್ಷನ್ 140 ಮತ್ತು ಭಾರತೀಯ ಸಂವಿಧಾನದ ಆರ್ಟಿಕಲ್ 191(1)(ಸಿ) ಅಡಿಯಲ್ಲಿ, ನ್ಯಾಯಾಲಯ ಅಥವಾ ಸಕ್ಷಮ ಪ್ರಾಧಿಕಾರದಿಂದ ದಿವಾಳಿ ಎಂದು ಘೋಷಿಸಲ್ಪಟ್ಟ ಯಾವುದೇ ವ್ಯಕ್ತಿಯು ಶಾಸಕ ಅಥವಾ ಎಂಎಲ್‌ಸಿ ಹುದ್ದೆಯಲ್ಲಿ ಮುಂದುವರಿಯಲು ಕಾನೂನುಬದ್ಧವಾಗಿ ಅರ್ಹನಾಗಿರುವುದಿಲ್ಲ. ಈ ತಾಂತ್ರಿಕ ಕಾರಣದಿಂದಾಗಿ ಅವರು ತಮ್ಮ ಜನಪ್ರತಿನಿಧಿ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.
ಇನ್ನು ಇತ್ತೀಚೆಗಷ್ಟೇ ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಯ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ, ನಸೀರ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದಲೂ ವಜಾಗೊಳಿಸಲಾಗಿತ್ತು.
ಕೇಂದ್ರ ಜಲಶಕ್ತಿ ಸಚಿವರಿಂದ ತುಂಗಭದ್ರಾ ಅಣೆಕಟ್ಟು ನೂತನ ಗೇಟ್ ಉದ್ಘಾಟನೆ: ಸಿಎಂ ಡಿ.ಕೆ. ಶಿವಕುಮಾರ್
ಇನ್ಮುಂದೆ ಹೊಸ ಸಾಲ ಪಡೆಯುವಂತಿಲ್ಲ
ಪ್ರಸ್ತುತ ಪ್ರಕರಣವನ್ನು ನಿರ್ವಹಿಸಲು ಎನ್‌ಸಿಎಲ್‌ಟಿಯು ವೃತ್ತಿಪರರಾದ ರವೀಂದ್ರ ಬೆಲೆಯೂರ್ ಅವರನ್ನು ದಿವಾಳಿತನ ಟ್ರಸ್ಟಿ ಆಗಿ ನೇಮಕ ಮಾಡಿದೆ. ಈ ಟ್ರಸ್ಟಿಯ ಲಿಖಿತ ಅನುಮತಿಯಿಲ್ಲದೆ ನಸೀರ್ ಅಹ್ಮದ್ ಇನ್ಮುಂದೆ ಯಾವುದೇ ಹೊಸ ಸಾಲವನ್ನು ಪಡೆಯುವಂತಿಲ್ಲ. ಒಂದು ವೇಳೆ ಅವರು ಯಾವುದೇ ಆರ್ಥಿಕ ಅಥವಾ ವಾಣಿಜ್ಯ ವಹಿವಾಟುಗಳನ್ನು ನಡೆಸಬೇಕಾದರೂ, ತಾನು ಕಾನೂನುಬದ್ಧವಾಗಿ ದಿವಾಳಿ ಎಂದು ಘೋಷಿತನಾದ ವ್ಯಕ್ತಿ ಎಂಬುದನ್ನು ಪಾಲುದಾರರಿಗೆ ಮುಂಚಿತವಾಗಿಯೇ ಕಡ್ಡಾಯವಾಗಿ ತಿಳಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ, ಟ್ರಸ್ಟಿಯ ಪೂರ್ವಾನುಮತಿ ಇಲ್ಲದೆ ದೇಶ ತೊರೆದು ವಿದೇಶ ಪ್ರವಾಸ ಕೈಗೊಳ್ಳುವಂತೆಯೂ ಇಲ್ಲ ಎಂದು ಆದೇಶದಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ.