ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ಬೆಂಗಳೂರಿನ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರದ ನಡುವಿನ ಹಳದಿ ಮಾರ್ಗದ ಮೆಟ್ರೋ (Namma Metro Yellow Line) ಸಂಚಾರಕ್ಕೆ ಚಾಲನೆ ನೀಡಿದರು. ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ಹಳದಿ ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿದರು. ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, (CM Siddaramaiah) ಕೇಂದ್ರ ಸಚಿವರಾದ ಮನೋಹರ್ ಲಾಲ್ ಖಟ್ಟರ್, ಶೋಭಾ ಕರಂದ್ಲಾಜೆ, ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದರಾದ ಡಾ.ಸಿ.ಎನ್.ಮಂಜುನಾಥ್, ತೇಜಸ್ವಿ ಸೂರ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ಉಪಸ್ಥಿತರಿದ್ದರು.
ಆರ್.ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವೆ ಮೂರು ಮೆಟ್ರೋ ರೈಲುಗಳು ಸಂಚಾರ ಮಾಡಲಿದ್ದು, ಮೆಟ್ರೋದ ಹಳದಿ ಮಾರ್ಗ 19.15 ಕಿಲೋ ಮೀಟರ್ ಉದ್ದವಿದೆ. ಇನ್ನು ಈ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳು ಇವೆ. ಆರ್.ವಿ.ರೋಡ್, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಹೊಂಗಸಂದ್ರ, ಕೂಡ್ಲುಗೇಟ್, ಸಿಂಗಸಂದ್ರ, ಹೊಸೂರು ರಸ್ತೆ, ಬೆರಟೇನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ ಕೋನಪ್ಪ ಅಗ್ರಹಾರ, ಹುಸ್ಕೂರು ರಸ್ತೆ, ಹೆಬ್ಬಗೋಡಿ, ಬೊಮ್ಮಸಂದ್ರ.
ಸದ್ಯ ಪ್ರತಿ 20 ರಿಂದ 25 ನಿಮಿಷಗಳ ಅಂತರದಲ್ಲಿ ಒಂದು ಮೆಟ್ರೋ ಸಂಚಾರ ಇರಲಿದೆ. ನಿತ್ಯ 20-30 ಸಾವಿರ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚಾರ ಮಾಡಲಿದ್ದಾರೆ. 2026ರ ವೇಳೆಗೆ 12 ರೈಲುಗಳು ಹಳದಿ ಮಾರ್ಗಕ್ಕೆ ಸೇರ್ಪಡೆ ಆಗಲಿದೆ. ಆ ಮೂಲಕ ಹಳದಿ ಮಾರ್ಗದಲ್ಲಿ 15 ಮೆಟ್ರೋಗಳು ಓಡಾಡಲಿವೆ. ಅಂತೆಯೇ ಮುಂಬರುವ ದಿನಗಳಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಲಿದ್ದು, 3.5 ಲಕ್ಷ ಮಂದಿ ಪ್ರಯಾಣಿಕರು ಪ್ರಯಾಣಿಸಬಹುದು ಎಂದು ಬಿಎಂಆರ್ಸಿಎಲ್ ಅಂದಾಜಿಸಿದೆ.
ಹಳದಿ ಮಾರ್ಗ ಮೆಟ್ರೋದ ಪ್ರಯಾಣ ದರ
ಆರ್ ವಿ ರಸ್ತೆಯಿಂದ ರಾಗಿಗುಡ್ಡದ ವರೆಗೆ 10 ರೂಪಾಯಿ.
ಆರ್ ವಿ ರಸ್ತೆ-ಜಯದೇವ 10 ರೂಪಾಯಿ.
ಆರ್ ವಿ ರಸ್ತೆ- BTM ಲೇಔಟ್ 20 ರೂ.
ಆರ್ ವಿ ರಸ್ತೆ -ಬೊಮ್ಮನಹಳ್ಳಿ 30 ರೂ.
ಆರ್ ವಿ ರಸ್ತೆ -ಕೂಡ್ಲೂಗೇಟ್ 40 ರೂ.
ಆರ್ ವಿ ರಸ್ತೆ -ಸಿಂಗಸಂದ್ರ 50 ರೂ.
ಆರ್ ವಿ ರಸ್ತೆ -ಎಲೆಕ್ಟ್ರಾನಿಕ್ ಸಿಟಿ 60 ರೂ.
ಆರ್ ವಿ ರಸ್ತೆ -ಬೊಮ್ಮಸಂದ್ರ 60 ರೂ.
ಸಿಲ್ಕ್ ಬೋರ್ಡ್- ಬೊಮ್ಮಸಂದ್ರ 60 ರೂ.
ವಿಶೇಷವಾಗಿ ಪ್ರತಿಷ್ಠಿತ ಜಯದೇವ ಆಸ್ಪತ್ರೆಗೆ ಸುಲಭವಾಗಿ ತಲುಪಬಹುದಾಗಿದೆ. ಇನ್ಫೋಸಿಸ್ ಹಾಗೂ ಬಯೋಕಾನ್ ಸಂಸ್ಥೆಗೆ ತೆರಳುವ ಸಾವಿರಾರು ಉದ್ಯೋಗಿಗಳಿಗೆ ಸಂಚಾರ ಸುಲಭವಾಗಲಿದೆ. ಬೆಂಗಳೂರಿನಿಂದ ತಮಿಳುನಾಡಿನ ಹೊಸೂರಿಗೆ ತೆರಳುವವರಿಗೂ ಸಾಕಷ್ಟು ಅನುಕೂಲವಾಗಲಿದ್ದು, ಸಂಚಾರ ದಟ್ಟಣೆ ತಗ್ಗುವ ನಿರೀಕ್ಷೆ ಇದೆ.
ಇದನ್ನೂ ಓದಿ: Namma Metro Phase 3: ನಮ್ಮ ಮೆಟ್ರೋ 3ನೇ ಹಂತದ ಕಾಮಗಾರಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ