ಬೆಂಗಳೂರು, ಡಿ.31: ಹೊಸ ವರ್ಷದ (New Year 2026) ಸ್ವಾಗತಕ್ಕೆ ಬೆಂಗಳೂರಿಗರು (Bengaluru) ಸಜ್ಜಾಗುತ್ತಿದ್ದಾರೆ. ಇಂದು ರಾತ್ರಿ ಯುವಜನ ಪಾರ್ಟಿ ಮಾಡಲು ಪಬ್, ರೆಸ್ಟೋರೆಂಟ್ಗಳು, ಖಾಸಗಿ ಅಪಾರ್ಟ್‌ಮೆಂಟ್‌ಗಳಲ್ಲಿಯೂ ಜಮಾಯಿಸಲಿದ್ದಾರೆ. ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಹೊಸ ವರ್ಷದ ಸಂಭ್ರಮ (New year celebration) ಮುಗಿಲು ಮುಟ್ಟಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ (Police Department) ಹಲವು ಮುನ್ನೆಚ್ಚರಿಕೆ ವಹಿಸಿದೆ. ಎಲ್ಲೆಡೆ ಬಿಗಿ ಭದ್ರತೆ ಒದಗಿಸಲಾಗಿದೆ. ಇದರ ನಡುವೆ ಬೆಂಗಳೂರಿನ ಪ್ರಮುಖ ರಸ್ತೆಗಳ ಸಂಚಾರ ಕೂಡ ಬಂದ್ ಆಗಲಿದೆ.
ಹೊಸ ವರ್ಷದ ಹಿಂದಿನ ದಿನದಿಂದಲೇ ಕೆಲವು ರಸ್ತೆಗಳ ಸಂಚಾರ ಬಂದ್ ಆಗಲಿದೆ. ಭದ್ರತಾ ದೃಷ್ಟಿಯಿಂದ ನಗರದ ಒಳಭಾಗದ ಕೆಲ ರಸ್ತೆಗಳನ್ನು ಬಂದ್ ಮಾಡಿದ್ದು, ಪಾರ್ಕಿಂಗ್ ನಿಷೇಧ ಮಾಡಲಾಗಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆಗಳಲ್ಲಿ ರಾತ್ರಿ 10 ರಿಂದ ಮುಂಜಾನೆ 3 ಗಂಟೆವರೆಗೆ ಸಂಚಾರ ಬಂದ್ ಆಗಲಿದೆ.
ಸಂಜೆಯಿಂದ ನಾಳೆವರೆಗೂ ಪಾರ್ಕಿಂಗ್ ನಿಷೇಧ
ಸಂಜೆ 4 ಗಂಟೆಯಿಂದ ಬೆಳಗ್ಗೆ 3 ಗಂಟೆವರೆಗೆ ಈ ರಸ್ತೆಯಲ್ಲಿ ಪಾರ್ಕಿಂಗ್ ನಿಷೇಧ ಮಾಡಲಾಗಿದೆ. ನಗರದ ಬಹುತೇಕ ಎಲ್ಲಾ ಮಾಲ್ಗಳು ಹಾಗೂ ಜನನಿಬಿಡ ಪ್ರದೇಶದಲ್ಲಿ ಕ್ಯಾಬ್ ಪಿಕ್, ಡ್ರಾಪ್ ಪಾಯಿಂಟ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸರು ಗುರುತಿಸಿರುವ ಜಾಗವನ್ನು ಪಿಕಪ್, ಡ್ರಾಪ್ಗಾಗಿ ಬಳಸುವಂತೆ ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ.
New Year 2026: ಜನವರಿ ಒಂದನ್ನೇ ಹೊಸ ವರ್ಷವನ್ನಾಗಿ ಆಚರಿಸೋದು ಏಕೆ? ಇದರ ಹಿನ್ನಲೆ ಏನು?
ಫ್ಲೈ ಓವರ್‌ಗಳು ಬಂದ್
ಇವುಗಳ ಜೊತೆಗೆ ನಗರದ 50 ಪ್ರಮುಖ ಫ್ಲೈ ಓವರ್ ಗಳನ್ನು 31ರ ರಾತ್ರಿ 11 ರಿಂದ ಜನವರಿ 1ರ 6 ಗಂಟೆವರೆಗೆ ಬಂದ್ ಮಾಡಲಾಗುತ್ತದೆ. ಏರ್ಪೋರ್ಟ್ ಫ್ಲೈ ಓವರ್ಗಳಲ್ಲಿ ಈ ಅವಧಿಯಲ್ಲಿ ಕಾರುಗಳಿಗೆ ಮಾತ್ರ ಅವಕಾಶ ನೀಡಲಾಗುತ್ತೆ. ಉಳಿದಂತೆ ದ್ವಿಚಕ್ರ ವಾಹನ, ಇತರೆ ವಾಹನಗಳಿಗೂ ಪ್ರವೇಶ ನಿರ್ಬಂಧ ಮಾಡಲಾಗಿದೆ.
ಸಂಚಾರಿ ಪೊಲೀಸರು ನಗರದಲ್ಲಿ ನಿನ್ನೆ ರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಹೊಸ ವರ್ಷದ ಹೊಸ್ತಿಲಲ್ಲಿ ಎಣ್ಣೆ ಏಟಲ್ಲಿ ವಾಹನ ಚಲಾಯಿಸಿದವರು ಖಾಕಿ ಬಲೆಗೆ ಬಿದ್ದಿದ್ದಾರೆ. ನಗರದಲ್ಲಿ ಒಟ್ಟು 166 ತಪಾಸಣೆ ಚೆಕ್ ಪೋಸ್ಟ್ಗಳಲ್ಲಿ ಡಿಡಿ ಚೆಕ್ ನಡೆದಿದೆ. ನಿನ್ನೆ ರಾತ್ರಿ ನಗರದಲ್ಲಿ 3 ಸಾವಿರಕ್ಕೂ ಅಧಿಕ ವಾಹನಗಳ ತಪಾಸಣೆ ನಡೆದಿದ್ದು, ಈ ಪೈಕಿ ಕುಡಿದು ವಾಹನ ಚಲಾಯಿಸಿದ 450 ಮಂದಿ ವಿರುದ್ಧ ಡಿಡಿ ಪ್ರಕರಣ ದಾಖಲಾಗಿದೆ.