ಬೆಂಗಳೂರು: ತಿಂಗಳಿಗೆ ₹15,000 ಗೌರವಧನ ನಿಗದಿ ಸೇರಿ ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಳಿಯನ್ನೂ ಲೆಕ್ಕಿಸದೆ ಹಸುಗೂಸುಗಳೊಂದಿಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಶಾ ತಾಯಂದಿರು ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ (ASHA workers protest) ನಡೆಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಸರ್ಕಾರವು ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಕೂಡಲೇ ಈಡೇರಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಸಿದ್ದಾರೆ.
ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಹಸುಗೂಸುಗಳೊಂದಿಗೆ ಚಳಿಯಲ್ಲಿ ಮಲಗಿರುವ ಆಶಾ ತಾಯಂದಿರ ಕಣ್ಣೀರು ಮುಖ್ಯಮಂತ್ರಿಗಳಿಗೆ ಕಾಣುತ್ತಿಲ್ಲವೇ?, ಕೋವಿಡ್ನಂತಹ ಸಂಕಷ್ಟದ ಕಾಲದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಜನರ ಜೀವ ಉಳಿಸಿದವರು ಇವರು. ಇಂದು ಅದೇ ತಾಯಂದಿರು ಫ್ರೀಡಂ ಪಾರ್ಕ್ನ ಕೊರೆಯುವ ಚಳಿಯಲ್ಲಿ ಬೀದಿಯಲ್ಲೇ ಮಲಗುವ ದುಸ್ಥಿತಿ ಬಂದಿದೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಇದಕ್ಕೆ ಕಾರಣ ಕಾಂಗ್ರೆಸ್ ಸರ್ಕಾರ ತನ್ನದೇ 2023ರ ಪ್ರಣಾಳಿಕೆಯ ಭರವಸೆಗಳನ್ನು ಮರೆತು ಮಾತು ತಪ್ಪಿರುವುದು ಎಂದು ಮುಖ್ಯಮಂತ್ರಿ ಅವರ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ. ತಮ್ಮದೇ ಪ್ರಣಾಳಿಕೆಯಲ್ಲಿದ್ದ ಭರವಸೆಗಳನ್ನು ಅವರು ಪುಟ ಸಹಿತ ನೆನಪಿಸಿದ್ದಾರೆ:
- ₹8,000 ವರೆಗೆ ನಿಗದಿತ ಮಾಸಿಕ ಗೌರವಧನ ನೀಡುವುದಾಗಿ ಹೇಳಿದ್ದೀರಿ, ಆದರೆ ಇಂದಿಗೂ ₹5,000ದಲ್ಲೇ ಉಳಿದಿದೆ!
- ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ 50% ಸಬ್ಸಿಡಿ ನೀಡುವ ಭರವಸೆಯನ್ನು ಸಂಪೂರ್ಣವಾಗಿ ಮರೆತಿದ್ದೀರಿ!
- ಅಂಗನವಾಡಿ ಕಾರ್ಯಕರ್ತೆಯರಿಗೆ ₹3 ಲಕ್ಷ ನಿವೃತ್ತಿ ಪರಿಹಾರ ಘೋಷಿಸಿದ ನೀವು, ಆಶಾ ಕಾರ್ಯಕರ್ತೆಯರನ್ನು ಮಾತ್ರ ಬರಿಗೈಯಲ್ಲಿ ನಿವೃತ್ತರಾಗುವಂತೆ ಕೈಬಿಟ್ಟಿದ್ದೀರಿ!
ಸ್ಕೂಟರ್ ಸಬ್ಸಿಡಿ ನೀಡುವುದು ಇರಲಿ ಮುಖ್ಯಮಂತ್ರಿಗಳೇ; ಮೊದಲು ಈ ತಾಯಂದಿರಿಗೆ ಗೌರವಯುತವಾಗಿ ಬದುಕಲು ₹15,000 ಗೌರವಧನ ಕೊಡಿ, ಜೊತೆಗೆ ಅವರಿಗೆ ಸಲ್ಲಬೇಕಾದ ₹5 ಲಕ್ಷ ನಿವೃತ್ತಿ ಪರಿಹಾರವನ್ನು ಮಂಜೂರು ಮಾಡಿ. ಮಾತು ತಪ್ಪುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ಒತ್ತಾಯಿಸಿದ್ದಾರೆ.