ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Cabinet Expansion: ಸಚಿವ ಸ್ಥಾನಕ್ಕಾಗಿ ಯಾವುದೇ ಶಾಸಕರ ಬೆಂಬಲಿಗರು ಬರಬಾರದು: ಸಿಎಂ ಡಿ ಕೆ ಶಿವಕುಮಾರ್ ಸೂಚನೆ

ಶಾಸಕ ವಿಜಯಾನಂದ ಕಾಶಪ್ಪನವರ್ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಅವರ ಬೆಂಬಲಿಗರು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಭಾನುವಾರ ಮನವಿ ಸಲ್ಲಿಸಿದ್ದಾರೆ. ಅವರ ಬೆಂಬಲಿಗರನ್ನು ಉದ್ದೇಶಿಸಿ ಮುಖ್ಯಮಂತ್ರಿ ಮಾತನಾಡಿದ್ದು, 33 ಸಚಿವ ಸ್ಥಾನಗಳಿವೆ, ಅದರಲ್ಲಿ ಜಾತಿ, ಪ್ರದೇಶ ಎಲ್ಲವನ್ನೂ ನೋಡಬೇಕಲ್ಲವೇ? ಇದರ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

ಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು, ಜು. 05: "ವಿಜಯಾನಂದ ಕಾಶಪ್ಪನವರ ಬೆಂಬಲಿಗರ, ಅಭಿಮಾನಿಗಳ ಭಾವನೆಯನ್ನು ವರಿಷ್ಠರಿಗೆ ತಿಳಿಸುತ್ತೇನೆ. ಯಾರೂ ಸಹ ಬೆಂಬಲಿಗರ ನಿಯೋಗ ಕರೆದುಕೊಂಡು ಬಂದು ಸಚಿವ ಸ್ಥಾನಕ್ಕೆ (Cabinet Expansion) ಒತ್ತಡ ಹಾಕಬಾರದು ಎಂದು ಮನವಿ ಮಾಡಿದ್ದೇವೆ" ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಶಾಸಕ ವಿಜಯಾನಂದ ಕಾಶಪ್ಪನವರ್ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಅವರ ಬೆಂಬಲಿಗರು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು. ಅವರ ಬೆಂಬಲಿಗರನ್ನು ಉದ್ದೇಶಿಸಿ ಮುಖ್ಯಮಂತ್ರಿಯವರು ಮಾತನಾಡಿದರು.

"ನನಗೂ ಯುವಕರಿಗೆ ಒಳ್ಳೆಯದಾಗಲಿ ಎನ್ನುವ ಅಭಿಲಾಷೆಯಿದೆ. ಪಕ್ಷದ ನಾಯಕರು ಯಾವ ರೀತಿ ನಿರ್ಧಾರ ಮಾಡುತ್ತಾರೆ ಎಂಬುದು ನಮಗೆ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತದೆ. ಮೊದಲ ಸಲ‌ ಗೆದ್ದವರಿಂದ ಹಿಡಿದು 8-9 ಸಲ ಗೆದ್ದವರಿಗೂ ಸಚಿವರಾಗಬೇಕು ಎನ್ನುವ ಅಭಿಲಾಷೆ ಇದ್ದೇ ಇರುತ್ತದೆ. ಆದರೆ ನಾವು ಪಕ್ಷದ ಚೌಕಟ್ಟಿನಲ್ಲಿ ಒಂದು ನಿಯಮಗಳನ್ನ ಪಾಲನೆ ಮಾಡಬೇಕಾಗುತ್ತದೆ" ಎಂದರು.

ಬೆಂಬಲಿಗರ ನಿಯೋಗ ಬರಬಾರದಾಗಿ ಮನವಿ

"ದಯವಿಟ್ಟು ಇನ್ನು ಯಾವ ಬೆಂಬಲಿಗರ ನಿಯೋಗವು ಸಚಿವ ಸ್ಥಾನ ಬೇಡಿಕೆಯೊಂದಿಗೆ ಬರಬಾರದು ಎಂದು ಮನವಿ ಮಾಡುತ್ತೇನೆ. 2028 ಕ್ಕೆ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮೆಲ್ಲರ ಗುರಿಯಾಗಬೇಕು. 140 ಜನ ಶಾಸಕರಿಗೂ ಮುಖ್ಯಮಂತ್ರಿಯಾಗಬೇಕು ಎನ್ನುವ ಆಸೆಯಿರುತ್ತದೆ. ಆದರೆ ಆಗುವುದು ಒಬ್ಬರೇ ಅಲ್ಲವೇ?" ಎಂದರು.

"33 ಸಚಿವ ಸ್ಥಾನಗಳಿವೆ ಅದರಲ್ಲಿ ಜಾತಿ, ಪ್ರದೇಶ ಎಲ್ಲವನ್ನೂ ನೋಡಬೇಕಲ್ಲವೇ? ಇದರ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ನಾನು ಸಹ ಚಿಕ್ಕವಯಸ್ಸಿನಲ್ಲೇ ಮಂತ್ರಿ ಪದವಿ ಪಡೆದವನು. ನನಗೂ ಯುವಕರಿಗೆ ನೀಡಬೇಕು ಎನ್ನುವ ಅಭಿಲಾಷೆಯಿದೆ. ಎಲ್ಲರೂ ತಾಳ್ಮೆಯಿಂದ ಇರಬೇಕು" ಎಂದರು‌.

"ವಿಜಯಾನಂದ ಕಾಶಪ್ಪನವರು ನನ್ನ ಆತ್ಮೀಯ ಸ್ನೇಹಿತರು, ಪರಿಚಯಸ್ಥರು. ಅವರ ಪರವಾಗಿ ಬೆಂಬಲಿಗರು ಬಂದಿರುವುದು ಸಂತೋಷದ ವಿಚಾರ. ಅವರ ತಂದೆಯವರೂ ಸಹ ನನ್ನ ಜೊತೆ ಶಾಸಕರಾಗಿ, ಸಚಿವರಾಗಿದ್ದರು. ಅವರ ತಾಯಿಯವರೂ ಶಾಸಕರಾಗಿದ್ದರು.‌ ಆ ಚುನಾವಣೆಗೆ ನಾನು ಬಂದು ಕೆಲಸ ಮಾಡಿದ್ದೆ" ಎಂದು ಹೇಳಿದರು.

ಕಾಶಪ್ಪನವರ ಸಮಾಜದ ಋಣ ತೀರಿಸುತ್ತಿದ್ದಾರೆ

"ವಿಜಯಾನಂದ ಕಾಶಪ್ಪನವರ ಹೋರಾಟ, ಸಂಘಟನೆ, ಪಾದಯಾತ್ರೆ ಎಲ್ಲದರ ಅರಿವು ನಮಗಿದೆ. ಲಿಂಗಾಯತ ಅಭಿವೃದ್ಧಿ ನಿಗಮದ ಜವಾಬ್ದಾರಿ ನೀಡಿ ಸಮಾಜದ ಋಣ ತೀರಿಸಲಿ ಎಂದು ಹೊಣೆ ನೀಡಲಾಯಿತು. ಅವರು ಸಮಾಜದ ಋಣ ತೀರಿಸುತ್ತಿದ್ದಾರೆ" ಎಂದರು‌.

SIR in Karnataka: ರಾಮನಗರ SIR ಪ್ರಕ್ರಿಯೆಯಲ್ಲಿ ಬೃಹತ್ ಅಕ್ರಮ; ಪ್ರಲ್ಹಾದ್‌ ಜೋಶಿ ಆರೋಪ

"ನಿಮ್ಮ ಭಾಗದಲ್ಲಿ ನೀರಾವರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನಿಮ್ಮಲ್ಲಿ ಮಧ್ಯಪ್ರದೇಶ ಮಾದರಿ ಸ್ಪಿಂಕ್ಲರ್ ಯೋಜನೆ ಮಾಡಬೇಕು ಎಂದು ಹೇಳಿದ್ದಾರೆ. ಅದರ ಬಗ್ಗೆ ನಾವು ಗಮನ ಹರಿಸಲಾಗುವುದು. ಇಡೀ ಜಿಲ್ಲೆಯಲ್ಲಿ ಒಗ್ಗಟ್ಟಿನಿಂದ ಇಡೀ ಸಮಾಜವನ್ನು ತೆಗೆದುಕೊಂಡು ಹೋಗುತ್ತಿದ್ದೀರಿ. ಇದೇ ರೀತಿ ಮುಂದುವರೆಯಲಿ" ಎಂದರು.