ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶಿವ-ವಿಷ್ಣುವಿನ ಹೆಸರಿನಲ್ಲಿ ಜಗಳ ಸಲ್ಲ, ತಲೆ ಪ್ರತಿಷ್ಠೆ ಮಾಡಿದರೆ ಪತನ ಖಂಡಿತ: ರಾಘವೇಶ್ವರ ಶ್ರೀ

ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ 'ನವರಾತ್ರ ನಮಸ್ಯಾ' ಕಾರ್ಯಕ್ರಮದಲ್ಲಿ ರಾಘವೇಶ್ವರ ಶ್ರೀಗಳು ಮಾತನಾಡಿದ್ದಾರೆ. ಸಮುದ್ರ ಮಥನವಾಗಿ ಅಮೃತ ಬರುವ ಮೊದಲು ವಿಷವೂ ಬರಬಹುದು. ಅದನ್ನು ಸ್ವೀಕರಿಸಲು ನಂಜುಂಡನಾದ ಶಿವ ಬೇಕು. ಅಮೃತ ಬಂದಾಗ ಅದು ಅಸುರರಿಗೆ ಸಿಗದಿರಲು‌ ಮಹಾವಿಷ್ಣುವೂ ಬೇಕು ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು: ಮೋಹವೆಂಬುದು ದೇವಿಯ ಮಾಯೆಯಾಗಿದ್ದು, ಮಾಯೆಯು ಎಲ್ಲವನ್ನೂ ಮರೆಸಿಬಿಡುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು (Raghaveshwara Bharati Swamiji) ಹೇಳಿದರು. ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ 'ನವರಾತ್ರ ನಮಸ್ಯಾ' ಕಾರ್ಯಕ್ರಮದಲ್ಲಿ ಲಲಿತೋಪಾಖ್ಯಾನ ಪ್ರವಚನವನ್ನು ಶ್ರೀಗಳು ಭಾನುವಾರ ಅನುಗ್ರಹಿಸಿದರು.

ಸಮುದ್ರ ಮಥನವಾಗಿ ಅಮೃತ ಬರುವ ಮೊದಲು ವಿಷವೂ ಬರಬಹುದು. ಅದನ್ನು ಸ್ವೀಕರಿಸಲು ನಂಜುಂಡನಾದ ಶಿವ ಬೇಕು. ಅಮೃತ ಬಂದಾಗ ಅದು ಅಸುರರಿಗೆ ಸಿಗದಿರಲು‌ ಮಹಾವಿಷ್ಣುವೂ ಬೇಕು. ದೇವರೂ ರಾಕ್ಷಸರು ಅಮೃತಕ್ಕಾಗಿ ಯುದ್ಧದಲ್ಲಿ ತೊಡಗಿದ್ದಾಗ ಪ್ರತ್ಯಕ್ಷವಾದ ಮೋಹಿನಿಯು ಕೇವಲ ತನ್ನ ಉಪಸ್ಥಿತಿಯ ಮಾತ್ರದಿಂದ ಯುದ್ಧವನ್ನು ನಿಲ್ಲಿಸುತ್ತಾಳೆ. ಮೋಹದ ಜಾಲಕ್ಕೆ ಸಿಕ್ಕ ರಾಕ್ಷಸರು ಅಮೃತದಿಂದ ವಂಚಿತರಾಗುತ್ತಾರೆ ಎಂದರು.

Raghaveshwara Bharati Swamiji (5)

ಜೀವನದಲ್ಲಿ ತಲೆ ಪ್ರತಿಷ್ಠೆಯನ್ನು ಮಾಡಬಾರದು. ದೇವಾಸುರರು ಸಮುದ್ರ ಮಥನ ಮಾಡುವಾಗ ರಾಕ್ಷಸರು ತಮಗೆ ವಾಸುಕಿಯ ತಲೆಯ ಭಾಗವೇ ಬೇಕು ಎಂದು ಪಡೆದುಕೊಳ್ಳುತ್ತಾರೆ. ಆದರೆ ಮಥನ ಮಾಡುವಾಗ ವಾಸುಕಿಯ ಬಾಯಿಯಿಂದ ಬಂದ ವಿಷದ ಪರಿಣಾಮವಾಗಿ ರಾಕ್ಷಸರ ತೇಜಸ್ಸು ಕ್ಷಯಿಸುತ್ತದೆ. ಹಾಗಾಗಿ ನಾವು ಜೀವನದಲ್ಲಿ ತಲೆ ಪ್ರತಿಷ್ಠೆ ಮಾಡಿದರೆ ಪತನವನ್ನು ಹೊಂದುತ್ತೇವೆ ಎಂದು ಅಭಿಪ್ರಾಯಪಟ್ಟರು.

ಶಿವ - ವಿಷ್ಣು ಕಲಹ ಸಲ್ಲ: ಶಿವ ಹಾಗೂ ವಿಷ್ಣುವಿನ ಮಧ್ಯೆ ಯಾವುದೇ ಕಲಹವಿಲ್ಲ. ಆದರೆ ಇಂದು ಶೈವರು ಹಾಗೂ ವೈಷ್ಣವರ ಮಧ್ಯೆ ಕಲಹ ಮುಗಿಯುವುದೇ ಇಲ್ಲ. ಶಿವ ಹಾಗೂ ವಿಷ್ಣುವಿನ ಹೆಸರಿನಲ್ಲಿ ‌ಜಗಳ‌ ಸಾಗುತ್ತಲೇ ಇದೆ. ಬಹುಶಃ ದೇವ ಲೋಕದಲ್ಲಿರುವ ಅವರಿಬ್ಬರೂ ಈ ಜಗಳವನ್ನು ನೋಡಿ ನಗುತ್ತಿರಬಹುದು. ಹಾಗಾಗಿ ನಾವು ದೇವರ ಹೆಸರಿನಲ್ಲಿ ಜಗಳವಾಡಬಾರದು ಎಂದರು.

ಮಾಜಿ ಅಡ್ವೊಕೇಟ್ ಜನರಲ್ ಅಶೋಕ‌ ಹಾರನಹಳ್ಳಿ ದಂಪತಿಗಳು, ಅಶೋಕ ಭಟ್ ಉಪ್ಪುಂದ, ಪ್ರಭಾಕರ ಅಳಗೋಡು, ಹೇಮಂತ್ ಭಾಗ್ವತ್ ಮುಂತಾದವರು ಶ್ರೀಗಳ‌ ಆಶೀರ್ವಾದ ಪಡೆದರು.

Raghaveshwara Bharati Swamiji (6)

ಶತಚಂಡಿಕಾ ಮಹಾಯಾಗ:

ದೇವಿಯ ಉಪಾಸನೆಯ ಅಂಗವಾಗಿ ಅ.20ರಂದು ಶತಚಂಡಿಕಾ ಯಾಗ ನೆರವೇರಲಿದ್ದು, 100 ದೇವಿ ಸಪ್ತಶತೀ ಪಾರಾಯಣದ ಮೂಲಕ ಶತಚಂಡಿಕಾ ಯಾಗ ನೆರವೇರಲಿದೆ. ಪಾರಾಯಣ ಸೇರಿದಂತೆ ಈ ಮಹಾಯಾಗದಲ್ಲಿ 50 ಋತ್ವಿಜರು ಭಾಗವಹಿಸಲಿದ್ದಾರೆ. ವಿಶೇಷ ಹೋಮ ಕುಂಡ ಸೇರಿದಂತೆ ಯಾಗದ ಸಿದ್ಧತೆಗಳು ನಡೆದಿವೆ.